More

    ಪರಿಹಾರ ಚೆಕ್ ಸಾಲದ ಖಾತೆಗೆ ಜಮೆ ಮಾಡಬೇಡಿ: ಬಿ.ವೈ.ರಾಘವೇಂದ್ರ ಸೂಚನೆ

    ಶಿವಮೊಗ್ಗ: ಅತಿವೃಷ್ಠಿಯಿಂದ ಅನೇಕರು ಮನೆ ಕಳೆದುಕೊಂಡಿದ್ದಾರೆ. ಕೃಷಿ ಬೆಳೆಗೆ ಹಾನಿಯಾಗಿದೆ. ಸರ್ಕಾರ ಈಗಾಗಲೇ ಸಂತ್ರಸ್ತರಿಗೆ ಪರಿಹಾರ ವಿತರಣೆ ಆರಂಭಿಸಿದೆ. ಯಾವುದೇ ಕಾರಣಕ್ಕೂ ಫಲಾನುಭವಿಯ ಸಾಲಕ್ಕೆ ಪರಿಹಾರದ ಹಣವನ್ನು ಜಮಾ ಮಾಡಬಾರದು ಎಂದು ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
    ನೀಡಿದ ಸಾಲ ವಸೂಲಿ ಮಾಡುವ ಸಂಪೂರ್ಣ ಹಕ್ಕು ಬ್ಯಾಂಕ್‌ಗಳಿಗೆ ಇದೆ. ಆದರೆ ಕೆಲವು ಬ್ಯಾಂಕ್‌ಗಳಲ್ಲಿ ಪರಿಹಾರದ ಹಣವನ್ನು ಸಂತ್ರಸ್ತರಿಗೆ ನೀಡದೇ ಅವರ ಸಾಲಕ್ಕೆ ಹೊಂದಿಸುವ ಕೆಲಸವಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್ಚರಿಕೆ ನೀಡಿದರು.
    ರೈತರು ಪಾವತಿಸಿದ ಬೆಳೆ ವಿಮೆ ಕಂತನ್ನು ಕೆಲವು ಬ್ಯಾಂಕ್‌ಗಳಲ್ಲಿ ಸಕಾಲಕ್ಕೆ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ. ಶಿಕಾರಿಪುರ ತಾಲೂಕು ಹಿತ್ತಲದ ಬ್ಯಾಂಕ್ ಶಾಖೆಯೊಂದರಲ್ಲಿ ಸುಮಾರು 75 ರೈತರ ಬೆಳೆ ವಿಮೆ ಕಂತು ಅಪ್‌ಲೋಡ್ ಆಗದ ಕಾರಣ ಪರಿಹಾರ ಸಿಗುವುದು ವಿಳಂಬವಾಗುತ್ತಿದೆ. ಇಂತಹ ಅಚಾತುರ್ಯಕ್ಕೆ ಆಯಾ ಬ್ಯಾಂಕ್‌ಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು.
    ಬ್ಯಾಂಕ್‌ಗಳು ಶಿಕ್ಷಣ ಹಾಗೂ ವಸತಿ ಸಾಲ ವಿತರಣೆಗೆ ಹೆಚ್ಚು ಒತ್ತು ನೀಡಬೇಕು. ಕಳೆದ ತ್ರೈಮಾಸಿಕ ಸಭೆಯಲ್ಲಿ ಕೃಷಿ ಹಾಗೂ ಆದ್ಯತಾ ವಲಯದಲ್ಲಿ ಬ್ಯಾಂಕ್‌ಗಳು ಉತ್ತಮ ಪ್ರಗತಿ ಸಾಧಿಸಿವೆ. ಶಿಕ್ಷಣ ಮತ್ತು ವಸತಿ ಸಾಲಗಳ ಅರ್ಜಿಗಳನ್ನೂ ಆದ್ಯತೆ ಮೇರೆಗೆ ಪರಿಶೀಲಿಸಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.
    ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿಯ ಪೂರ್ಣಿಮಾ ಅವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಮಂಜೂರಾತಿ ಪತ್ರವನ್ನು ಬಿ.ವೈ.ರಾಘವೇಂದ್ರ ಹಸ್ತಾಂತರಿಸಿದರು.
    ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಕೆನರಾ ಬ್ಯಾಂಕ್ ಪ್ರಾದೇಶಿಕ ಉಪ ವ್ಯವಸ್ಥಾಪಕ ಪಿ.ಸಂದೀಪ್ ರಾವ್, ಆರ್‌ಬಿಐ ಪ್ರತಿನಿಧಿ ಸುಪ್ರಿಯ ಬ್ಯಾನರ್ಜಿ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಬಿ.ರವಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಡಿ.ಯತೀಶ್ ಉಪಸ್ಥಿತರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts