More

    ಸಮರ್ಪಕ ರಸ್ತೆ, ಚರಂಡಿ ನಿರ್ಮಿಸಿ

    ಚಂದ್ರು ಗಂಗೂರ ಹುನಗುಂದ
    ತಾಲೂಕಿನ ಹಿರೇಮಳಗಾವಿ ಗ್ರಾಪಂ ವ್ಯಾಪ್ತಿಯ ಚಿಕ್ಕಮಾಗಿ ಗ್ರಾಮದಲ್ಲಿ ಅಗಸಿ ರಸ್ತೆ, ಹೊಳೆಗೆ ತೆರಳುವ ರಸ್ತೆ ಸೇರಿ ವಿವಿಧ ಬಡಾವಣೆಗಳಲ್ಲಿ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರ ಹಳ್ಳಿಗಳಿಗೆ ಸೌಲಭ್ಯ ಕಲ್ಪಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರೂ ಹಲವಾರು ಗ್ರಾಮಗಳು ಮೂಲ ಸೌಲಭ್ಯಗಳಿಂದ ವಂಚಿತಗೊಂಡಿವೆ ಎಂಬುದಕ್ಕೆ ಚಿಕ್ಕಮಾಗಿ ಗ್ರಾಮವೇ ನಿದರ್ಶನ.

    ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದರಿಂದ ವೃದ್ಧರು, ಮಕ್ಕಳು, ಜನ-ಜಾನುವಾರು ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮವು ಇಲ್ಲಿವರೆಗೆ ಸಿಸಿ ರಸ್ತೆ ಭಾಗ್ಯ ಕಂಡಿಲ್ಲ ಎಂದು ಗ್ರಾಮಸ್ಥರು ಸಂಬಂಧಿಸಿದವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೆಲವು ರಸ್ತೆಗಳಲ್ಲಿ ಕಾಟಾಚಾರದ ಕಾಮಗಾರಿ ಮಾಡಿ ಬಿಲ್ ತೆಗೆದುಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
    ಶೌಚಗೃಹಗಳಿಲ್ಲದ್ದಕ್ಕೆ ಬಹುತೇಕ ಗ್ರಾಮಸ್ಥರು ಶೌಚಕ್ಕೆ ಬಯಲಿಗೆ ತೆರಳುತ್ತಾರೆ. ಚರಂಡಿಗಳು ದುರ್ವಾಸನೆ ಬೀರುತ್ತಿವೆ. ಸ್ವಲ್ಪ ಮಳೆಯಾದರೆ ಕೊಳಚೆ ನೀರು ಗ್ರಾಮದಿಂದ ಜಮೀನುಗಳಿಗೆ ತೆರಳುವ ರಸ್ತೆಗಳಲ್ಲಿ ನಿಂತು ಅಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಡೆಂೆ, ಚಿಕೂನ್ ಗುನ್ಯಾ ವಿವಿಧ ಸಾಂಕ್ರಾಮಿಕ ರೋಗದಿಂದ ಗ್ರಾಮದ 5 ಜನರು ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆದಿದೆ.

    ಈ ಕುರಿತು ಹಲವಾರು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಚಿಕ್ಕಮಾಗಿ ಗ್ರಾಮದಲ್ಲಿ ಅಗಸಿ ಮತ್ತು ಹೊಳೆಗೆ ತೆರಳಲು ರಸ್ತೆ ಇಲ್ಲದೆ ಜನರಿಗೆ ತೊಂದರೆಯಾಗಿದೆ. ಚರಂಡಿ ನೀರು ರಸ್ತೆ ಮೇಲೆ ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿ ಆರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ.
    ಅಜೀತ್ ಪಾಟೀಲ, ಚಿಕ್ಕಮಾಗಿ ಗ್ರಾಮಸ್ಥ, ಹಿರೇಮಳಗಾವಿ
    
    ರಸ್ತೆ, ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ನೀಡಿದ್ದಾರೆ. ಈ ಕುರಿತು ಮೇಲಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವಾರದೊಳಗೆ ಕಾಮಗಾರಿ ಆರಂಭಿಸಲಾಗುವುದು.
    ಮಹಾಂತೇಶ ಕೋಟಿ, ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts