More

    ಬಸ್‌ಗಳಿದ್ದರೂ ಪ್ರಯಾಣಿಕರಿಗೆ ಸಿಗದ ಸೇವೆ

    ಮಾಂಜರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಯಾಣಿಕರ ಬೇಡಿಕೆಗೆ ತಕ್ಕಷ್ಟು ಬಸ್‌ಗಳನ್ನು ಸೇವೆಗೆ ಒದಗಿಸದ ಕಾರಣ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಹುಕ್ಕೇರಿ ತಾಲೂಕಿನ ಪ್ರಯಾಣಿಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಜತೆಗೆ ಗ್ರಾಮೀಣ ಪ್ರದೇಶಗಳಿಗೆ ಬೆಳಗ್ಗೆ ಹಾಗೂ ಸಂಜೆ ಮಾತ್ರ ಬಸ್ ಸೇವೆ ಒದಗಿಸಲಾಗುತ್ತಿದೆ ಎಂಬ ಆರೋಪ ಅಲ್ಲಿನ ಜನರಿಂದ ಕೇಳಿಬರುತ್ತಿದೆ.

    ವಿದ್ಯಾರ್ಥಿಗಳಿಗೆ ತಪ್ಪದ ಸಂಕಷ್ಟ: ಕರೊನಾ ನೆಪ ನೀಡಿ ಸಾರಿಗೆ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಬಸ್‌ಸೇವೆ ಒದಗಿಸದ ಕಾರಣ ವಿದ್ಯಾರ್ಥಿಗಳು ನಿತ್ಯ ಶಾಲೆ-ಕಾಲೇಜ್‌ಗಳಿಗೆ ತೆರಳಲು ಪರದಾಡುವಂತಾಗಿದೆ. ಸಕಾಲಕ್ಕೆ ಬಸ್ ಸಿಗದ ಕಾರಣ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಶಾಲೆ-ಕಾಲೇಜ್‌ಗಳಿಗೆ ತೆರಳುತ್ತಿದ್ದಾರೆ. ಖಾಸಗಿ ವಾಹನದ ಮೂಲಕ ಹೋದರೂ ವಿದ್ಯಾರ್ಥಿಗಳು ವೇಳೆಗೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರೂ ಸಹ ಇದೇ ಸಮಸ್ಯೆಗೆ ನಿತ್ಯ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಸಂಚಾರಕ್ಕೆ ಪರದಾಟ: ಸಕಾಲಕ್ಕೆ ಬಸ್ ಸಿಕ್ಕರೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ಸೌಲಭ್ಯ ಸಿಗುತ್ತಿಲ್ಲ. ಒಂದೇ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚಾರ ಮಾಡುತ್ತಾರೆ. ಕೊಂಚ ಎಚ್ಚರ ತಪ್ಪಿದರೂ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ. ಸಮಸ್ಯೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಶೀಘ್ರ ಕ್ರಮಕ್ಕೆ ಮುಂದಾಗಿ ಎಂದು ವಿದ್ಯಾರ್ಥಿಗಳು, ಜನರು ಕೋರಿದ್ದಾರೆ.

    ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೇವೆ ಒದಗಿಸಲಾಗಿದೆ. ಅವಶ್ಯ ಸ್ಥಳಗಳಲ್ಲಿ ಹೆಚ್ಚಿನ ಬಸ್ ಸೇವೆ ಒದಗಿಸಲಾಗುವುದು. ಕರೊನಾ ಕಾರಣ ಆದಾಯವಿಲ್ಲದ ಕೆಲ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಬಸ್ ಸೇವೆ ಬಂದ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳಲ್ಲಿ ಸೇವೆ ಆರಂಭಿಸಲಾಗುವುದು.
    | ಎಂ.ವಿ.ಶಶಿಧರ ವಿಭಾಗೀಯ ನಿಯಂತ್ರಣಾಧಿಕಾರಿ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ.

    | ಸಂತೋಷಕುಮಾರ ಕಾಮತ ಮಾಂಜರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts