More

    ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡದ ವಿವಿ! ; ಬೇರೆಲ್ಲ ವಿವಿಗಳಿಗಿಂತ ತುಮಕೂರು ವಿವಿ ಅತಿಹೆಚ್ಚು ಕ್ರೀಡಾಶುಲ್ಕ ವಸೂಲಿ

    ತುಮಕೂರು: ವಿಶ್ವವಿದ್ಯಾಲಯ ಕ್ರೀಡಾ ಚಟುವಟಿಕೆ ಮೇಲೆ ಕವಿದಿರುವ ಕರೊನಾ ಕಾರ್ಮೋಡ ಇನ್ನೂ ಸರಿದಿಲ್ಲ. ರಾಜ್ಯದ ಬೇರೆಲ್ಲ ವಿಶ್ವವಿದ್ಯಾಲಯಗಳಿಗಿಂತ ಅತಿ ಹೆಚ್ಚು ಕ್ರೀಡಾಶುಲ್ಕ ಸಂಗ್ರಹಿಸುವ ತುಮಕೂರು ವಿವಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ 3 ವರ್ಷಗಳಿಂದ ಕ್ರೀಡಾ ಸಮವಸ್ತ್ರ ನೀಡಿಲ್ಲ!

    2017-18, 2018-2019, 2019-20ನೇ ಸಾಲಿನಲ್ಲಿ ಅಖಿಲ ಭಾರತ ವಿವಿ ಮಟ್ಟದ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಕ್ರೀಡಾಪಟುಗಳಿಗೆ ಬ್ಲೇಜರ್, ಟ್ರಾೃಕ್ ಶೂಟ್ ಒಳಗೊಂಡ ಕ್ರೀಡಾ ಸಮವಸ್ತ್ರ ನೀಡದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿವಿ ಕುಲಪತಿಗೂ ಕ್ರೀಡಾಪಟುಗಳು ಹಲವು ಬಾರಿ ಮನವಿ ಮಾಡಿದ್ದರೂ ಕ್ರೀಡೆಗೆ ಪ್ರೋತ್ಸಾಹ ನೀಡುವ ಮನಸ್ಸು ಮಾತ್ರ ವಿವಿ ಆಡಳಿತ ಮಂಡಳಿ ಈವರೆಗೆ ಮಾಡಿಲ್ಲ.

    500, 1000 ರೂ., ಕ್ರೀಡಾಶುಲ್ಕ !: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯವುಳ್ಳ ಬೆಂಗಳೂರು ವಿವಿಯಲ್ಲೇ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕ್ರೀಡಾಶುಲ್ಕ 500 ರೂ., ವಿಧಿಸಲಾಗುತ್ತಿದೆ. ಆದರೆ ತುಮಕೂರು ವಿವಿ ಬಿ.ಎ., ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ 500 ರೂ., ಹಾಗೂ ಬಿ.ಕಾಂ. ವಿದ್ಯಾರ್ಥಿಗಳಿಂದ 1000 ರೂ. ಕ್ರೀಡಾಶುಲ್ಕ ವಸೂಲಿ ಮಾಡುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿರುವ, ಯಾವುದೇ ಕ್ರೀಡಾ ಸೌಲಭ್ಯಗಳಿಲ್ಲದ ತುಮಕೂರು ವಿವಿಯಲ್ಲಿ ಕ್ರೀಡಾಶುಲ್ಕ ವಸೂಲಿ, ಬಳಕೆಯಲ್ಲೂ ಮೋಸದಾಟ ನಡೆದಿರುವುದನ್ನು ಈ ಹಿಂದೆಯೇ ತಿಪಟೂರು ಮೂಲದ ರಾಷ್ಟ್ರೀಯ ವಾಲಿಬಾಲ್ ರೆಫ್ರಿ ಎಂ.ಬಿ.ಲೋಕೇಶ್ ಆರ್‌ಟಿಐನಲ್ಲಿ ಪತ್ತೆ ಹಚ್ಚಿದ್ದರು. ಅಲ್ಲದೆ, 2016ರಲ್ಲಿ ಲೋಕಾಯುಕ್ತಕ್ಕೂ ಈ ಬಗ್ಗೆ ದೂರು ನೀಡಿದ್ದರು. ಪ್ರತಿವರ್ಷ 2 ರಿಂದ 3 ಕೋಟಿ ರೂ. ಕ್ರೀಡಾಶುಲ್ಕ ವಿವಿಗೆ ಜಮೆ ಆಗುತ್ತಿದೆ. ಆದರೆ, ಕ್ರೀಡಾಚಟುವಟಿಕೆಗೆ 10 ರಿಂದ 15 ಲಕ್ಷ ರೂ., ಮಾತ್ರ ಬಳಕೆ ಮಾಡಲಾಗುತ್ತಿದೆ. ಇನ್ನು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಕ್ರೀಡಾಚಟುವಟಿಕೆಗೆ ಅನುದಾನವನ್ನೇ ಬಳಸುತ್ತಿಲ್ಲ ಎನ್ನಲಾಗಿದೆ.

    ಕರೊನಾ ನೆಪ: ಕರೊನಾ ನೆಪವೊಡ್ಡಿ 2020-21ರ ಸಾಲಿನಲ್ಲಿ ವಿವಿಯಲ್ಲಿ ಕ್ರೀಡೆಗೆ ತಿಲಾಂಜಲಿ ಹಾಡಲಾಗಿದೆ. ಜನವರಿಯಲ್ಲಿ ಆರಂಭವಾಗಿರುವ ಪಿಯು ಕಾಲೇಜುಗಳಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿ ಕ್ರೀಡೆಗೆ ಒತ್ತು ಕೊಡಲಾಗುತ್ತಿದೆ. ಕಳೆದ ನವೆಂಬರ್‌ನಲ್ಲೇ ಅಂತಿಮ ಪದವಿ ಕಾಲೇಜುಗಳು, ನಂತರ ಎಲ್ಲ ಪದವಿ, ಸ್ನಾತಕ ಪದವಿ ಕಾಲೇಜುಗಳು ಪ್ರಾರಂಭವಾಗಿದ್ದರೂ ಇನ್ನು ಕ್ರೀಡಾಚಟುವಟಿಕೆಗಳನ್ನು ವಿವಿ ಆರಂಭಿಸಿಲ್ಲ. ಕ್ರೀಡೆ ಬಗ್ಗೆ ಸರ್ಕಾರ ಹಾಗೂ ವಿವಿ ತೋರುತ್ತಿರುವ ತಾತ್ಸಾರದಿಂದ ಕ್ರೀಡೆಯಿಂದ ವಿದ್ಯಾರ್ಥಿಗಳು ವಿಮುಖವಾಗುವಂತೆ ಮಾಡಿದೆ.

    ಕಳೆದ 3 ವರ್ಷ ಅಖಿಲ ಭಾರತ ವಿವಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ‘ಕ್ರೀಡಾ ಸಮವಸ್ತ್ರ ’ವನ್ನೇ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಕ್ರೀಡಾಕೂಟದಲ್ಲಿ ಸಮವಸ್ತ್ರವಿಲ್ಲದೆ ಭಾಗವಹಿಸುವುದು ವಿವಿಯ ಘನತೆಗೆ ಕುಂದು ತರಲಿದೆ. ಟಿಎ, ಡಿಎ ಕೊಡಲಾಗುತ್ತದೆ. ಕ್ರೀಡಾಸಮವಸ್ತ್ರ ಕೊಡಲು ವಿವಿಯಲ್ಲಿ ಹಣ ಏಕಿಲ್ಲ.
    ನೊಂದ ಕ್ರೀಡಾಪಟುಗಳು, ಅಖಿಲ ಭಾರತ ವಿವಿ ಕ್ರೀಡಾಕೂಟ ಪ್ರತಿನಿಧಿಸಿದ್ದವರು

    ಅಖಿಲ ಭಾರತ ವಿವಿ ಕ್ರೀಡಾಕೂಟದಲ್ಲಿ ನಮ್ಮ ವಿವಿಯ ಕ್ರೀಡಾಪಟುಗಳ ಭಾಗವಹಿಸುತ್ತಾರೆ. ಇವರಿಗೆ ಟಿಎ, ಡಿಎ ನೀಡಲಾಗುವುದು. ಕರೊನಾ ಕಾರಣದಿಂದ 2019-20ನೇ ಸಾಲಿನಲ್ಲಿ ಕ್ರೀಡಾಸಮವಸ್ತ್ರ ನೀಡಲಾಗಿಲ್ಲ. ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ (ಎಐಯು) ಹಾಗೂ ಸರ್ಕಾರ ಇನ್ನೂ ಕ್ರೀಡಾ ಚಟುವಟಿಕೆಗಳ ವೇಳಾಪಟ್ಟಿ ನೀಡಿಲ್ಲ. ಹಾಗಾಗಿ, ಯಾವುದೇ ಕ್ರೀಡಾಚಟುವಟಿಕೆಗಳನ್ನು ಇನ್ನೂ ನಡೆಸುತ್ತಿಲ್ಲ.
    ಸುದೀಪ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ, ತುಮಕೂರು ವಿವಿ

    ವಿವಿಯಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಕ್ರೀಡಾಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿವಿ ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಗಳೇ ಇಲ್ಲ. ಬೇರೆಲ್ಲ ವಿವಿಗಳಿಗಿಂತ ಅತಿಹೆಚ್ಚು ಕ್ರೀಡಾಶುಲ್ಕ ಮಾತ್ರ ವಸೂಲಿ ಮಾಡಲಾಗುತ್ತದೆ. ಇನ್ನು ಅಖಿಲ ಭಾರತ ವಿವಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನೇ ನೀಡಿಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಂಡುಕೊಳ್ಳುವ ಶಕ್ತಿ ಇಲ್ಲ.
    ಎಚ್.ಎನ್.ಪ್ರತಾಪ್‌ಸಿಂಹ , ಎಬಿವಿಪಿ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts