More

    ದ.ಕ. ಜಿಲ್ಲೆಯಲ್ಲಿ ಪೂರ್ಣ ಬಸ್ ಸೇವೆ ಇಲ್ಲ

    ಮಂಗಳೂರು/ಪುತ್ತೂರು/ಉಡುಪಿ: ಹಲವು ಷರತ್ತುಗಳೊಂದಿಗೆ ರಾಜ್ಯಾದ್ಯಂತ ಬಸ್ ಸೇವೆ ಪ್ರಾರಂಭಿಸಬಹುದು ಎಂದು ರಾಜ್ಯ ಸರ್ಕಾರ ಹೇಳಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸೇವೆಗೆ ಇನ್ನಷ್ಟು ದಿನ ಕಾಯಬೇಕಾಗಬಹುದು.
    ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ನಗರದೊಳಗೆ ನರ್ಮ್ ಬಸ್ ಸೇವೆ ಹಾಗೂ ಜಿಲ್ಲೆಯೊಳಗಿನ ಸಾರಿಗೆ ಸೇವೆ ಆರಂಭಿಸಲು ಮನಸ್ಸು ಮಾಡಿಲ್ಲ. ಆದರೆ ಪುತ್ತೂರು ವಿಭಾಗ (ಪುತ್ತೂರು, ಧರ್ಮಸ್ಥಳ, ಸುಳ್ಯ, ಬಿ.ಸಿ.ರೋಡ್ ಘಟಕಗಳು) ಗ್ರಾಮಾಂತರ ಸೇವೆಯನ್ನು ಸೀಮಿತ ಸಂಖ್ಯೆಯ ಬಸ್‌ಗಳೊಂದಿಗೆ ಆರಂಭಿಸುವುದಾಗಿ ಹೇಳಿದೆ. ಪುತ್ತೂರಿನಿಂದ ಮಂಗಳೂರಿಗೆ ಮಂಗಳವಾರ ಒಂದು ಬಸ್ ಸಂಚಾರ ಮಾಡಲಿದೆ. ಈ ವಿಭಾಗದ ಇತರ ಘಟಕಗಳಿಂದ ನಿರ್ಧಾರವಾಗಿಲ್ಲ.

    ಕೆಎಸ್ಸಾರ್ಟಿಸಿ ಸಿದ್ಧತೆ: ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ನಗರಗಳಿಗೆ ಬಸ್ ಸೇವೆಗೆ ಸಿದ್ಧತೆ ನಡೆದಿದ್ದು, ಬುಕ್ಕಿಂಗ್ ಬಹುತೇಕ ಫುಲ್ ಆಗಿದೆ. ಸಾಮಾನ್ಯ ಸಾರಿಗೆ, ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್ ಬಸ್‌ಗಳಿದ್ದು, ಮಂಗಳೂರಿನಿಂದ ರಾತ್ರಿ 9 ಗಂಟೆ ಹೊತ್ತಿಗೆ 7 ಬಸ್‌ಗಳಿರುವ ಮಾಹಿತಿ ಆನ್‌ಲೈನ್‌ನಲ್ಲಿ ಲಭಿಸಿದೆ.
    ‘ಬುಕ್ಕಿಂಗ್ ನೋಡಿಕೊಂಡು ಎಷ್ಟು ಬಸ್ ಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ವೋಲ್ವೊ ಬಸ್ ಇರುವುದಿಲ್ಲ’ ಎಂದು ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ‘ಮಂಗಳವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ರಾಜಹಂಸ ಬಸ್ ಹೊರಡಲಿದೆ’ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಮಾಹಿತಿ ನೀಡಿದ್ದಾರೆ.

    ದ.ಕ.ದಲ್ಲೂ ಖಾಸಗಿ ಬಸ್ ಸೇವೆ ಇಲ್ಲ: ದ.ಕ. ಜಿಲ್ಲೆಯ ಖಾಸಗಿ ಬಸ್‌ನವರು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಷರತ್ತಿನಂತೆ ಬಸ್ ಸೇವೆ ಪ್ರಾರಂಭಿಸಿದರೆ ತೀವ್ರ ನಷ್ಟವಾಗುವ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಯಾಗಿರುವ ದರ ಪರಿಷ್ಕರಣೆ ಹಾಗೂ ರಸ್ತೆ ತೆರಿಗೆ ವಿನಾಯಿತಿ ಕುರಿತು ಜಿಲ್ಲಾಧಿಕಾರಿ ಕ್ರಮ ಕೈಗೊಂಡರೆ ಮಾತ್ರವೇ ಮುಂದಡಿ ಇಡಬಹುದು ಎನ್ನುವ ಧೋರಣೆಯಲ್ಲಿದ್ದಾರೆ. ಬಸ್ ಸಂಚಾರ ಕುರಿತು ದ.ಕ. ಜಿಲ್ಲಾಧಿಕಾರಿ ಮೇ 19ರಂದು ಬೆಳಗ್ಗೆ 10.30ಕ್ಕೆ ಬಸ್ ಆಪರೇಟರುಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಸ್ ತೆರಿಗೆ ರದ್ದು, 2013ರಿಂದ ಪರಿಷ್ಕರಣೆಗೆ ಬಾಕಿ ಇರುವ ಬಸ್ ಪ್ರಯಾಣ ದರ ಶೇ.50ರಷ್ಟು ಏರಿಕೆ ಇತ್ಯಾದಿ ಬೇಡಿಕೆಗಳನ್ನು ಜಿಲ್ಲಾಧಿಕಾರಿಯವರ ಮುಂದಿಡಲಾಗುವುದು ಎಂದು ದ.ಕ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪಾಸ್ ಬೇಡ: ಹೊರ ಜಿಲ್ಲೆಗಳಿಗೆ ಬಸ್‌ಗಳಲ್ಲಿ ಸಂಚರಿಸುವವರಿಗೆ ಪಾಸ್ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಬಸ್ ಏರುವ ಮೊದಲು ಥರ್ಮಲ್ ಸ್ಕಾೃನಿಂಗ್‌ಗೆ ಒಳಗಾಗಬೇಕು.

    ಉಡುಪಿಯಿಂದ ಶಿವಮೊಗ್ಗ, ಚಿಕ್ಕಮಗಳೂರಿಗೂ ಬಸ್
    ಉಡುಪಿ: ಇದುವರೆಗೆ ಉಡುಪಿ ನಗರದಲ್ಲಿ ಮಾತ್ರ ಸೀಮಿತ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಮಂಗಳವಾರದಿಂದ ಜಿಲ್ಲೆಯ ಇತರ ಆಯ್ದ ಕೇಂದ್ರಗಳಿಗೂ ಬಸ್ ಸೇವೆ ಆರಂಭಗೊಳ್ಳಲಿದೆ.
    ಉಡುಪಿ ಮತ್ತು ಕುಂದಾಪುರದಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿಗೆ ಬಸ್ ಸೇವೆ ಇರಲಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು, ಸಿದ್ಧಾಪುರ ನಡುವೆಯೂ ಬಸ್‌ಗಳು ಸಂಚರಿಸಲಿವೆ. ಆದರೆ ಉಡುಪಿ-ಮಂಗಳೂರು ನಡುವೆ ಸೇವೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಟಿ ಬಸ್ ಇಂದು ನಿರ್ಧಾರ
    ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭ ಅನಿಶ್ಚಿತತೆ ಮುಂದುವರಿದಿದೆ. ಉಡುಪಿ-ಕುಂದಾಪುರ ನಡುವೆ ಎರಡು ಬಸ್‌ಗಳು ಮೂರು ಟ್ರಿಪ್ ಮಾಡುತ್ತಿದ್ದು, ಇತರ ಬಸ್‌ಗಳು ಸೇವೆ ಆರಂಭಿಸಿಲ್ಲ. ಈ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಉಡುಪಿ ನಗರದಲ್ಲಿ ಸಿಟಿ ಬಸ್‌ಗಳ ಓಡಾಟ ನಡೆಸುವ ಮಂಗಳವಾರ ಸಾಯಂಕಾಲ ಸಭೆ ನಡೆಸಿದ ನಂತರ ತೀರ್ಮಾನಿಸಲಾಗುವುದು ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts