More

    ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ವ್ಯಾಪಾರಸ್ಥರ ಪರವಾನಗಿ ರದ್ದು

    ರೋಣ: ಪುರಸಭೆ ವ್ಯಾಪ್ತಿಯಲ್ಲಿ ಬೀದಿಬದಿ, ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ವ್ಯಾಪಾರ ಮಾಡುವವರು ಕರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂಥವರ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್ ಹೇಳಿದರು.
    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಪೌರ ಕಾರ್ವಿುಕರು, ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ಕುರಿತು ಪುರಸಭೆ ಸಿಬ್ಬಂದಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡುತ್ತಿದ್ದಾರೆ. ರೋಣ ಪುರಸಭೆಯಿಂದ ಪರವಾನಗಿ ಪಡೆದ 400ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರಿದ್ದಾರೆ. ಪ್ರತಿ ಮಂಗಳವಾರ, ಗುರುವಾರ ಸಂತೆಯಲ್ಲಿ 200ಕ್ಕೂ ಹೆಚ್ಚು ಜನರು ತರಕಾರಿ ಸೇರಿದಂತೆ ಕಾಳುಕಡಿ ಮಾರಾಟ ಮಾಡುತ್ತಾರೆ. 50ಕ್ಕೂ ಹೆಚ್ಚು ಜನರು ಮಾಂಸದ ವ್ಯಾಪಾರ ಮಾಡುತ್ತಾರೆ. ಇವರೆಲ್ಲರಿಗೂ ಪುರಸಭೆಯಿಂದ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ. ಇವರೆಲ್ಲರೂ ಸಾರ್ವಜನಿಕರ ನೇರ ಸಂಪರ್ಕಕ್ಕೆ ಬರುತ್ತಾರೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಕರೊನಾ ಸೋಂಕು ತಗುಲಿದರೆ ಅದು ಇಡೀ ಸಮುದಾಯಕ್ಕೆ ಹರಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪುರಸಭೆ ಆಡಳಿತ ಮಂಡಳಿಯ ಅನುಮತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಒಂದು ವಾರ ಕಾಲಾವಕಾಶ ನೀಡಲಾಗುತ್ತಿದೆ. ಆನಂತರ ಪುರಸಭೆ ಸಿಬ್ಬಂದಿ ಆರೋಗ್ಯ ಇಲಾಖೆಯಿಂದ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರ ಮಾಹಿತಿ ಪಡೆದು ಲಸಿಕೆ ಹಾಕಿಸಿಕೊಳ್ಳದ ವ್ಯಾಪಾರಸ್ಥರ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದರು.
    ಪುರಸಭೆ ಅಧ್ಯಕ್ಷೆ ವಿದ್ಯಾ ದೊಡ್ಡಮನಿ, ಉಪಾಧ್ಯಕ್ಷ ಸಂಗನಗೌಡ ಪಾಟೀಲ, ಸದಸ್ಯರಾದ ಬಾವಾಸಾಬ್ ಬೆಟಗೇರಿ, ಗದಿಗೆಪ್ಪ ಕಿರೇಸೂರ, ಹನುಮಂತ ತಳ್ಳಿಕೇರಿ, ಶಕುಂತಲಾ ಚಿತ್ರಗಾರ, ಅಂದಪ್ಪ ಗಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts