More

    ಸುರಾಜ್ಯವನ್ನಾಗಿಸುವ ಹೊಣೆ ಗ್ರಾಪಂ ಸದಸ್ಯರದ್ದು

    ಹುಬ್ಬಳ್ಳಿ: ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧೀಜಿಯವರ ಕಲ್ಪನೆಯಾಗಿತ್ತು. ಗ್ರಾಮಗಳನ್ನು ಸುರಾಜ್ಯಗಳನ್ನಾಗಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರದ್ದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

    ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೂತನ ಸದಸ್ಯರ ಅಭಿನಂದನಾ ಸಮಾರಂಭ ‘ಜನಸೇವಕ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಪಂ ಸದಸ್ಯರು ಜನರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ತಮ್ಮ ವಾರ್ಡಿನ ಪ್ರತಿ ಕುಟುಂಬ ಸ್ವಂತ ಮನೆ ಹೊಂದಬೇಕೆಂಬ ಕಳಕಳಿ ಗ್ರಾಪಂ ಸದಸ್ಯರಿಗೆ ಇರಬೇಕು ಎಂದು ಹೇಳಿದರು.

    ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಪಂಗಳಿಗೆ ನೇರವಾಗಿ ಇದುವರೆಗೆ ಸುಮಾರು 60,750 ಕೋಟಿ ರೂ. ಅನುದಾನ ನೀಡಿದೆ. ಕಳೆದ 6 ವರ್ಷಗಳಲ್ಲಿ ದೇಶದಾದ್ಯಂತ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.72 ಕೋಟಿ ಮನೆಗಳನ್ನು ನಿರ್ವಿುಸಲಾಗಿದೆ ಎಂದರು.

    ರೈತರು ದೇಶದ ಬೆನ್ನೆಲುಬು ಎನ್ನುತ್ತಲೇ ರೈತರ ಬೆನ್ನೆಲುಬನ್ನು ಕಾಂಗ್ರೆಸ್ ಮುರಿಯಿತು ಎಂದು ಟೀಕಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ದೇಶದಲ್ಲಿ ಅತಿ ಹೆಚ್ಚು ಅವಧಿಯವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ಗ್ರಾಮೀಣರ ಬದುಕಿಗೆ ಕೊಳ್ಳೆ ಇಟ್ಟಿತು ಎಂದು ಹೇಳಿದರು.

    ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದಾಗಿ ಗ್ರಾಮದಲ್ಲಿದ್ದ ಚಮ್ಮಾರ, ಬಡಿಗೇರ, ಕಮ್ಮಾರರು ಸೇರಿ ಇತರರು ಉದ್ಯೋಗ ಕಳೆದುಕೊಂಡು, ನಗರ ಪ್ರದೇಶಕ್ಕೆ ಒಲಸೆ ಹೋಗಿದ್ದಾರೆ. ಗುಡಿ ಕೈಗಾರಿಕೆಗಳು ಅವಸಾನಗೊಂಡಿವೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನುಭವಿಸಿದ್ದು, ಆ ಪಕ್ಷ ಮನೆಗೆ ಹೋಗುವ ಸ್ಥಿತಿ ಬಂದಿದೆ. ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ ಎಂದು ಟೀಕಿಸಿದರು.

    ವಸತಿ ಸಚಿವ ವಿ. ಸೋಮಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿದರು. ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ದುರ್ಯೋಧನ ಐಹೊಳಿ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಎನ್. ರವಿಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡರ, ಸೀಮಾ ಮಸೂತಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಹಾಗೂ ಇತರರಿದ್ದರು.

    ಆದರ್ಶ ಗ್ರಾಪಂಗೆ ಬಹುಮಾನ

    ಧಾರವಾಡ ಜಿಲ್ಲೆಯ ಆಯ್ದ ಆದರ್ಶ ಗ್ರಾಪಂಗಳಿಗೆ ಬಹುಮಾನ ನೀಡುವ ಬಗ್ಗೆ ಚಿಂತನೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಮೊದಲ ಬಹುಮಾನ 25 ಲಕ್ಷ ರೂ., 2ನೇ ಬಹುಮಾನ 15 ಲಕ್ಷ ರೂ. ಹಾಗೂ 3ನೇ ಬಹುಮಾನ 5 ಲಕ್ಷ ರೂ. ನೀಡಲಾಗುವುದು. ಜಿಲ್ಲೆಯ ಪ್ರತಿ ವಿಧಾನಸಭೆ ವ್ಯಾಪ್ತಿಯ ಗ್ರಾಪಂಗಳು ಮಾಡಿರುವ ಸಾಧನೆ ಆಧಾರದ ಮೇಲೆ ಗ್ರಾಪಂಗಳನ್ನು ಆಯ್ಕೆ ಮಾಡಲಾಗುವುದು ಎಂದರು. ಶಾಸಕರು ತಮ್ಮ ಅನುದಾನ ಅಥವಾ ಇತರ ಅನುದಾನದಲ್ಲಿ ಹಣ ಹೊಂದಿಸಿಕೊಂಡು ಈ ಬಹುಮಾನ ನೀಡಬೇಕು. ಈ ಕುರಿತು ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಾಸಕರೊಂದಿಗೆ ರ್ಚಚಿಸಲಾಗುವುದು. ಆದರ್ಶ ಗ್ರಾಪಂಗಳ ಆಯ್ಕೆಗೆ ಪ್ರತ್ಯೇಕ ಸಮಿತಿಯನ್ನೂ ರಚಿಸಲಾಗುವುದು ಎಂದು ತಿಳಿಸಿದರು.

    ಎರಡೂವರೆ ತಾಸು ವಿಳಂಬ

    ಹುಬ್ಬಳ್ಳಿಯ ಗೋಕುಲ ಗಾರ್ಡನ್​ನಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಬಿಜೆಪಿ ಬೆಂಬಲಿತ ಗ್ರಾಪಂಗಳ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟನೆಗೊಂಡಿದ್ದು ಮಧ್ಯಾಹ್ನ ಸುಮಾರು 1 ಗಂಟೆಗೆ.

    ಬರೊಬ್ಬರಿ ಎರಡೂವರೆ ತಾಸು ತಡವಾಗಿ ಕಾರ್ಯಕ್ರಮ ಪ್ರಾರಂಭಗೊಂಡಿತು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬೆಳಗ್ಗೆ 10 ಗಂಟೆಗೆ ಗ್ರಾಪಂ ಸದಸ್ಯರು ಆಗಮಿಸಿದ್ದರು. ಸದಸ್ಯರಿಗೆ ತಿಂಡಿ, ಭೋಜನದ ವ್ಯವಸ್ಥೆಯನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು. ಆದರೂ ಕಾರ್ಯಕ್ರಮ ಪ್ರಾರಂಭಗೊಳ್ಳುವವರೆಗೆ ನೂತನ ಸದಸ್ಯರಿಗೆ ಕಾಯುವುದು ಅನಿವಾರ್ಯವಾಗಿತ್ತು.

    ಜಲಜೀವನ ಯೋಜನೆಯಡಿ ಮುಂದಿನ 2 ವರ್ಷಗಳಲ್ಲಿ ಧಾರವಾಡ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಒದಗಿಸುವ ಯೋಜನೆ ಇದೆ. ಇದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ವಿುಸಲಾಗುವುದು.
    | ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts