More

    ಬೈಪಾಸ್‌ಗೆ ಮನೆ, ನಿವೇಶನ ಕಳೆದುಕೊಳ್ಳುವರ ಪ್ರತಿಭಟನೆ

    ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 206ರ ಮಲವಗೊಪ್ಪದ ಹೊರಭಾಗದ ಬೈಪಾಸ್‌ಗೆ ಮನೆ ಮತ್ತು ನಿವೇಶನ ಕಳೆದುಕೊಳ್ಳುವ ಎಲ್ಲ ಕುಟುಂಬಗಳಿಗೆ ನಿವೇಶನ ಮತ್ತು ಭೂದಾಖಲೆಗಳನ್ನು ಸಕ್ರಮಗೊಳಿಸಿ ಸೂಕ್ತ ಪರಿಹಾರ ಘೋಷಿಸಿ ಹೆದ್ದಾರಿ ಅಭಿವೃದ್ಧಿಗೊಳಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಸಂತ್ರಸ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಲ್ಲಿಸಿದರು.
    ನಗರದ ಮಲವಗೊಪ್ಪದ 15 ಮತ್ತು 16ನೇ ವಾರ್ಡ್‌ನ ಮಧ್ಯಭಾಗದಲ್ಲಿ ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಇದು ಜನವಸತಿ ಪ್ರದೇಶವಾಗಿದ್ದು ವಾಣಿಜ್ಯ, ವಸತಿ ಕಟ್ಟಗಳಿವೆ. ಸುಮಾರು 75 ವರ್ಷಗಳಿಂದ ಜನರು ವಾಸವಾಗಿದ್ದಾರೆ. ಪುರಾತನ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ಕೂಡ ಇದೆ. ಹಾಗಾಗಿ ಹೆದ್ದಾರಿ 206 ಅನ್ನು ಮಲವಗೊಪ್ಪ ಹೊರಭಾಗದ ಬೈಪಾಸ್ ರಸ್ತೆಯ ಮೂಲಕ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
    ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅಭಿವೃದ್ಧಿ ಆಗುತ್ತಿರುವಾಗ ಜನವಸತಿ ಮೇಲೆ ಆಗುವ ದುಷ್ಪರಿಣಾಮಗಳನ್ನು ಕೂಡ ಪರಿಹರಿಸಬೇಕಾಗುತ್ತದೆ. ತುಮಕೂರು-ಶಿವಮೊಗ್ಗದವರೆಗೆ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಹಲವು ನಗರಗಳ ಹೊರಭಾಗದಲ್ಲಿ ಬೈಪಾಸ್ ಮೂಲಕ ಹೆದ್ದಾರಿ ಹಾದುಹೋಗುತ್ತಿದೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳು ಮಲವಗೊಪ್ಪದ ಸ್ವತ್ತಿನ ಮಾಲೀಕರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.
    ಸ್ವತ್ತಿನ ಮೂಲ ದಾಖಲೆಗಳಲ್ಲಿ ಸರ್ಕಾರಿ ಪಡಾ, ಗೋಮಾಳ, ಚನ್ನಬಸವೇಶ್ವರ ದೇವಾಲಯ, ತುಂಗಾಭದ್ರಾ ಸಕ್ಕರೆ ಕಾರ್ಖಾನೆ ಇವರ ಹೆಸರಿನಲ್ಲಿ ಸ್ವತ್ತು ಇರುವುದರಿಂದ ಭೂಮಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದು ಇದರಿಂದ ಸ್ವತ್ತು ಕಳೆದುಕೊಳ್ಳುತ್ತಿರುವ ಮಾಲೀಕರು ಭಯಭೀತರಾಗಿದ್ದಾರೆ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಮಲವಗೊಪ್ಪ ಭಾಗದಲ್ಲಿರುವ ಮನೆ, ನಿವೇಶನ ಕಳೆದುಕೊಳ್ಳುತ್ತಿರುವ ಎಲ್ಲ ಕುಟುಂಬಗಳಿಗೆ ಭೂದಾಖಲೆಗಳನ್ನು ಸಕ್ರಮಗೊಳಿಸಿ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
    ರೈತ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಸಮಿತಿ ಗೌರವಾಧ್ಯಕ್ಷ ಆರ್.ಸಿ.ನಾಯ್ಕ, ಅಧ್ಯಕ್ಷ ಯು.ಜಿ.ನಾಗರಾಜ್, ಉಪಾಧ್ಯಕ್ಷ ಟಿ.ಜಗದೀಶ್, ಕಾರ್ಯದರ್ಶಿ ಎಸ್.ಶಾಂತಕುಮಾರ್, ಸಹ ಕಾರ್ಯದರ್ಶಿ ಎಂ.ಟಿ.ಶೇಖರಾನಾಯ್ಕ, ಖಜಾಂಚಿ ಟಿ.ಎಂ.ಉಮಾಶಂಕರ್, ಸದಸ್ಯರಾದ ಬಸವಾಚಾರಿ, ಛತ್ರಾನಾಯ್ಕಾ, ಸುಲೋಚನಮ್ಮ, ಓಂಕಾರಮ್ಮ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts