

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ರಾಜಕೀಯ ಸಲಹಾ ಸಂಸ್ಥೆ I -PAC ಮುಖಸ್ಥ ಪ್ರತೀಕ್ ಜೈನ್ ಮನೆ & ಕಚೇರಿ ಮೇಲೆ ಕೇಂದ್ರದ ಜಾರಿ ನಿರ್ದೇಶನಾಲಯದ ದಾಳಿ ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ(Mamata Banerjee), ಅಮಿತ್ ಶಾ ವಿರುದ್ಧ ಆರೋಪ ಮಾಡಿ, ಅದನ್ನು ಬಹಿರಂಗಪಡಿಸುವ ಎಚ್ಚರಿಕೆ ನೀಡಿದ್ದಾರೆ.
ಇಡಿ ದಾಳಿ ಖಂಡಿಸಿ ಶುಕ್ರವಾರ(ಜ. 09) ಕೋಲ್ಕತ್ತಾದ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ತೋರಿಸಿ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಲ್ಲಿದ್ದಲು ಹಗರಣದಲ್ಲಿ ಅಮಿತ್ ಶಾ ಪಾತ್ರದ ಬಗ್ಗೆ ತಮ್ಮ ಮತ್ತು ತಮ್ಮ ಸರ್ಕಾರದ ಮೇಲೆ ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಒತ್ತಡ ಹೆಚ್ಚಾದರೆ, ತಮ್ಮಲ್ಲಿರುವ ಪುರಾವೆಗಳನ್ನು ಬಹಿರಂಗಪಡಿಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ಕಲ್ಲಿದ್ದಿಲು ಹಗರಣಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಪೆನ್ಡ್ರೈವ್ಗಳಿವೆ. ನನ್ನ ನಿಲುವಿನ ಗೌರವದಿಂದ ನಾನು ಇಲ್ಲಿಯವರೆಗೆ ಮೌನವಾಗಿದ್ದೇನೆ. ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಿಮ್ಮ ಅಡಗುತಾಣವನ್ನು ನಾನು ಬಹಿರಂಗಪಡಿಸುತ್ತೇನೆ. ಅದನ್ನು ನೋಡಿದ್ರೆ ಇಡೀ ದೇಶ ಆಘಾತಕ್ಕೊಳಗಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಡಿ ತನಿಖೆಯಲ್ಲಿ ತಾವು ಹಸ್ತಕ್ಷೇಪ ಮಾಡಿದ್ದನ್ನು ಸಮರ್ಥಿಸಿಕೊಂಡ ಅವರು, ಶೋಧ ನಡೆಸುತ್ತಿದ್ದ ಅಧಿಕಾರಿಗಳಿಗೆ ಅಡ್ಡಿಪಡಿಸುವ ಮೂಲಕ ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷದ ಮುಖ್ಯಸ್ಥೆಯಾಗಿ ನಾನು ಅಲ್ಲಿಗೆ ಹೋಗಿದ್ದೇನೆ. ಕೆಲವೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ನಮ್ಮ ಪಕ್ಷದ ಕಾರ್ಯತಂತ್ರವನ್ನು ರಕ್ಷಿಸುವ ಹಕ್ಕು ತನಗೆ ಇದೆ ಎಂದು ಹೇಳಿದ್ದಾರೆ.
ಇಡಿ ತನಿಖೆ ಮಾಡುತ್ತಿರುವ ಕಲ್ಲಿದ್ದಿಲು ಹಗರಣದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಕ್ರಮ ಹಣ ಹೋಗಿದೆ. ಬಂಗಾಳದ ಬಿಜೆಪಿ ನಾಯಕ ಜಗನ್ನಾಥ್ ಸರ್ಕಾರ್ ಮೂಲಕ ಹಣ ಸೇರಿದೆ ಎಂದು ಆರೋಪಿಸಿದ್ದಾರೆ. ಜಗನ್ನಾಥ್ ಸರ್ಕಾರ್ರನ್ನು ಡಕಾಯಿತ ಎಂದು ಕರೆದಿರುವ ಮಮತಾ ಬ್ಯಾನರ್ಜಿ, ವಿಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ದೇಶದ್ರೋಹಿ, ಅಮಿತ್ ಶಾ ಅವರಿಗೆ ದೇವರು ಕೊಟ್ಟ ಹೊಸ ಮಗ ಎಂದು ವ್ಯಂಗ್ಯವಾಡಿದ್ದಾರೆ.
ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿರುವ ಇಡಿ ಗುರುವಾರ ಐ-ಪಿಎಸಿ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇದೇ ವೇಳೆ , ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಎರಡು ಕಚೇರಿಗಳಿಗೆ ಹೋದ ಮಮತಾ ಬ್ಯಾನರ್ಜಿ, ಕೆಲವು ಫೈಲ್ಗಳು ಮತ್ತು ಪೆನ್ಡ್ರೈವ್ಗಳೊಂದಿಗೆ ಹೊರಬಂದಿದ್ದರು. ಈ ಫೈಲ್ಗಳು ತಮ್ಮ ಪಕ್ಷದ ಚುನಾವಣಾ ತಂತ್ರಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿವೆ ಎಂದಿದ್ದರು (ಏಜೆನ್ಸೀಸ್).