More

    ಸಾಂಸ್ಕೃತಿಕ ಭವನಕ್ಕೆ ನಿವೇಶನ ಗುರುತಿಸಿ

    ಚಿಕ್ಕಮಗಳೂರು: ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಸಾಂಸ್ಕೃತಿಕ ಭವನ ನಿರ್ವಣಕ್ಕೆ ಪ್ರತಿ ಜಿಲ್ಲೆಯಲ್ಲೂ ನಿವೇಶನ ಗುರುತಿಸಿ, ಕಾಮಗಾರಿ ಆರಂಭಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಮತ್ತು ಸಂಸ್ಕತಿ ಸಚಿವ ಸಿ.ಟಿ.ರವಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

    ಚಿಕ್ಕಮಗಳೂರಲ್ಲಿ ಬುಧವಾರ ಎಲ್ಲ ಜಿಲ್ಲಾಧಿಕಾರಿಗಳು, ಇಲಾಖೆ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಕರ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಅವರು, ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು ಮತ್ತೆ ತಡಮಾಡದೆ ಪ್ರತಿ ಜಿಲ್ಲೆಗಳಲ್ಲೂ ನಿವೇಶನ ಗುರುತಿಸಿ ಕಾಮಗಾರಿ ಆರಂಭಿಸಿ ಎಂದು ನಿರ್ದೇಶನ ನೀಡಿದರು.

    ಸರ್ಕಾರ ಈಗಾಗಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಮನಗರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮಂಡ್ಯ , ಕೊಡುಗು, ಚಾಮರಾಜನಗರ, ದಕ್ಷಿಣಕನ್ನಡ, ಚಿಕ್ಕಮಗಳೂರು, ಉಡುಪಿ , ಬೆಳಗಾವಿ, ಉತ್ತರಕನ್ನಡ, ವಿಜಯಪುರ, ಹಾವೇರಿ ಗದಗ, ಬಾಗಲಕೋಟೆ, ಕಲಬುರಗಿ ಮತ್ತು ಯಾದಗಿರಿ ಮತ್ತಿತರ ಜಿಲ್ಲೆಗಳಲ್ಲಿ ಒಂದು ತಿಂಗಳೊಳಗೆ ಕಾಮಗಾರಿ ಆರಂಭವಾಗಬೇಕು. ಒಂದು ವೇಳೆ ಕಳಪೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

    ಸಾಂಸ್ಕೃತಿಕ ಭವನದ ಜತೆಗೆ ರಂಗಮಂದಿರಗಳು ಇಲ್ಲದಿರುವ ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡುಗು, ಉಡುಪಿ, ಧಾರವಾಡ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜಾಗ ಗುರುತಿಸಿ ಕೆಲಸ ಆರಂಭಿಸಬೇಕು. ಅಲ್ಲದೆ ಯಾದಗಿರಿ, ಚಿಕ್ಕಬಳ್ಳಾಪುರ, ಕೊಪ್ಪಳ, ದಾವಣಗೆರೆ, ಚಾಮರಾಜನಗರ, ಗದಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಪೂರ್ಣವಾಗಿರುವ ರಂಗಮಂದಿರಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

    ಭವನಗಳನ್ನು ಶೀಘ್ರ ನಿರ್ವಿುಸಿ: ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ನಿರ್ವಿುಸುತ್ತಿರುವ ತುಳು ಭವನ, ಬ್ಯಾರಿ ಭವನ ಹಾಗೂ ಕನ್ನಡ ಭವನಗಳನ್ನು ಶೀಘ್ರ ನಿರ್ವಿುಸಿ ಕಾರ್ಯಾರಂಭಿಸಬೇಕು. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಘೊಷಿಸಿರುವ ಸಂತ ಶಿಶುನಾಳ ಶರೀಫ ಹಾಗೂ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಜನ್ಮಸ್ಥಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಯುವಜನ ಸಬಲೀಕರಣ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು. ಪ್ರತಿ ಜಿಲ್ಲೆಗಳಲ್ಲೂ ಪ್ರವಾಸೋದ್ಯಮ ಉತ್ತೇಜಿಸಲು ಸಾಕಷ್ಟು ಅವಕಾಶಗಳಿವೆ. ಇನ್ನು ಮುಂದೆ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯುಳ್ಳ ಕೈಪಿಡಿ ಹೊಂದಿರಲೇಬೇಕು. ವೆಬ್​ಸೈಟ್, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಯನ್ನು ಕಾಲ ಕಾಲಕ್ಕೆ ನವೀಕರಿಸುತ್ತಿರಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿಗಳು ತಮ್ಮ ತಮ್ಮ ಫೇಸ್​ಬುಕ್, ಟ್ವಿಟರ್ ಅಕೌಂಟ್​ಗಳನ್ನು ರಾಜ್ಯ ಪ್ರವಾಸೋದ್ಯಮ ಖಾತೆಗೆ ಟ್ಯಾಗ್ ಮಾಡಬೇಕು, ವೆಬ್​ಸೈಟ್, ಸೋಶಿಯಲ್ ಮೀಡಿಯಾದಲ್ಲಿ ಬರುವ ವಿಷಯಗಳನ್ನು ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪ್ರವಾಸಿ ತಾಣ ಅಭಿವೃದ್ಧಿಗೆ ಟಾಸ್ಕ್​ಫೋರ್ಸ್: ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಪ್ರತಿ ಜಿಲ್ಲೆಯಲ್ಲೂ ಸ್ಥಳೀಯ ಶಾಸಕರನ್ನೊಳಗೊಂಡ ಜಿಲ್ಲಾ ಮಟ್ಟದ ಟಾಸ್ಕ್​ಫೋರ್ಸ್ ರಚಿಸುವುದು, ಜಿಲ್ಲೆಯ ಪ್ರವಾಸಿ ತಾಣಗಳ ಫೋಟೋ, ವಿಡಿಯೋ ಕ್ಲಿಪಿಂಗ್ ತಯಾರಿಸಿ ಇಲಾಖೆಗೆ ಕಳುಹಿಸಬೇಕು ಎಂದು ಸಚಿವ ರವಿ ಅವರು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಪ್ರತಿ ವರ್ಷ ಉತ್ಸವ, ಮೇಳಗಳನ್ನು ಆಯೋಜಿಸಲಾಗುತ್ತದೆ. ದೇಶ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಮಗ್ರ ಮಾಹಿತಿ ಒಳಗೊಂಡ ವಾರ್ಷಿಕ ಕ್ಯಾಲೆಂಡರ್ ತಯಾರಿಸಬೇಕು. ಕೆಲವೆಡೆ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಮೀನನ್ನು ಖಾಸಗಿಯವರು ಕಬಳಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳೇ ಜಮೀನು ರಕ್ಷಣೆಯ ಹೊಣೆ ಹೊರಬೇಕು ಎಂದು ಎಚ್ಚರಿಸಿದರು.

    ಬೇಕಾಬಿಟ್ಟಿ ಅನುಮೋದನೆ ಸಹಿಸಲ್ಲ: ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ ಎರಡು ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು. ಅತ್ಯುತ್ತಮವಾಗಿ ಕೆಲಸ ಮಾಡಿದ ಜಿಲ್ಲಾಧಿಕಾರಿಗಳನ್ನು ಪುರಸ್ಕರಿಸಲಾಗುವುದು. ಕೆಲವೆಡೆ ಕಾಮಗಾರಿಗಳಿಗೆ ಬೇಕಾಬಿಟ್ಟಿ ಅಂದಾಜು ಪಟ್ಟಿಗೆ ಕಣ್ಣುಮುಚ್ಚಿ ಅನುಮೋದನೆ ನೀಡಲಾಗಿದೆ. ಇದನ್ನು ನಾನು ಸಹಿಸುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಖಡಕ್ಕಾಗಿ ಹೇಳಿದರು. ಯಾತ್ರಿ ನಿವಾಸಕ್ಕೆ ಲಿಂಟಲ್​ವರೆಗೂ ಮಾತ್ರ ತಯಾರಿಸಲಾದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಿಲ್ಲೆಗಳಲ್ಲಿರುವ ಪ್ರವಾಸಿ ಆಪರೇಟರ್ಸ್, ಟ್ಯಾಕ್ಸಿ ಸೇವೆ, ಆಸ್ಪತ್ರೆ, ರೆಸಾರ್ಟ್, ಹೋಮ್ ಸ್ಟೇ ಮಾಲೀಕರೊಂದಿಗೆ ಕಾಲಕಾಲಕ್ಕೆ ರ್ಚಚಿಸಬೇಕು ಎಂದು ತಿಳಿಸಿದರು.

    ಕ್ರೀಡಾಂಗಣಕ್ಕೆ ಜಾಗ ಗುರುತಿಸಿ: ಜಿಲ್ಲಾ ಕೇಂದ್ರಗಳಲ್ಲಿ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ, ಈಜುಕೊಳ ಮತ್ತಿತರ ಕ್ರೀಡಾ ಮೂಲ ಸೌಕರ್ಯಕ್ಕಾಗಿ ಕನಿಷ್ಠ 12ರಿಂದ 20 ಎಕರೆ ಹಾಗೂ ತಾಲೂಕು ಕೇಂದ್ರಗಳಲ್ಲಿ 4ರಿಂದ 6 ಎಕರೆ ಜಾಗ ಗುರುತಿಸುವಂತೆ ಸಚಿವ ಸಿ.ಟಿ.ರವಿ ಸೂಚಿಸಿದರು. 2013-14ರಿಂದ 2018-19ರ ಅವಧಿಯಲ್ಲಿ 1567 ಫಲಾನುಭವಿಗಳಿಗೆ ಟ್ಯಾಕ್ಸಿ ವಿತರಿಸುವುದು ಬಾಕಿ ಉಳಿದಿದೆ. ನಾನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟಾಗ ನನ್ನ ಗಮನಕ್ಕೆ ಬಂದಿದೆ. ಡಿಸೆಂಬರ್ ಒಳಗೆ ಅರ್ಹ ಪಲಾನುಭವಿಗಳನ್ನು ಗುರುತಿಸಿ ವಿತರಣೆ ಮಾಡಲೇಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts