More

    ಕಾಲುವೆಯಲ್ಲಿ ಗಿಡಗಂಟಿ ಸ್ವಚ್ಛಗೊಳಿಸಿದ ರೈತರು: ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತು ಶ್ರಮದಾನ

    ಮದ್ದೂರು: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕಾಲುವೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ 15 ರೈತರು ತಾವೇ ಸೇರಿಕೊಂಡು ಒಂದೂವರೆ ಕಿ.ಮೀ.ದೂರದ ಕಾಲುವೆಯನ್ನು ಸ್ವಚ್ಛ ಮಾಡಿ ಗಮನ ಸೆಳೆದಿದ್ದಾರೆ.
    ತಾಲೂಕಿನ ಕೊಪ್ಪ ಹೋಬಳಿಯ ಚಿಕ್ಕದೊಡ್ಡಿ ಗ್ರಾಮದ ರೈತರು ಕಾಲುವೆಯನ್ನು ಸ್ವಚ್ಛ ಮಾಡಿದರು. ಗೂಳೂರು ಕೆರೆಯಿಂದ ಬಿದರಕೋಟೆ ಪಿಕಪ್ ನಾಲೆವರೆಗೆ 5 ವರ್ಷಗಳಿಂದ ಗಿಡಗಂಟಿಗಳು ಬೆಳೆದುಕೊಂಡಿದ್ದ ಪರಿಣಾಮ ಕೆರೆಯಿಂದ ನೀರು ಸಮರ್ಪಕವಾಗಿ ಜಮೀನುಗಳಿಗೆ ಹರಿಯದೆ ನೂರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ಸಮಸ್ಯೆಯಾಗಿತ್ತು. ಇದರಿಂದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ಬೆಳೆದ ಬೆಳೆಗಳು ಕೂಡ ನೀರಿಲ್ಲದೆ ಒಣಗಿ ಹೋಗುತ್ತಿತ್ತು. ಈ ಸಂಬಂಧ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಲಿಲ್ಲ.
    ಇದ್ದರಿಂದ ಬೇಸತ್ತ ಚಿಕ್ಕದೊಡ್ಡಿ ಗ್ರಾಮದ ರೈತರಾದ ಶಿವಕುಮಾರ್, ಬಿ.ರಮೇಶ್, ಗೋವಿಂದೇಗೌಡ, ಸಿ.ಜೆ.ರವಿ, ಗವಿಸಿದ್ದೇಗೌಡ, ಭೈರೇಗೌಡ, ರಘು ಸೇರಿದಂತೆ 15ಕ್ಕೂ ಹೆಚ್ಚು ರೈತರು ಕಾಲುವೆಗೆ ಇಳಿದು ಕುಡುಗೋಲು, ಗುದ್ದಲಿಯನ್ನು ಹಿಡಿದು ಬೆಳಗ್ಗೆಯಿಂದ ಸಂಜೆವರೆಗೆ ಸುಡುಬಿಸಿನಲ್ಲೂ ಕೆಲಸ ಮಾಡಿ ಕಾಲುವೆಯಲ್ಲಿದ್ದ ಗಿಡಗಂಟಿಗಳು, ಇತರ ವಸ್ತುಗಳನ್ನು ತೆರವುಗೊಳಿಸಿ ಕೆರೆಯಿಂದ ಕಾಲುವೆ ಮೂಲಕ ನೀರು ಸಮರ್ಪಕವಾಗಿ ಹರಿಯುವಂತೆ ಮಾಡಿದರು.
    ಮುಂದಾದರೂ ಕ್ರಮ ಕೈಗೊಳ್ಳಿ: ಮದ್ದೂರು ತಾಲೂಕಿನ ಬಹುತೇಕ ನಾಲೆಗಳನ್ನು, ಕಾಲುವೆಗಳನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಗಿಡಗಂಟಿಗಳನ್ನು ತೆರವುಗೊಳಿಸಿ, ಸ್ವಚ್ಛ ಮಾಡದ ಕಾರಣ ಕೊನೇ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಈ ಸಂಬಂಧ ಮುಂದಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮಕೈಗೊಂಡು ಗಿಡಗಂಟಿಗಳನ್ನು ತೆರವುಗೊಳಿಸವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.
    ತಾಲೂಕು ರೈತ ಸಂಘ ಕಾರ್ಯಾಧ್ಯಕ್ಷ ಶಿವಕುಮಾರ್ ಮಾತನಾಡಿ, ಗೂಳೂರು ಕೆರೆಯಿಂದ ಬಿದರಕೋಟೆ ಪಿಕಪ್ ನಾಲೆವರೆಗೆ ಇರುವ ಒಂದೂವರೆ ಕಿ.ಮೀ.ದೂರದ ಕಾಲುವೆಯನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ರೈತರೇ ಸ್ವತಃ ಕಾಲುವೆಗೆ ಇಳಿದು ಸ್ವಚ್ಛ ಮಾಡಿ ಗಿಡಗಂಟಿಗಳನ್ನು ತೆರವು ಮಾಡಲಾಗಿದೆ. 4 ಕಿ.ಮೀ. ದೂರ ಕಾಲುವೆಯನ್ನು ಸ್ವಚ್ಛ ಮಾಡಬೇಕು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts