More

    ಸಹ್ಯಾದ್ರಿ ಕಾಲೇಜಿಗೆ 1 ಕೋಟಿ ರೂ. ಅನುದಾನ

    ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ ಹೆಚ್ಚುವರಿ ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣವೇ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಉಳಿದ ಕಾಮಗಾರಿಗಳಿಗೆ ಮುಂದಿನ ಬಜೆಟ್​ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ 6.5 ಕೋಟಿ ರೂ. ವೆಚ್ಚದ ಕಲಾ ಕಾಲೇಜಿನ ಪ್ರವೇಶ ದ್ವಾರ, ವಿಜ್ಞಾನ ಕಾಲೇಜು ಮತ್ತು ಪುರುಷರ ವಿದ್ಯಾರ್ಥಿ ನಿಲಯದ ವಿಸ್ತರಣಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮಲೆನಾಡಿನ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹ್ಯಾದ್ರಿ ಕಾಲೇಜು ಒಂದಾಗಿದ್ದು ಅನೇಕರನ್ನು ನಾಡಿಗೆ, ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.

    80 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಹ್ಯಾದ್ರಿ ಕಾಲೇಜು, ಮೈಸೂರಿನ ಜಯಚಾಮರಾಜ ಒಡೆಯರಿಂದ ಸ್ಥಾಪಿಸಲ್ಪಟ್ಟು ಮಹಾಕವಿ ಕುವೆಂಪು ಅವರಿಂದ ಸಹ್ಯಾದ್ರಿ ಎಂದು ನಾಮಾಂಕಿತಗೊಂಡಿದೆ. ಪ್ರೊ. ಸಿ.ಎನ್.ಆರ್.ರಾವ್, ಜಸ್ಟೀಸ್ ರಾಮಾ ಜೋಯಿಸ್, ಶಾಂತವೇರಿ ಗೋಪಾಲಗೌಡ, ಪೂರ್ಣಚಂದ್ರ ತೇಜಸ್ವಿ, ಕೆ.ಎಸ್.ನಿಸಾರ್ ಅಹಮದ್, ಬಿ.ಕೆ.ಸುಮಿತ್ರಾ ಸೇರಿ ಈ ಕಾಲೇಜಿನಲ್ಲಿ ಕಲಿತ ಹಲವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿದ್ದಾರೆ. ಈ ಭಾಗದ ಶೈಕ್ಷಣಿಕ ಅಗತ್ಯತೆಗಳನ್ನು ಮನಗಂಡು ಅದನ್ನು ಪೂರೈಸುವುದರಲ್ಲಿ ಕುವೆಂಪು ವಿವಿ ಮತ್ತು ಸಹ್ಯಾದ್ರಿ ಕಾಲೇಜು ನಿರಂತರವಾಗಿ ತೊಡಗಿಕೊಂಡಿದೆ ಎಂದರು.

    ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟವನ್ನು ಹಾಗೂ ಅವರ ಸೃಜನಶೀಲ ಚಟುವಟಿಕೆಗಳನ್ನು ಸದಾ ಬೆಂಬಲಿಸá-ತ್ತ ಬಂದಿದೆ. ವೃತ್ತಿಪರತೆಯನ್ನು ಕೌಶಲಗಳೊಂದಿಗೆ ಕಲಿಸುವ ಜತೆಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹೊಸ ಹೊಸ ವೈಜ್ಞಾನಿಕ ತಿಳಿವಳಿಕೆ ಹಾಗೂ ಅರಿವಿನ ವಿಸ್ತಾರಕ್ಕೆ ಪೂರಕವಾಗಿ ಬೆಳೆಯುತ್ತಿರುವ ಸಹ್ಯಾದ್ರಿ ಕಾಲೇಜು ತನ್ನ ಪರಂಪರೆಯನ್ನು ಉಳಿಸಿಕೊಳ್ಳುವುದಕ್ಕೆ ಪಾರಂಪರಿಕ ಮಾದರಿಯ ಕಟ್ಟಡ ವಿನ್ಯಾಸಗಳನ್ನು ರೂಪಿಸಿರುವುದನ್ನು ಶ್ಲಾಘಿಸಿದರು.

    ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧಮೇಗೌಡ ಮಾತನಾಡಿ, ರಾಜ್ಯದಲ್ಲಿ 20 ಸಾವಿರ ಅತಿಥಿ ಉಪನ್ಯಾಸಕರಿದ್ದು ಅವರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಸಿಎಂಗೆ ಮನವಿ ಮಾಡಿದರು.

    ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಮಾತನಾಡಿ, ರಾಜ್ಯ ಸರ್ಕಾರ ವಿವಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಎಂದಿಗೂ ನಿರಾಸೆ ಮಾಡಿಲ್ಲ. ಕಂಪ್ಯೂಟರ್ ಲ್ಯಾಬ್ ಸೇರಿ 28 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್​ಗೆ ಮೈಸೂರು ಮ್ಯಾಚ್ ಫ್ಯಾಕ್ಟರಿ ಜಾಗವನ್ನು ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದರು.

    ಶಾಸಕ ಆರಗ ಜ್ಞಾನೇಂದ್ರ, ಎಂಎಲ್​ಸಿಗಳಾದ ಆರ್.ಪ್ರಸನ್ನಕುಮಾರ್, ಎಸ್.ಎಲ್.ಭೋಜೇಗೌಡ, ಎಸ್.ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಿಗಮಗಳ ಅಧ್ಯಕ್ಷರಾದ ಡಿ.ಎಸ್.ಅರುಣ್, ಕೆ.ಎಸ್.ಗುರುಮೂರ್ತಿ, ಪವಿತ್ರಾ ರಾಮಯ್ಯ, ಎಸ್.ಎಸ್.ಜ್ಯೋತಿಪ್ರಕಾಶ್, ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಮೇಯರ್ ಸುವರ್ಣಾ ಶಂಕರ್, ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಸಿಇಒ ಎಂ.ಎಲ್.ವೈಶಾಲಿ, ಕುವೆಂಪು ವಿವಿ ಕುಲಸಚಿವರಾದ ಪೊ›. ಎಸ್.ಎಸ್.ಪಾಟೀಲ್, ಪ್ರೊ. ಪಿ.ಕಣ್ಣನ್, ಸಿಂಡಿಕೇಟ್ ಸದಸ್ಯ ಬಳ್ಳೆಕೆರೆ ಸಂತೋಷ್, ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಆರ್.ಶಶಿರೇಖಾ, ಡಾ. ಎಚ್.ಎಂ.ವಾಗ್ದೇವಿ, ಡಾ. ಕೆ.ಬಿ.ಧನಂಜಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts