More

    ಗ್ರಾಪಂಗಳಲ್ಲಿ ನಗದು ರಹಿತ ವ್ಯವಹಾರ

    ಅವಿನ್ ಶೆಟ್ಟಿ ಉಡುಪಿ
    ಜಿಲ್ಲೆಯ 15 ಗ್ರಾಮ ಪಂಚಾಯಿತಿಗಳು ನಗದು ರಹಿತ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಕಳೆದ ಎರಡು ತಿಂಗಳಲ್ಲಿ ಈ ಗ್ರಾಪಂಗಳಲ್ಲಿ ಡಿಜಿಟಲ್ ಪಾವತಿ ಮೂಲಕ ವ್ಯವಹಾರ ನಡೆಯುತ್ತಿದೆ.

    ಕಳೆದ ವರ್ಷ ಕಾಡೂರು ಗ್ರಾಪಂನಲ್ಲಿ ಈ ಯೋಜನೆಯನ್ನು ಪೈಲಟ್ ಯೋಜನೆಯನ್ನಾಗಿ ಅನುಷ್ಠಾನಗೊಳಿಸಲಾಗಿದ್ದು, ಇಲ್ಲಿ ಶೇ.85ರಷ್ಟು ಡಿಜಿಟಲ್ ಪಾವತಿ ಮೂಲಕ ತೆರಿಗೆ ಸಂಗ್ರಹ ಹಾಗೂ ಬಿಲ್ ವಸೂಲಿ ಮಾಡುವುದರೊಂದಿಗೆ ಒಂದು ವರ್ಷದಲ್ಲಿ 7.5 ಲಕ್ಷ ರೂ. ಹಣ ಸಂಗ್ರಹಿಸಲಾಗಿತ್ತು. ಹೀಗೆ ಯಶಸ್ವಿಯಾಗಿರುವ ಈ ಯೋಜನೆಯನ್ನು ಮೊದಲ ಹಂತದಲ್ಲಿ ಕಾಡೂರು ಸೇರಿದಂತೆ 15 ಗ್ರಾಪಂಗಳಿಗೆ ವಿಸ್ತರಿಸಲಾಗಿದೆ.
    ಆ್ಯಪ್‌ನಲ್ಲಿರುವ ಸೌಲಭ್ಯಗಳು: ಮನೆ ತೆರಿಗೆ, ನೀರಿನ ಬಿಲ್, ಉದ್ಯಮ ಪರವಾನಗಿ ಶುಲ್ಕ ಪಾವತಿಗೆ ಅವಕಾಶವಿದೆ. ಮುಂದೆ ಈ ಆ್ಯಪ್‌ನಲ್ಲಿ ಕಟ್ಟಡ ಅನುಮತಿ, ಆದಾಯ ಪತ್ರ, 9/11 ಪತ್ರ, ಅಂಗಡಿ ಬಾಡಿಗೆ, ಜಾತಿ ಪತ್ರ, ರೇಷನ್ ಕಾರ್ಡ್, ಆಧಾರ್ ಶುಲ್ಕ, ಮನೆಗಳಿಗೆ ಎಸ್‌ಎಲ್‌ಆರ್‌ಎಂ ಶುಲ್ಕ, ಎನ್‌ಒಸಿ, ಕಟ್ಟಡ ಅನುಮತಿ ಸೌಲಭ್ಯ ಕೂಡ ನೀಡಲಾಗುತ್ತದೆ. ಈ ಯುವ ಆ್ಯಪ್‌ನಲ್ಲಿ ಇಂಟರ್‌ನೆಟ್ ಸಹಿತ/ರಹಿತ ಸ್ಮಾರ್ಟ್ ಮತ್ತು ಫೀಚರ್ ಫೋನ್‌ಗಳಲ್ಲಿ ಮನೆ ತೆರಿಗೆ, ಬಿಲ್‌ಗಳನ್ನು ಡಿಜಿಟಲ್ ರೂಪದಲ್ಲಿ ಪಾವತಿ ಮಾಡಬಹುದಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಈ ಯೋಜನೆಯನ್ನು ಎರಡನೆ ಹಂತದಲ್ಲಿ ಅಕ್ಟೋಬರ್ ಅಂತ್ಯದೊಳಗೆ ಉಳಿದ 143 ಗ್ರಾಪಂಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ.
    ಯಾವ್ಯಾವ ಪಂಚಾಯಿತಿಗಳು?: ಉಡುಪಿ ತಾಲೂಕು ಆರೂರು, ಕುಕ್ಕೆಹಳ್ಳಿ, ಕಾಡೂರು, ಇನ್ನಂಜೆ, ಚೇರ್ಕಾಡಿ, ಹಾವಂಜೆ, ಕುಂದಾಪುರ ತಾಲೂಕಿನ ಕುಂಭಾಶಿ, ಹೊಸಾಡು, ತ್ರಾಸಿ, ಮರವಂತೆ, ವಂಡ್ಸೆ, ಕಾರ್ಕಳ ತಾಲೂಕಿನ ವರಂಗ, ಎರ್ಲಪಾಡಿ, ಮುಂಡ್ಕೂರು, ಕಡ್ತಲ ಗ್ರಾಪಂಗಳಲ್ಲಿ ಜೂನ್ 20ರಿಂದ ಯುವ ಪೇ ಆ್ಯಪ್ ಮೂಲಕ ಡಿಜಿಟಲ್ ಪಾವತಿ ಆರಂಭಿಸಲಾಗಿದೆ. ಇವುಗಳ ಪೈಕಿ ಕುಕ್ಕೆಹಳ್ಳಿ ಗ್ರಾಪಂನಲ್ಲಿ ಅತಿಹೆಚ್ಚು ಡಿಜಿಟಲ್ ಪಾವತಿ ಮೂಲಕ ತೆರಿಗೆ ಬಿಲ್ ಸಂಗ್ರಹ ನಡೆಯುತ್ತಿದೆ.

    ಡಿಜಿಟಲ್ ಪಾವತಿಗೆ ಜನರ ಸಹಕಾರ ಉತ್ತಮವಾಗಿದ್ದು, ಮುಖ್ಯವಾಗಿ ತೆರಿಗೆ ವಸೂಲಾತಿಗೆ ಅನುಕೂಲವಾಗಿದೆ. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಪಂಚಾಯಿತಿಗೆ ಮತ್ತು ಸಾರ್ವಜನಿಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಡಿಜಿಟಲ್ ಪಾವತಿ ಬಗ್ಗೆ ಜನರಿಗೆ ಇನ್ನಷ್ಟು ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ಕಾರ್ಯವನ್ನು ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಈ ಕುರಿತ ಕರಪತ್ರವನ್ನು ಹಂಚಲಾಗುತ್ತಿದೆ.
    ಪ್ರಮೀಳ ನಾಯಕ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಎರ್ಲಪಾಡಿ ಗ್ರಾ.ಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts