More

    ಬಿಜೆಪಿ ನಾಯಕರಿಗೆ ಆಯ್ಕೆಯ ಸವಾಲು

    ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ

    ಬಹು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನ ನಿಗದಿಯಾಗುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಬಹುಮತ ಇರುವುದರಿಂದ ಕಮಲ ಪಡೆಯಲ್ಲಿ ಆಕಾಂಕ್ಷಿಗಳ ದಂಡು ಇದ್ದು, ಶಾಸಕರಿಗೆ ಹಾಗೂ ಪಕ್ಷದ ಮುಖಂಡರಿಗೆ ಯಾರನ್ನು ಆಯ್ಕೆ ಮಾಡುವುದು ಎಂಬುದು ಕಗ್ಗಂಟಾಗಿ ಪರಿಣಮಿಸಿದೆ.

    ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. ಆಕಾಂಕ್ಷಿಗಳು ತಮ್ಮ ಪಕ್ಷದ ಮುಖಂಡರ ಒಲವು ಗಳಿಸಲು ಮುಂದಾಗಿದ್ದಾರೆ. ಪಕ್ಷ ನಿಷ್ಠೆ, ರಾಜ್ಯಮಟ್ಟದ ನಾಯಕರ ಶಿಫಾರಸು, ಜಾತಿ ಪ್ರಭಾವ ಸೇರಿದಂತೆ ಹಲವು ತಂತ್ರಗಾರಿಕೆಗಳನ್ನು ಬಳಸುತ್ತಿದ್ದಾರೆ.

    ಪುರಸಭೆಗೆ ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಸದಸ್ಯರು ಅಧಿಕಾರ ವಂಚಿತರಾಗಿದ್ದರು. ಈ ಹಿಂದೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆ ಮೀಸಲಾಗಿತ್ತು. ಆಗ ಸಚಿವ ಬಿ.ಸಿ. ಪಾಟೀಲ ಸಹೋದರ ಸಂಬಂಧಿ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲರ ಪುತ್ರ ಬಾಲಚಂದ್ರಗೌಡ್ರ ಪಾಟೀಲ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿತ್ತು. ಈಗ ಮೀಸಲಾತಿ ಬದಲಾಗಿ ಅಧ್ಯಕ್ಷ ಸ್ಥಾನ ಪಾಟೀಲರ ಕೈತಪ್ಪಿದೆ. ಸದ್ಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಿದೆ.

    ಪುರಸಭೆಯ 23 ಸದಸ್ಯರ ಪೈಕಿ 17 ಬಿಜೆಪಿ ಹಾಗೂ 6 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿಯ 17 ಸದಸ್ಯರ ಪೈಕಿ 13 ಜನ ಬಿಜೆಪಿ ಟಿಕೆಟ್ ಪಡೆದು ಆಯ್ಕೆಯಾದರೆ, 4 ಸದಸ್ಯರು ಟಿಕೆಟ್ ವಂಚಿತರಾಗಿ, ಪಕ್ಷೇತರರಾಗಿ ವಿಜಯಮಾಲೆ ಧರಿಸಿ ಬಿಜೆಪಿಗೆ ಸೇರ್ಪಡೆಗೊಂಡವರು.

    ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಫಕೀರಮ್ಮ ಚಲವಾದಿ, ಕವಿತಾ ಸೊಪ್ಪಿನಮಠ ಹಾಗೂ ಸರೋಜಾ ಉಳ್ಳಾಗಡ್ಡಿ ಈ ಮೂವರಲ್ಲಿ ತೀವ್ರ ಪೈಪೋಟಿಯಿದೆ. ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಮಲ್ಲಮ್ಮ ಪಾಟೀಲ ಕೂಡ ತಮಗೂ ಅವಕಾಶ ಕಲ್ಪಿಸುವಂತೆ ಪಕ್ಷದ ಮುಖಂಡರಲ್ಲಿ ಮನವಿ ಮಾಡುತ್ತಿದ್ದಾರೆ.

    ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅ ವರ್ಗದ ಮಹಿಳೆಗೆ ಮೀಸಲಾಗಿದ್ದು, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ ಅವರಿಗೆ ಮಾತ್ರ ಅವಕಾಶವಿದೆ. ಈ ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆಯಿದೆ.

    ನ. 6ರಂದು ಚುನಾವಣೆ ನಿಗದಿಯಾದ ಪರಿಣಾಮ ನ. 4 ಹಾಗೂ 5ರಂದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ಆಯ್ಕೆ ನಡೆಯುವುದಾಗಿ ತಿಳಿದುಬಂದಿದೆ. ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಆಯ್ಕೆ ಅಂತಿಮಗೊಳಿಸಬೇಕಿದೆ. ಒಂದು ವೇಳೆ ಆಯ್ಕೆ ಸಮಯದಲ್ಲಿ ಭಿನ್ನಾಭಿಪ್ರಾಯ, ಗೊಂದಲ ಉಂಟಾದಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡುವ ಸಾಧ್ಯತೆಯಿದೆ.

    ಚುನಾವಣೆ 6ರಂದು: ಬ್ಯಾಡಗಿ ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಅ. 6ರಂದು ನಡೆಯಲಿದೆ. ಅಂದು ಬೆಳಗ್ಗೆ 10ರಿಂದ ನಾಮಪತ್ರ ಸಲ್ಲಿಸುವುದು, 12 ಗಂಟೆಯಿಂದ 12.15ರವರೆಗೆ ನಾಮಪತ್ರ ಪರಿಶೀಲನೆ, 12.30ರವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ಹಾಗೂ ಮಧ್ಯಾಹ್ನ 1 ಗಂಟೆಗೆ ಚುನಾವಣೆ ಜರುಗಲಿದೆ ಎಂದು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ರವಿ ಕೊರವರ ಪ್ರಕಟಣೆಯಲ್ಲಿ ತಿಳಿದ್ದಾರೆ.

    ಪಕ್ಷದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಜಕೀಯದಲ್ಲಿ ಅಧಿಕಾರದ ಗದ್ದುಗೆ ಏರಲು ಪೈಪೋಟಿ ಸಹಜ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆಗೊಳಿಸಲು ಮಾಜಿ ಶಾಸಕರು, ಪಕ್ಷದ ಮುಖಂಡರು ಒಟ್ಟಿಗೆ ಕುಳಿತು, ಸಾಧಕ- ಬಾಧಕಗಳನ್ನು ಪರಿಶೀಲಿಸಿ ಯಾರಿಗೂ ನೋವಾಗದಂತೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ.

    | ವಿರೂಪಾಕ್ಷಪ್ಪ ಬಳ್ಳಾರಿ

    ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts