More

    ಹಳೇ ಶಾಲೆ ಹೊಸ ಲುಕ್! ಕ್ಯಾಂಪಸ್ ಟು ಕಮ್ಯುನಿಟಿ ತಂಡದ ಚಮಕ್

    ಶಾಲೆಗಳು ಮಕ್ಕಳಿಗೆ ಕನಸಿನ ಲೋಕವಾಗಿರಬೇಕು. ಪ್ರತಿದಿನ ‘ಅಯ್ಯೋ ಶಾಲೆಗೆ ಹೋಗಬೇಕಲ್ಲಾ’ ಎನ್ನುವ ಬದಲು ‘ಎಷ್ಟೊತ್ತಿಗೆ ಶಾಲೆಗೆ ಹೊರಡಲಿ’ ಎಂದು ಕಾಯಬೇಕು ಎನ್ನುವ ಗುರಿ ಇಟ್ಟು ಕೊಂಡು ರೂಪುಗೊಂಡ ತಂಡ ಕ್ಯಾಂಪಸ್ ಟು ಕಮ್ಯುನಿಟಿ. ಹಳೇ ಶಾಲೆಗಳನ್ನು ಹುಡುಕಿ, ಆಕರ್ಷಕ ಬಣ್ಣ ಬಳಿದು ಹೊಸ ಲುಕ್ ನೀಡುವುದಲ್ಲದೆ; ಹಳೇ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಮೂಲಕ ಶಾಲೆಯ ಅಭಿವೃದ್ಧಿ ಕೆಲಸವನ್ನು ಈ ಯುವ ತಂಡ ಮಾಡುತ್ತಿದೆ.

    | ರಘು ಪೂಜಾರಿ

    ಕ್ಯಾಂಪಸ್ ಟು ಕಮ್ಯುನಿಟಿ ತಂಡ ಕಳೆದ ಮೂರು ವರ್ಷಗಳಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಬಣ್ಣಗಳ ಚಿತ್ತಾರ ಬಳಿದು ಹೊಸ ರೂಪವನ್ನು ನೀಡುತ್ತಿದೆ. ಈ ಬಾರಿ ತಂಡದ ಸ್ಕೂಲ್ ಬೆಲ್ ಅಭಿಯಾನದ ಭಾಗವಾಗಿ ಆಯ್ಕೆ ಮಾಡಿಕೊಂಡಿದ್ದು ದಕ್ಷಿಣ ಕನ್ನಡದ ಪುತ್ತೂರು ತಾಲ್ಲೂಕಿನ ಆನಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು. ಈ ಶಾಲೆಗೆ 65 ವರ್ಷಗಳ ಇತಿಹಾಸವಿದ್ದು, ಪ್ರಸ್ತುತ 84 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ವಿವಿಧ ಚಿತ್ರಕಲಾ ಕಾಲೇಜುಗಳ ವಿದ್ಯಾರ್ಥಿಗಳು, ಹವ್ಯಾಸಿ ಕಲಾವಿದರು ಸೇರಿದಂತೆ 50ಕ್ಕೂ ಅಧಿಕ ಸ್ವಯಂಸೇವಕರು ಮಾರ್ಚ್ 13 ಮತ್ತು 14ರಂದು ಈ ಶಾಲೆಗೆ ಹೊಸ ರೂಪ ನೀಡಿದ್ದಾರೆ. ಕನ್ನಡ ನಾಡಿ ನ ಸಾಂಸ್ಕೃತಿಕ ವೈಭವವನ್ನು ಎತ್ತಿಹಿಡಿಯುವ ಜತೆಗೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತಹ ಕಲಾಕೃತಿಗಳನ್ನು ಶಾಲೆಯ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಪ್ರಮುಖವಾಗಿ ಸ್ವಾತಂತ್ರ್ಯ ಹೋರಾಟಗಾರರು, ಪಠ್ಯಕ್ಕೆ ಸಂಬಂಧಿಸಿದ ಚಿತ್ರಗಳು, ಕಾರ್ಟೂನ್ಸ್, ಪ್ರೇಕ್ಷಣೀಯ ಸ್ಥಳ ಮುಂತಾದಗಳನ್ನು ಕಲಾವಿದರು ತಮ್ಮ ಕುಂಚದಿಂದ ಶಾಲೆಯ ಗೋಡೆಗಳ ಮೇಲೆ ಮೂಡಿಸಿದ್ದಾರೆ.

    139 ಶಾಲೆಗಳಿಗೆ ಹೊಸ ರೂಪ: 3 ವರ್ಷಗಳಿಂದ ಸ್ಕೂಲ್ ಬೆಲ್ ಹೆಸರಿನಲ್ಲಿ ತಂಡ ಈ ಕೆಲಸದಲ್ಲಿ ನಿರತವಾಗಿದೆ. ಈವರೆಗೆ 139 ಶಾಲೆಗಳ ಗೋಡೆಗಳಿಗೆ ಜೀವ ತುಂಬಿ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ತಂಡಕ್ಕೆ ಒಂದೊಂದು ಶಾಲೆಯೂ ಒಂದೊಂದು ಅನುಭವವನ್ನು ನೀಡಿವೆ. ಈವರೆಗೆ ಅಭಿಯಾನದಲ್ಲಿ ತಂಡದೊಂದಿಗೆ ಜತೆಯಾದ ಸ್ವಯಂಸೇವಕರು 10 ಸಾವಿರಕ್ಕೂ ಅಧಿಕ!

    ಹಳ್ಳಿಗರ ಮನೆಯೇ ನಮ್ಮ ಮನೆ: ಪ್ರತಿ ಹಳ್ಳಿಯಲ್ಲೂ ಗ್ರಾಮಸ್ಥರ ಮನೆಯಲ್ಲೇ ತಂಡದ ಸದಸ್ಯರು ವಾಸ್ತವ್ಯ ಹೂಡುವುದು ವಿಶೇಷ. ಅವರ ಮನೆ ಮಕ್ಕಳಂತೆ ಇದ್ದು ಊಟ ಮಾಡಿ ಕಾಲ ಕಳೆಯುತ್ತಾರೆ. ರಾಜ್ಯದ ಗಡಿಭಾಗದಲ್ಲಿರುವ ನಿರ್ಲಕ್ಷಿತ ಸರ್ಕಾರಿ ಶಾಲೆಗಳಿಗೆ ‘ಖಾಸಗಿ ಶಾಲೆಗಳಿಗಿಂತ ನಾವೇನು ಕಮ್ಮಿಯಿಲ್ಲ’ ಎಂಬಂತೆ ಹೊಸ ರೂಪ ನೀಡಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಹಿಂದುಳಿದ ಪ್ರದೇಶ ಹಾಗೂ ಆದಿವಾಸಿಗಳು ವಾಸಿಸುವ ಎಚ್.ಡಿ. ಕೋಟೆ ತಾಲ್ಲೂಕಿನ ಡಿ.ಬಿ. ಕುಪ್ಪೆಯ ಸರ್ಕಾರಿ ಶಾಲೆಗೂ ಇವರು ಸ್ವಂತ ಖರ್ಚಿನಲ್ಲಿ ಹೊಸ ಲುಕ್ ನೀಡಿದ್ದಾರೆ. ಆಂಧ್ರ ಗಡಿಯಲ್ಲಿರುವ ಮುಳಬಾಗಿಲು ತಾಲ್ಲೂಕಿನ ಮಂಚಿಗಾನಹಳ್ಳಿ ಸರ್ಕಾರಿ ಶಾಲೆಯೂ ಇವರ ಅಭಿಯಾನದಲ್ಲಿ ಸೇರಿದೆ.

    ಕಾಲೇಜು ವಿದ್ಯಾರ್ಥಿಗಳ ವಿದ್ಯಾಗಮ: ಕರೊನಾ ವೇಳೆ ಸಾಕಷ್ಟು ವಿದ್ಯಾರ್ಥಿಗಳು ಶಾಲೆಯನ್ನೇ ಮರೆತಿದ್ದರು. ಇದನ್ನು ಗಮನಿಸಿದ ತಂಡ ‘ಸ್ಕೂಲ್ ಬೆಲ್ 2.0’ ಅಭಿಯಾನವನ್ನು ಆರಂಭಿ ಸಿತು. ಕಾಲೇಜು ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಪಾಠ ಮಾಡಿಸಲಾಗುತ್ತಿದೆ. ಒಬ್ಬ ಕಾಲೇಜು ವಿದ್ಯಾರ್ಥಿ 10 ಶಾಲಾ ಮಕ್ಕಳಿಗೆ ಪಾಠ ಹೇಳುತ್ತಾರೆ. 100 ಗಂಟೆಗಳ ಯೋಜನೆ. ಇದು ಜ. 12ರಿಂದ ಆರಂಭವಾಗಿದ್ದು, ಏ.10ಕ್ಕೆ ಕೊನೆಯಾಗಲಿದೆ. 3500ಕ್ಕೂ ಹೆಚ್ಚು ಯುವಕರು ಇದರಲ್ಲಿ ಸಕ್ರಿಯ ರಾಗಿದ್ದಾರೆ. 15 ಸಾವಿರಕ್ಕೂ ಅಧಿಕ ಮಕ್ಕಳು ಲಾಭ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts