More

    ಕಣ್ಣೀರು ಹಾಕುತ್ತಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬಿಎಸ್​ವೈ

    ಬೆಂಗಳೂರು: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು 75 ವರ್ಷ ಮೇಲ್ಪಟ್ಟ ನಾಯಕರಿಗೆ ಸ್ಥಾನಮಾನ ಕೊಡುವುದಿಲ್ಲ ಎಂಬ ತೀರ್ಮಾನವನ್ನು ತೆಗೆದುಕೊಂಡರು. ಯಾರಿಗೂ ಅವಕಾಶ ಕೊಡಲಿಲ್ಲ. ಆದರೆ, ನನಗೆ ಅತ್ಯಂತ ವಾತ್ಸಲ್ಯ, ಪ್ರೀತಿ ಮತ್ತು ವಿಶ್ವಾಸದಿಂದ ಅವಕಾಶ ಮಾಡಿಕೊಟ್ಟರು. ಎರಡು ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದು ಕಣ್ಣೀರಾಕುತ್ತಲೇ  ಬಿ.ಎಸ್​​ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.

    ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಎಸ್​ವೈ, ಆರಂಭದಿಂದಲೇ ತುಂಬಾ ಭಾವುಕವಾಗಿ ಮಾತನಾಡಿದರು. ನಮ್ಮನ್ನು ಮಾತನಾಡಿಸಲು 50 ಮಂದಿ ಸಿಗದೇ ಇರುವ ಕಾಲದಲ್ಲಿ ಎಲ್ಲ ಕಾರ್ಯಕರ್ತರ ಜತೆಗೂಡಿ ರಾಜ್ಯಾದ್ಯಂತ ಪಾದಾಯಾತ್ರೆ ಮಾಡಿ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದೇನೆ. ನಾನೆಂದು ಹಿಂದೆ ತಿರುಗಿ ನೋಡಲೇ ಇಲ್ಲ. ನನ್ನ ಕರ್ತವ್ಯವನ್ನು ಜನಮೆಚ್ಚುವ ರೀತಿಯಲ್ಲಿ ನಿರ್ವಹಿಸಿದೆ ಎಂಬ ತೃಪ್ತಿ ಮತ್ತು ಸಮಾಧಾನ ನನಗಿದೆ ಎಂದರು.

    ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ ಶಿವಮೊಗ್ಗಕ್ಕೆ ಬಂದು ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಜೀವನವನ್ನು ಪ್ರಾರಂಭ ಮಾಡಿದೆ. ಆರ್​ಎಸ್​ಎಸ್​ ಪ್ರಚಾರಕನಾಗಿ ಕೆಲಸ ಆರಂಭ ಮಾಡಿ, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಪುರಸಭೆ ಅಧ್ಯಕ್ಷನಾದೆ. ಈ ವೇಳೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ನಾನು ಸತ್ತೇ ಹೋದೆ ಅಂದುಕೊಂಡಿದ್ದರು. ಆದರೆ, ಭಗವಂತನ ದಯೆಯಿಂದ ಬದುಕಿದೆ. ಇನ್ನು ಮುಂದೆ ಬದುಕಿದರೆ ನಾಡಿನ ಜನತೆಗಾಗಿ ಎಂದು ಅಂದೇ ತೀರ್ಮಾನಿಸಿದೆ. ಅಂದರಂತೆಯೇ ನಡೆದುಕೊಂಡೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದರು.

    ರೈತ ಪರ, ದಲಿತರ ಪರ ಹೋರಾಟಗಳನ್ನು ಮಾಡಿಕೊಂಡು ಬಂದೆ. ಒಮ್ಮೆ 50 ಸಾವಿರ ರೈತರ ಸೇರಿಸಿ ಸಭೆ ನಡೆಸಿದಾಗ ಸಚಿವರಾಗಿದ್ದ ರಾಜನಾಥ್​ ಸಿಂಗ್​ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು. ಹೀಗೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಸಾಕಷ್ಟು ಕೆಲಸ ಮಾಡಿದೆ. ಅದಕ್ಕಾಗಿ ನಾನಿಂದು ಈ ಸ್ಥಾನದಲ್ಲಿದ್ದೇನೆ.

    ನನ್ನ ಲೋಕಸಭೆಗೆ ಸ್ಪರ್ಧಿಸುವಂತೆ ವರಿಷ್ಟರು ಕೇಳಿದ್ದರು, ನಾನು ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಬೇಕಿದೆ. ಯಾವ ಕಾರಣಕ್ಕೂ ದೆಹಲಿಗೆ ಬರುವುದಿಲ್ಲ. ಪಕ್ಷ ಕಟ್ಟಲು ನನಗೆ ಅವಕಾಶ ನೀಡಿ, ನಾನು ದೆಹಲಿಗೆ ಬರುವುದಿಲ್ಲ ಎಂದು ಹೇಳಿದ್ದೆ. ಅಟಲ್​ ಬಿಹಾರಿ ವಾಜಪೇಯಿ, ಲಾಲ್​ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್​ ಜೋಷಿ ಇವರೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುವಂತಹ ಸಂದರ್ಭದಲ್ಲಿ ಇನ್ನೂರು – ಮುನ್ನೂರು ಜನ ಸೇರುತ್ತಿರಲಿಲ್ಲ. ಎದೆಗುಂದದೆ ಅವರೆಲ್ಲರ ಸಹಕಾರದಿಂದ ನಾಡಿನ ಉದ್ದಕ್ಕೂ ಹೋರಾಟ ಮಾಡಿದೆ. ಅವರೆಲ್ಲ ದಯೆಯಿಂದ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಶಿಕಾರಿಪುರದ ಜನ ನನ್ನನ್ನು 7 ಬಾರಿ ನನ್ನನ್ನು ಗೆಲ್ಲಿಸಿದರು ಎಂದು ಬಿಎಸ್​ವೈ ಕಣ್ಣೀರಾಕಿದರು.

    ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ, ಹಂಗಾಮಿ ಸಿಎಂ ಆಗಿ ಯಡಿಯೂರಪ್ಪ ಮುಂದುವರಿಕೆ

    2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ… ಎನ್ನುತ್ತಲೇ ನೂತನ ಸಿಎಂ ಬಗ್ಗೆ ಬಿಎಸ್​ವೈ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts