More

    73 ಸಾವಿರ ಗಡಿ ದಾಟಿದ ಬಿಎಸ್​ಇ, 22 ಸಾವಿರ ಮೀರಿದ ನಿಫ್ಟಿ: ಷೇರು ಮಾರುಕಟ್ಟೆ ದಾಖಲೆಯ ಜಿಗಿತಕ್ಕೆ ಕಾರಣಗಳೇನು?

    ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸೋಮವಾರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದವು. ಬಿಎಸ್​ಇ ಸೂಚ್ಯಂಕ ಇದೇ ಮೊದಲ ಬಾರಿಗೆ 73,000 ಅಂಕಗಳ ಗಡಿಯನ್ನು ದಾಟಿದರೆ, ನಿಫ್ಟಿ ಸೂಚ್ಯಂಕ 22,000 ಅಂಕಗಳನ್ನು ಮೀರಿ ಗರಿಷ್ಠ ಮಟ್ಟವನ್ನು ತಲುಪಿತು,

    ಐಟಿ ಷೇರುಗಳು, ರಿಲಯನ್ಸ್​, ಎಚ್​ಡಿಎಫ್​ ಬ್ಯಾಂಕ್ ಷೇರುಗಳು ಸೂಚ್ಯಂಕ ದಾಖಲೆ ಬರೆಯಲು ಸಾಕಷ್ಟು ಕೊಡುವೆ ನೀಡಿದವು. ಸತತ ಐದನೇ ದಿನವೂ ಸೂಚ್ಯಂಕಗಳು ಹೆಚ್ಚಾಗಿರುವುದು ವಿಶೇಷ.
    30-ಷೇರುಗಳ ಬಿಎಸ್‌ಇ ಸೂಚ್ಯಂಕ 759.49 ಅಂಕಗಳು ಅಥವಾ ಶೇಕಡಾ 1.05 ರಷ್ಟು ಏರಿಕೆ ಕಂಡು 73,327.94 ರ ಜೀವಿತಾವಧಿಯ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ನಡುವೆ ಇದು 833.71 ಅಂಕಗಳ ಏರಿಕೆ ಕಂಡು ಸಾರ್ವಕಾಲಿಕ ಇಂಟ್ರಾ-ಡೇ ಗರಿಷ್ಠ ಮಟ್ಟವಾದ 73,402.16 ಅಂಕಗಳನ್ನು ತಲುಪಿತ್ತು.

    ನಿಫ್ಟಿ ಸೂಚ್ಯಂಕವು 202.90 ಅಂಕಗಳು ಅಥವಾ ಶೇಕಡಾ 0.93 ರಷ್ಟು ಏರಿಕೆಯಾಗಿ 22,097.45 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ನಡುವೆ ಇದು 221 ಅಂಕಗಳ ಹೆಚ್ಚಳವಾಗಿ ಸಾರ್ವಕಾಲಿಕ ಇಂಟ್ರಾ- ಡೇ ಗರಿಷ್ಠ ಮಟ್ಟವಾದ 22,115.55 ಅಂಕಗಳನ್ನು ತಲುಪಿತ್ತು.

    ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಳಿಗಿಂತ ಉತ್ತಮ ಲಾಭ ಮತ್ತು ಆದಾಯ ಫಲಿತಾಂಶಗಳು ಬಂದ ಹಿನ್ನೆಲೆಯಲ್ಲಿ ಐಟಿ ಷೇರುಗಳಾದ ಇನ್ಫೋಸಿಸ್​, ಟಿಸಿಎಸ್​, ವಿಪ್ರೋ, ಎಚ್​ಸಿಎಲ್​ಗಳಿಗೆ ಬೇಡಿಕೆ ಉಂಟಾಗಿದ್ದು ಸೂಚ್ಯಂಕವು ಹೊಸ ದಾಖಲೆಯ ಉನ್ನತ ಮಟ್ಟವನ್ನು ತಲುಪಲು ನೆರವಾಯಿತು. ತೈಲ, ಅನಿಲ ಮತ್ತು ಇಂಧನ ವಲಯದ ಷೇರುಗಳು ಕೂಡ ಈ ಹೆಚ್ಚಳಕ್ಕೆ ಕೊಡುಗೆ ನೀಡಿದವು.

    ಡಿಸೆಂಬರ್ ತ್ರೈಮಾಸಿಕ ಆದಾಯ ಪ್ರಕಟಣೆಗೊಂಡ ನಂತರ ವಿಪ್ರೋ ಷೇರುಗಳು ಶೇಕಡಾ 6 ರಷ್ಟು ಹೆಚ್ಚಾಗಿವೆ. ಎಚ್‌ಸಿಎಲ್ ಟೆಕ್ನಾಲಜೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮೊದಲಾದ ಷೇರುಗಳು ಪ್ರಮುಖವಾಗಿ ಏರಿಕೆ ಕಂಡವು.

    ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಲಾರ್ಸೆನ್ ಆ್ಯಂಡ್​ ಟೂಬ್ರೊ, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಹಿನ್ನಡೆ ಕಂಡಿವೆ.

    ಸೂಚ್ಯಂಕಗಳ ಪೈಕಿ ಐಟಿ ವಲಯದ ಷೇರುಗಳು ಶೇ.1.79, ಟೆಕ್ ಷೇರುಗಳು ಶೇ.1.79, ತೈಲ ಮತ್ತು ಅನಿಲ ಷೇರುಗಳು (ಶೇ. 1.70), ಇಂಧನ ಷೇರುಗಳು (ಶೇ.1.66), ದೂರಸಂಪರ್ಕ ಷೇರುಗಳು (ಶೇ.1.41) ಮತ್ತು ಹಣಕಾಸು ಸೇವೆಗಳ ಷೇರುಗಳು (ಶೇ.0.81) ಏರಿಕೆ ಕಂಡಿವೆ. ಸರಕು ಮತ್ತು ಲೋಹ ವಲಯದ ಷೇರುಗಳು ಹಿನ್ನಡೆ ಅನುಭವಿಸಿವೆ.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೋ ಮತ್ತು ಶಾಂಘೈ ಏರಿಕೆ ಕಂಡರೆ, ಹಾಂಗ್ ಕಾಂಗ್ ಸ್ವಲ್ಪಮಟ್ಟಿ ಹಿನ್ನಡೆ ಅನುಭವಿಸಿತು. ಐರೋಪ್ಯ ಮಾರುಕಟ್ಟೆಗಳು ಬಹುತೇಕವಾಗಿ ಕಡಿಮೆ ವಹಿವಾಟು ನಡೆಸಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 340.05 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಶುಕ್ರವಾರದಂದು ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 847.27 ಅಂಕಗಳ ಏರಿಕೆ ಕಂಡು 72,568.45 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 247.35 ಅಂಕ ಏರಿಕೆ ದಾಖಲಿಸಿ 21,894.55ಕ್ಕೆ ತಲುಪಿತ್ತು.

    ವಿವಿಧ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​: 38,129.88 (254.45 ಅಂಕ ಹೆಚ್ಚಳ)
    ಬಿಎಸ್​ಇ ಸ್ಮಾಲ್​ ಕ್ಯಾಪ್​: 44,552.34 (48.64 ಅಂಕ ಹೆಚ್ಚಳ)
    ನಿಫ್ಟಿ ಮಿಡ್​ ಕ್ಯಾಪ್​ 100 ಸೂಚ್ಯಂಕ: 47,837.95 (325.35 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ: 15,610.50 (65.85 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 250: 14,589.00 (36.25 ಅಂಕ ಹೆಚ್ಚಳ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts