More

    ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು : ಅಪರ ಜಿಲ್ಲಾಧಿಕಾರಿ ಅಮರೇಶ್ ಅಭಿಮತ 

    ಚಿಕ್ಕಬಳ್ಳಾಪುರ: ನೆಮ್ಮದಿ ಜೀವನ ನಡೆಸಲು ಆರೋಗ್ಯವೇ ಮುಖ್ಯ. ಮನುಷ್ಯ ಗಳಿಸಬೇಕಾದ ನಿಜವಾದ ಸಂಪತ್ತು ಕೂಡಾ ಇದೆ, ಆದರೆ ಬಹುತೇಕರು ಕೆಲಸದ ಒತ್ತಡದಿಂದಾಗಿ ಆರೋಗ್ಯ ಕಡೆಗೆ ಸಮರ್ಪಕವಾಗಿ ಗಮನಹರಿಸುತ್ತಿಲ್ಲ ಎಂದು ಬೇಸರಿಸಿದ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ನಿರ್ಲಕ್ಷ್ಯದ ಮನೋಭಾವನೆಯಿಂದ ಹೊರಬಂದು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂಬ ಸಲಹೆಯಿತ್ತರು.

    ಇಂಡಿಯನ್ ಮೆಡಿಕಲ್ ಅಸೋಸಿಯೇಷ್‌ನ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಭಾನುವಾರ ಹಮ್ಮಿಕೊಂಡಿದ್ದ ಮಾರಕ ಕ್ಯಾನ್ಸರ್ ಅರಿವು ಸೈಕಲ್ ಜಾಥಾಗೆ ನಗರದ ಅಂಬೇಡ್ಕರ್ ಭವನದ ಎದುರು ಚಾಲನೆ ನೀಡಿ ಮಾತನಾಡಿದರು.

    ಪಾಲಕರು ಸ್ವಯಂ ಆರೋಗ್ಯ ರಕ್ಷಣೆಯ ಜತೆಗೆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು. ಒಳ್ಳೆಯ ಹವ್ಯಾಸಗಳನ್ನು ಮೈಗೂಢಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಬಾಲ್ಯದಿಂದಲೇ ದೈಹಿಕ ಮತ್ತು ಮಾನಸಿಕ ಸದೃಢತೆ ಕಾಪಾಡಿಕೊಳ್ಳುವುದು ಅಗತ್ಯ ಎಂದರು.

    ಆರೋಗ್ಯ, ಶಿಕ್ಷಣ ಸೇರಿ ಇತರ ಕ್ಷೇತ್ರಗಳ ಮೂಲಕ ಸಾಮಾಜಿಕ ಸುಧಾರಣೆಗಾಗಿ ಸರ್ಕಾರದ ಜತೆಗೆ ಸ್ವಯಂಸೇವಾ ಸಂಸ್ಥೆಗಳು ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ಕೈಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

    ಲಯನ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷರಾದ ಲಕ್ಷ್ಮಣ್, ಭದ್ರಾಚಲಂ, ಎಲ್‌ಸಿಐಎಫ್ ಸಂಘಟಕರಾದ ಎನ್.ರಘುರಾಮ್, ಚಂದ್ರಪ್ಪ, ಮಾರ್ಕೆಟಿಂಗ್ ಮತ್ತು ಸಂವಹನ ಕಾರ್ಯದರ್ಶಿ ಜಿ.ಕಾಂತರಾಜ್, ಮುಖಂಡರಾದ ಮಲ್ಲನ್ನ, ಕೆ.ಪಿ.ಶ್ರೀನಿವಾಸಮೂರ್ತಿ, ಜ್ಞಾನೇಂದ್ರರೆಡ್ಡಿ, ವೈ.ಎನ್. ರಾಮಚಂದ್ರ, ಕೆ.ಎಚ್.ವೆಂಕಟಪ್ಪ, ಸುನೀಲ್ ಮತ್ತಿತರರು ಇದ್ದರು.

    ಆರಂಭದಲ್ಲಿ ನಿರ್ಲಕ್ಷ್ಯ ಬೇಡ!: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ವ್ಯಾಪಕವಾಗುತ್ತಿವೆ. ಹಲವರು ಬಗೆಬಗೆಯ ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕರು ಆರಂಭದಲ್ಲೇ ಚಿಕಿತ್ಸೆ ಪಡೆಯದೆ, ಗಂಭೀರ ಹಂತಕ್ಕೆ ಹೋದಾಗ ವೈದ್ಯರ ಬಳಿಗೆ ಬರುವಂತಹುದು ಹೆಚ್ಚಾಗುತ್ತಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ಪ್ರಶಾಂತ ಎಸ್.ಮೂರ್ತಿ ಬೇಸರಿಸಿದರು. ರೋಗಲಕ್ಷಣಗಳು ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ವಾಸಿಯಾಗಲಿದೆ. ಈ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

    ಸೈಕಲ್ ಜಾಥಾ, ದಂತ ತಪಾಸಣೆ: ಜನರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರು ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ಹೊರಟರು. ಇದೇ ವೇಳೆ ರೋಗದ ಲಕ್ಷಣಗಳು, ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಮತ್ತೊಂದೆಡೆ ದಂತ ಸಮಸ್ಯೆ ತಪಾಸಣೆ ಶಿಬಿರ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಜನರು ನುರಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts