More

    ಯಡಿಯೂರಪ್ಪ ಕಣ್ಣೀರಿಗೆ ದುಬಾರಿ ಬೆಲೆತೆತ್ತ ಬಿಜೆಪಿ

    ಶಿವಾನಂದ ತಗಡೂರು
    ಬೆಂಗಳೂರು: ಇಷ್ಟೊಂದು ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಖಂಡಿತಾ ನಿರೀಕ್ಷಿಸಿರಲಿಲ್ಲ! ರಾಜ್ಯದ ಮಟ್ಟಿಗೆ ಬಿಜೆಪಿ ಪರಮೋಚ್ಚ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ನಾಯಕತ್ವ ಸ್ಥಾನದಿಂದ ತೆರೆ ಮರೆಗೆ ಸರಿಸಿದ ದಿನದಿಂದಲೇ ಬಿಜೆಪಿಗೆ ಅಪಾಯದ ಗಂಟೆ ಬಾರಿಸುತ್ತಲೇ ಬಂದಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.

    ಈಗ ಎಲ್ಲವನ್ನೂ ಬಡ್ಡಿ ಸಹಿತ ದುಬಾರಿ ಬೆಲೆ ತೆರಬೇಕಾಗಿ ಬಂದಿದ್ದು ಕಾಲದ ಮಹಿಮೆ. ಒಬ್ಬ ಜನಪ್ರಿಯ ಮತ್ತು ಪ್ರಭಾವಿ ಜನನಾಯಕನ ಸ್ಥಾನವನ್ನು ಯಾವುದೇ ಪಕ್ಷದಲ್ಲಿ ಹಠಾತ್ತಾಗಿ ತುಂಬಲು ಸಾಧ್ಯವೇ ಇಲ್ಲ. ಇದು ದಶಕಗಳ ಹೋರಾಟದ ಪರಿಣಾಮವಾಗಿ ರೂಪುಗೊಂಡಿರುತ್ತದೆ. ತಾವಾಗಿಯೇ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದರು ಎನ್ನುವ ಮಾತುಗಳನ್ನು ಬಿಜೆಪಿ ನಾಯಕರು ಪ್ರತಿಪಾದಿಸಿದರೂ, ಜನರು ಅದನ್ನು ಹೃದಯಕ್ಕೆ ಸ್ವೀಕರಿಸಲಿಲ್ಲ. ಅವರಾಗಿಯೇ ರಾಜೀನಾಮೆ ನೀಡುವಂತೆ ಮಾಡಿದ ಪರಿಸ್ಥಿತಿ ಏನು? ಎನ್ನುವುದು ಸಾಮಾನ್ಯರಿಗೂ ಅರಿವಿದ್ದ ಪರಿಣಾಮ ಅದರ ಬೆಲೆಯನ್ನು ಚುನಾವಣೆಯಲ್ಲಿ ತೆರುವಂತಾಗಿದೆ. ಯಡಿಯೂರಪ್ಪ ಅವರ ಕಣ್ಣೀರಿಗೆ ಬಿಜೆಪಿ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಲಿಂಗಾಯಿತ ಸಮುದಾಯದ ಸ್ವಾಮೀಜಿಗಳು ನೀಡಿದ್ದ ಎಚ್ಚರಿಕೆ ನಿಜವಾದಂತಿದೆ.

    ಎಲ್ಲವೂ ದೆಹಲಿಯಿಂದ

    ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾ ಅವರಿಂದ ಹಿಡಿದು ಇಡೀ ಸಂಪುಟ ಮತ್ತು ಬಿಜೆಪಿ ಅಧಿಕಾರವಿರುವ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡಿದರೂ, ಅದು ನಿರೀಕ್ಷಿತ ಫಲ ನೀಡಿಲ್ಲ. ರಾಜ್ಯದ ಚುನಾವಣೆ ಇತಿಹಾಸ ನೋಡುವುದಾದರೆ, ದೆಹಲಿಯಿಂದ ಬಂದು ಈ ಪ್ರಮಾಣದಲ್ಲಿ ಪ್ರಚಾರ ಮಾಡಿದ ಉದಾಹರಣೆಗಳಿಲ್ಲ. ಬಿಜೆಪಿಯು, ನಾಡಿನ ಸೊಗಡು ಬದಿಗೆ ಸರಿಸಿ ದೆಹಲಿಗೆ ಸೊಗಡಿಗೆ ಮಣೆ ಹಾಕಿದ್ದು ಕೂಡ ಮತದಾರರಿಗೆ ಹಿತವಾಗಿ ಕಂಡಿಲ್ಲ. ಅದನ್ನು ನಯವಾಗಿಯೇ ನಿರಾಕರಿಸಿದ್ದು, ಚುನಾವಣೆಗೆ ಸ್ಥಳೀಯ ನಾಯಕತ್ವವೇ ಮಹತ್ವದ್ದು ಎನ್ನುವ ಸಂದೇಶವನ್ನು ದೊಡ್ಡ ಪ್ರಮಾಣದಲ್ಲಿ ಸಾರಿದಂತಿದೆ.

    ಸ್ಥಳೀಯ ನಾಯಕತ್ವ

    ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿ ಚುನಾವಣೆ ನಡೆಸಬೇಕಾದ ಬುದ್ದಿವಂತಿಕೆಯನ್ನು ಬಿಜೆಪಿ ಪ್ರದರ್ಶನ ಮಾಡಲೇ ಇಲ್ಲ. ಬಹುತೇಕ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರವಿದ್ದರೂ, ಎಲ್ಲದಕ್ಕೂ ದೆಹಲಿಯತ್ತಲೇ ಮುಖ ಮಾಡಿದ್ದು ಕೂಡ ಬಿಜೆಪಿಗೆ ದುಬಾರಿಯಾಗಿದೆ.

    ಮುಳುವಾಗಿದ್ದು ಯಾಕೆ?

    ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನಾಡಿನ ಅಧಿಕಾರದ ಚುಕ್ಕಾಣಿ ಹಿಡಿದರೂ, ಯಡಿಯೂರಪ್ಪ ಎದೆಯ ನೋವು ಪೂರ್ಣ ಮಾಯಲಿಲ್ಲ ಎನ್ನುವುದು ದಿಟ. ಬೊಮ್ಮಾಯಿ ಅವರ ಆಡಳಿತದಲ್ಲಿ ದೆಹಲಿಯ ಪ್ರಭಾವಿಯೊಬ್ಬರು ಪದೇಪದೆ ಮೂಗು ತೂರಿಸಿದ್ದು, ತೆರೆ ಮರೆಯಲ್ಲಿ ಅಧಿಕಾರ ನಡೆಸಲು ಹವಣಿಸಿದ್ದು, ಬಲವಂತಕ್ಕೆ ತೀರ್ವನಗಳನ್ನು ತೆಗೆದುಕೊಳ್ಳುವಂತ ಸಂದರ್ಭಗಳನ್ನು ಸೃಷ್ಟಿ ಮಾಡಿದ್ದರ ಹಿಂದೆ ಯಾರ ಕೈವಾಡ ಇತ್ತು ಎನ್ನುವುದು ಜನ ಸಾಮಾನ್ಯರಿಗೆ ಸ್ಪಷ್ಟವಾಗಿ ಅರಿವಾಗ ತೊಡಗಿದ್ದು ಕೂಡ ಬಿಜೆಪಿಗೆ ಮುಳುವಾಗಿದೆ.

    ಚುನಾವಣೆ ಹೊತ್ತಿನಲ್ಲಿ ಮಣೆ

    ರಾಜ್ಯದಲ್ಲಿ ಬಿಜೆಪಿ ಚುನಾವಣೆ ಸಿದ್ಧತೆಗಳು ಪ್ರಾರಂಭವಾಗುವ ಹೊತ್ತಿನಲ್ಲಿ ಬದಿಗೆ ಸರಿಸಿದ್ದ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುನ್ನೆಲೆಗೆ ತಂದು ನಿಲ್ಲಿಸಿದರೂ ಆ ಬಗ್ಗೆ ಜನರಿಗೆ ವಿಶ್ವಾಸ ಬಂದಂತಿಲ್ಲ. ಯಡಿಯೂರಪ್ಪ ಅವರ ಶಕ್ತಿಯನ್ನು ಕೇವಲ ಮತಗಳಿಕೆ ರಾಜಕಾರಣಕ್ಕೆ ಬಳಸಿಕೊಂಡು ಮತ್ತೆ ತೆರೆ ಮರೆಗೆ ಸರಿಸುತ್ತಾರೆ ಎನ್ನುವುದು ವೀರಶೈವ ಲಿಂಗಾಯಿತ ಸಮುದಾಯದಲ್ಲಿ ದಟ್ಟವಾಗಿ ಮೂಡಿದ್ದು ಕೂಡ ಆ ಸಮುದಾಯ ನಿಧಾನವಾಗಿ ಕಾಂಗ್ರೆಸ್ ಕಡೆಗೆ ಮುಖ ಮಾಡಲು ಕಾರಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts