More

    ಪ್ರಮಾಣೀಕೃತ ಬೀಜಗಳನ್ನೇ ಖರೀದಿಸಿ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ರೈತರು ಕಡಿಮೆ ಬೆಲೆಯ ನಕಲಿ ಬಿತ್ತನೆ ಬೀಜಗಳನ್ನು ಖರೀದಿಸಿ ಸಮಸ್ಯೆ ಎದುರಿಸುವ ಬದಲು ಪ್ರಮಾಣೀಕರಿಸಿದ ಬೀಜಗಳನ್ನೇ ಖರೀದಿಸಬೇಕು. ಕೃಷಿ ಪರಿಕರ ಖರೀದಿಸಿದವರಿಗೆ ವ್ಯಾಪಾರಸ್ಥರು ಕಡ್ಡಾಯವಾಗಿ ರಸೀದಿ ನೀಡಬೇಕು ಹಾಗೂ ನಿಗದಿಪಡಿಸಿದ ದರಗಳಿಗೇ ಮಾರಾಟ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಸಿ.ಎಂ. ಉದಾಸಿ ಎಚ್ಚರಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲಿಂದ ಮೇಲೆ ಪ್ರಕೃತಿ ವಿಕೋಪಗಳು ಎದುರಾಗುತ್ತಿರುವುದರಿಂದ ರೈತ ಸಮುದಾಯ ಸಕಷ್ಟ ಅನುಭವಿಸುವಂತಾಗಿದ್ದು, ಕೋವಿಡ್-19 ಮಹಾಮಾರಿ ರೈತರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಕಳೆದ ವರ್ಷದ ಪ್ರಕೃತಿ ವಿಕೋಪದ ನಷ್ಟದಿಂದ ಹೊರಬರುವ ಮುನ್ನವೇ ಕರೊನಾ ಲಾಕ್​ಡೌನ್​ನಿಂದಾಗಿ ಬೇಸಿಗೆಯ ಬೆಳೆಗಳು ರೈತನ ಕೈಹಿಡಿಯದಂತಹ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ವ್ಯವಸ್ಥೆ ಕೈಗೊಂಡಿದ್ದರೂ ಮಾರುಕಟ್ಟೆ ಸೂಕ್ತ ದೊರೆಯದಂತಾಗಿದ್ದು, ಕೆಲವು ಬೆಳೆಗಳು ಬೆಲೆ ಕಳೆದುಕೊಂಡಿವೆ. ರೈತರೇ ಟ್ರ್ಯಾಕ್ಟರ್ ಮೂಲಕ ಬೆಳೆ ನಾಶಪಡಿಸಿದ ಘಟನೆಗಳೂ ನಡೆದಿವೆ. ಆದರೂ ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭೂಮಿ ಹಸನು ಮಾಡುತ್ತಿದ್ದಾರೆ.

    ತಾಲೂಕಿನ 49,000 ಹೆಕ್ಟೇರ್ ಪ್ರದೇಶದಲ್ಲಿ 30,000ಕ್ಕೂ ಅಧಿಕ ರೈತರು ಮುಂಗಾರು ಸಿದ್ಧತೆ ಕೈಗೊಳ್ಳುತ್ತಿದ್ದಾರೆ. 20 ಸಾವಿರ ಹೆ. ಭತ್ತ, 16 ಸಾವಿರ ಹೆ. ಗೋವಿನಜೋಳ, 5,200 ಹೆ. ಹತ್ತಿ, 2,300 ಹೆ. ಸೋಯಾ ಅವರೆ, 450 ಹೆ. ಶೇಂಗಾ ಬಿತ್ತನೆಗೆ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಕರೊನಾ ಸಮಸ್ಯೆಯಿಂದಾಗಿ ಎಲ್ಲಿಯೂ ಕೃಷಿ ಕಾರ್ಯ ಸ್ಥಗಿತಗೊಂಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂಗಾರು ಹಂಗಾಮಿಗಾಗಿ ಅವಶ್ಯವಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿ ರಸಗೊಬ್ಬರ ಮಳಿಗೆಗಳಲ್ಲಿ ದಾಸ್ತಾನಿಗೆ ಸೂಚನೆ ನೀಡಿವೆ. ಮುಂಗಾರಿನಲ್ಲಿ ಯಾವುದೇ ರಸಗೊಬ್ಬರ ಕೊರತೆಯಾಗುವುದಿಲ್ಲ. ರೈತರು ಆತಂಕ ಪಡಬಾರದು ಎಂದು ಮನವಿ ಮಾಡಿದರು.

    2019-20ನೇ ಸಾಲಿನಲ್ಲಿ ಕೃಷಿ ಇಲಾಖೆ ಮೂಲಕ ರೋಟೋವೇಟರ್, ಕಲ್ಟಿವೇಟರ್, ಎಂ.ಬಿ. ಓಪ್ಲೊ, ಡಿಸ್ಕ್ ಹ್ಯಾರೋ ಸೇರಿ ಒಟ್ಟು 345 ಉಪಕರಣಗಳು, 25 ಪಾವರ್​ಟಿಲ್ಲರ್, 20 ಒಕ್ಕಣೆಯಂತ್ರಗಳನ್ನು ವಿತರಿಸಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ 2,200 ರೈತರಿಗೆ ಸ್ಪ್ರಿಂಕ್ಲರ್ ಘಟಕಗಳನ್ನು ಹಾಗೂ 416 ರೈತರಿಗೆ 10,400 ಪಿವಿಸಿ ಪೈಪ್​ಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. ಕೃಷಿ-ತೋಟಗಾರಿಕೆ ಉತ್ಪನ್ನಗಳ ಸಾಗಾಟಕ್ಕೆ ತೊಂದರೆಯಾಗದಂತೆ ಕ್ರಮ ಜರುಗಿಸಲಾಗಿದೆ ಎಂದು ಉದಾಸಿ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts