ಇವಿಎಂ ಮಷಿನ್ನಲ್ಲಿ ತಾಳೆಯಾಗದ ಮತಗಳ ಸಂಖ್ಯೆ; ಸೋಲಿನ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂ.ಕೆ.ಸ್ಟಾಲಿನ್ | M K Stalin
ಮಾಜಿ ಸಿಎಂ ಎಂ.ಕೆ.ಸ್ಟಾಲಿನ್
Published on:
Copied
Follow Us
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್(M K Stalin) ಅವರು, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕೊಳತ್ತೂರ್ ಕ್ಷೇತ್ರದಿಂದ ಗೆದ್ದಿರುವ ಟಿವಿಕೆ ಶಾಸಕ ವಿ.ಎಸ್. ಬಾಬು ಅವರ ಗೆಲುವನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸೋಮವಾರ(ಆ. 24) ವರದಿಯಾಗಿದೆ.
ವಿವಿಪ್ಯಾಟ್, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗಳಲ್ಲಿ ದಾಖಲಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸ ಹಾಗೂ ವೈರುಧ್ಯಗಳಿರುವುದು, ಅಲ್ಲದೆ ಪರಿಶೀಲನೆ ವೇಳೆ ಇವಿಎಂಗಳಲ್ಲಿ ಕಂಡುಬಂದ ತಾಂತ್ರಿಕ ದೋಷಗಳನ್ನು ಅಧಿಕಾರಿಗಳು ಬಗೆಹರಿಸದ ಹಿನ್ನೆಲೆ ಮಾಜಿ ಸಿಎಂ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಬಳಸಲಾದ ಎಲ್ಲಾ 286 ಎಲೆಕ್ಟ್ರಾನಿಕ್ ಮತಯಂತ್ರಗಳ ಪರಿಶೀಲನೆ ಹಾಗೂ ವಿವಿಪ್ಯಾಟ್ ಸ್ಲಿಪ್‌ಗಳ ಶೇ.100ರಷ್ಟು ಎಣಿಕೆಯನ್ನು ನಿಗದಿತ ಸಮಯದೊಳಗೆ ನಡೆಸುವಂತೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಎಂ.ಕೆ.ಸ್ಟಾಲಿನ್ ಅರ್ಜಿಯಲ್ಲಿ ಕೋರಿದ್ದಾರೆ.
2026 ಮೇ 07ರಂದು ಸಲ್ಲಿಸಲಾದ ಅರ್ಜಿಯ ನಂತರ ಸುಮಾರು ಮೂರು ತಿಂಗಳ ವಿಳಂಬದೊಂದಿಗೆ, ಜುಲೈ 29ರಂದು ಮತಗಟ್ಟೆ ಸಂಖ್ಯೆ 1, 4, 17, 28, 32, 75, 78, 79, 84, 87, 112, 122, 157 ಮತ್ತು 170 ರ ವಿವಿಪಿಎಟಿ ಹಾಗೂ ಇವಿಎಂಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭವಾಯಿತು.
ಪರಿಶೀಲನೆಯ ಸಮಯದಲ್ಲಿ, ಮತಗಟ್ಟೆ ಸಂಖ್ಯೆ 28 ಮತ್ತು 75ರ ತಲಾ ಒಂದೊಂದು ವಿವಿಪಿಎಟಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು. ಮತ್ತು ಆ ತಾಂತ್ರಿಕ ದೋಷಕ್ಕೆ ಕಾರಣವೇನೆಂಬುದನ್ನು ಸರಿಯಾಗಿ ತಿಳಿಸಲಾಗಿಲ್ಲ. ಅಲ್ಲದೆ, 14 ಮತಗಟ್ಟೆಗಳಿಗೆ ಸಂಬಂಧಿಸಿದ ವಿವಿಪಿಎಟಿ ಮುದ್ರಿತ ಸ್ಲಿಪ್‌ಗಳು ಎಲ್ಲಿದ್ದಾವೆ ಎಂಬುದು ತಿಳಿದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮತಗಟ್ಟೆ ಸಂಖ್ಯೆ 79ರ ವಿಳಾಸದ ಟ್ಯಾಗ್‌ಗಳೊಂದಿಗೆ ಎರಡು ಬ್ಯಾಲೆಟ್ ಯೂನಿಟ್‌ಗಳು ಹೊಂದಿಕೆಯಾಗಲಿಲ್ಲ. ಮತಗಟ್ಟೆ ಸಂಖ್ಯೆ 208ರ ಇವಿಎಂ ಅನ್ನು ಪರಿಶೀಲನೆಗೆ ತೆಗೆದುಕೊಂಡಾಗ ಆತಂಕಕಾರಿ ಅಕ್ರಮವೊಂದು ಬೆಳಕಿಗೆ ಬಂದಿತು. ಸ್ಟಾಲಿನ್ ಅವರ ಹೆಸರನ್ನು ಹೊಂದಿದ್ದ ಮೊದಲ ಬ್ಯಾಲೆಟ್ ಯೂನಿಟ್ ಅನ್ನು ಕಂಟ್ರೋಲ್ ಯೂನಿಟ್ ಗುರುತಿಸಲಿಲ್ಲ ಎಂದಿದ್ದಾರೆ.
ಇಂತಹ ತಾಂತ್ರಿಕ ದೋಷಗಳಿಗೆ ಪ್ರತಿಕ್ರಿಯಿಸದೆ ಅಥವಾ ಅವುಗಳನ್ನು ಪರಿಹರಿಸದೆ, ಜಿಲ್ಲಾ ಚುನಾವಣಾಧಿಕಾರಿಯು ಪರಿಶೀಲನಾ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯಿತು ಎಂದು ಘೋಷಿಸಿದ್ದಾರೆ. ಅಲ್ಲದೆ, ತಮ್ಮ ಅಧಿಕೃತ ಪ್ರತಿನಿಧಿಯಾದ ವಕೀಲ ಎನ್.ಆರ್. ಇಳಂಗೋ ಅವರು ಈ ನಿರ್ಧಾರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಎಂದು ತಿಳಿಸಿದ್ದಾರೆ.
ವಿವಾದಿತ ಆದೇಶವನ್ನು ಯಾವುದೇ ಕಾರಣವಿಲ್ಲದೆ, ಯಾಂತ್ರಿಕವಾಗಿ ಮತ್ತು ಏಕಪಕ್ಷೀಯವಾಗಿ ಹೊರಡಿಸಲಾಗಿದೆ. ತಮ್ಮ ಅಧಿಕೃತ ಪ್ರತಿನಿಧಿಗೆ ವಾದವನ್ನು ಮಂಡಿಸಲು ಅವಕಾಶ ನೀಡದಿರುವುದರಿಂದ ಇದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ತಮ್ಮ ಹೆಸರನ್ನು ಹೊಂದಿದ್ದ ಬ್ಯಾಲೆಟ್ ಯೂನಿಟ್ ಅನ್ನು ಕಂಟ್ರೋಲ್ ಯೂನಿಟ್ ಗುರುತಿಸಿಲ್ಲ. ಇಂತಹ ಇನ್ನೂ ಎಷ್ಟು ಕಂಟ್ರೋಲ್ ಯೂನಿಟ್‌ಗಳು ಅಸ್ತಿತ್ವದಲ್ಲಿವೆ ಮತ್ತು ಎಷ್ಟು ಬ್ಯಾಲೆಟ್ ಯೂನಿಟ್‌ಗಳ ಲೆಕ್ಕ ಸಿಕ್ಕಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಚುನಾವಣಾಧಿಕಾರಿಯು ಈ ಲೋಪಕ್ಕೆ ಯಾವುದೇ ಕಾರಣ ಅಥವಾ ವಿವರಣೆಯನ್ನು ನೀಡಿಲ್ಲ. ಬಿಇಎಲ್ ಎಂಜಿನಿಯರ್‌ಗಳ ತಾಂತ್ರಿಕ ವರದಿಗಳನ್ನು ದಾಖಲೆಯಲ್ಲಿ ಮಂಡಿಸಿಲ್ಲ. ಇದು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಪಾರದರ್ಶಕ ಮತ್ತು ನಿಷ್ಪ್ರಯೋಜಕವನ್ನಾಗಿ ಮಾಡುತ್ತದೆ. ಹಾಗಾಗಿ ಇದನ್ನು ವಿಚಾರಣೆ ನಡೆಸುವಂತೆ ಕೋರಿದ್ದಾರೆ (ಏಜೆನ್ಸೀಸ್).