More

    ಕರೊನಾ ಅವಧಿಯ ಖರ್ಚಿನ ಲೆಕ್ಕ ಕೊಡಿ

    ರೋಣ: ತಾಲೂಕಿನ ಪಿಎಚ್​ಸಿ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕರೊನಾ ಸಮಯದಲ್ಲಿ ಮಾಡಿರುವ ಪ್ರತಿ ಖರ್ಚಿನ ಮಾಹಿತಿ ನೀಡಬೇಕು ಎಂದು ಮಹ್ಮದ್ ತರಫದಾರ ಟಿಎಚ್​ಒ ಬಿ.ಎಸ್. ಭಜಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ ಅಧ್ಯಕ್ಷತೆಯಲ್ಲಿ ತಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

    ಇದಕ್ಕೆ ಧ್ವನಿಗೂಡಿಸಿದ ಪ್ರಭು ಮೇಟಿ, ಡಾ. ಎಚ್.ಎಲ್. ಗಿರಡ್ಡಿ ಅವರಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ನಡೆದಿದೆ. ಆದರೆ, ಬಹುತೇಕ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರುವುದಿಲ್ಲ. ಪ್ರತಿ ಸಭೆಯಲ್ಲಿ 5, 10 ಲಕ್ಷ ರೂ. ಖರ್ಚಾಗಿದೆ ಎಂದು ಮಾಹಿತಿ ನೀಡುತ್ತೀರಿ. ಅದರಲ್ಲಿ ಯಾವುದಕ್ಕೆಷ್ಟು ಖರ್ಚು ಮಾಡಿದ್ದೀರಿ ಎಂಬುದನ್ನು ಹೇಳಿ ಎಂದರು.

    ‘ನಿಮ್ಮ ಕಚೇರಿಯಲ್ಲಿ ನಿಮ್ಮನ್ನು ಬಿಟ್ಟು ಯಾರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಭು ಮೇಟಿ, ಉಪನೋಂದಣಾಧಿಕಾರಿ ಸಲೀಮಾ ಕಣವಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನೊಬ್ಬಳೇ ಸರ್ಕಾರಿ ನೌಕರಳು. ಉಳಿದವರು ಖಾಸಗಿ ಎಂದರು. ಇದಕ್ಕೆ ಆಕ್ರೋಶಗೊಂಡ ಪ್ರಭು ಮೇಟಿ, ಆಶ್ರಯ ಮನೆ ನೋಂದಣಿ ಮಾಡಲು ಸರ್ಕಾರಿ ಶುಲ್ಕ 350 ರೂ. ಆದರೆ, ಫಲಾನುಭವಿಗಳಿಂದ 3-4 ಸಾವಿರ ರೂ. ತೆಗೆದುಕೊಳ್ಳಲಾಗುತ್ತಿದೆ. ಉಪನೋಂದಣಾಧಿಕಾರಿಗಳ ಕಚೇರಿ ಸುಲಿಗೆ ಕೇಂದ್ರವಾಗಿದೆ. ಇದನ್ನು ತಡೆಗಟ್ಟಲು ನೀವು ಹೆಚ್ಚು ಗಮನಹರಿಸಿ ಎಂದು ಸೂಚಿಸಿದರು.

    ಸಿದ್ದಣ್ಣ ಯಾಳಗಿ ಮಾತನಾಡಿ, ಶಾಲೆಗಳು ಆರಂಭವಾಗಿದ್ದು, ಹಳ್ಳಿ ಮಕ್ಕಳಿಗೆ ಖಾಸಗಿ ಶಾಲೆಯವರು ಬಸ್ ಸೌಕರ್ಯ ಕಲ್ಪಿಸುತ್ತಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗಿದೆ. ಶಾಲೆ ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಕರೊನಾ ಹಿನ್ನೆಲೆಯಲ್ಲಿ ಬಸ್ ಓಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಬೇಕು ಎನ್ನುತ್ತಿದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ, ಈ ಕುರಿತು ಶಾಲೆ ಮುಖ್ಯಸ್ಥರೊಂದಿಗೆ ಮಾತನಾಡುವೆ ಎಂದರು.

    ಮಹ್ಮದ್ ತರಫದಾರ ಮಾತನಾಡಿ, ತಾಲೂಕಿನ ಕೆಲ ಸರ್ಕಾರಿ ಶಾಲೆಗಳು ಕುಡುಕರ ಅಡ್ಡೆಗಳಾಗಿವೆ. ಪೊಲೀಸ್, ಅಬಕಾರಿ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಎಂದು ತಾಪಂ ಅಧ್ಯಕ್ಷೆ ನಾಯಕ ಅವರನ್ನು ಒತ್ತಾಯಿಸಿದರು. ಅದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಭು ಮೇಟಿ, ಎಸ್​ಡಿಎಂಸಿ ಅಧ್ಯಕ್ಷರು ದೂರು ನೀಡಿದರು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಅಂತಹ ಶಾಲೆಗಳನ್ನು ಗುರುತಿಸಿ ರಾತ್ರಿ ವೇಳೆ ಪೊಲೀಸರನ್ನು ನಿಯುಕ್ತಿಗೊಳಿಸಬೇಕು ಎಂದು ಆಗ್ರಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts