More

    ಕೆಟ್ಟು ನಿಂತ ಶುದ್ಧ ನೀರಿನ ಘಟಕ

    ಸಿ.ಎನ್.ವಿಜಯ್ ಪಿರಿಯಾಪಟ್ಟಣ
    ಪಟ್ಟಣದ ರಾಂಪುರ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ತಿಂಗಳಾಗುತ್ತಿದ್ದು, ಪುರಸಭೆ ಅಧಿಕಾರಿಗಳು ದುರಸ್ತಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

    ಕುಡಿಯುವ ನೀರಿನ ಘಟಕಕ್ಕೆ ಮೂರು ತಿಂಗಳ ಹಿಂದೆ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಹೊಸ ಫಿಲ್ಟರ್ ಅಳವಡಿಸಿದ್ದರೂ ಸಹ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಸಭೆ ಸಿಬ್ಬಂದಿ ನಿರ್ಲಕ್ಷೃದಿಂದ ತಿಂಗಳಿನಲ್ಲಿ ಕನಿಷ್ಠ 15 ದಿನ ಕೆಟ್ಟು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಫಿಲ್ಟರ್ ಟ್ಯಾಂಕ್‌ನ ಪೈಪ್ ಒಡೆದು ಹೋಗಿ 3 ತಿಂಗಳು ಸಾರ್ವಜನಿಕರ ಸೇವೆಗೆ ಅಲಭ್ಯವಾಗಿತ್ತು. ಈ ಬಗ್ಗೆ ‘ವಿಜಯವಾಣಿ’ ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಒಡೆದು ಹೋಗಿದ್ದ ಪೈಪ್ ಸರಿಪಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದರು.

    ಬಳಿಕ ದುರಸ್ತಿಯಾಗಿ ಕೇವಲ ಮೂರೇ ತಿಂಗಳಿಗೆ ಮತ್ತೊಮ್ಮೆ ಫಿಲ್ಟರ್ ಟ್ಯಾಂಕ್ ನಲ್ಲಿ ಸಮಸ್ಯೆ ಉಂಟಾಗಿತ್ತು. ಅಲ್ಲದೆ ಘಟಕದಿಂದ ಸರಬರಾಜಾಗುತ್ತಿರುವ ನೀರು ಗುಣಮಟ್ಟದಿಂದ ಕೂಡಿಲ್ಲ ಎಂದು ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೈಸೂರಿನಿಂದ ತಾಂತ್ರಿಕ ಸಿಬ್ಬಂದಿ ಕರೆಸಿ ಹೊಸ ಫಿಲ್ಟರ್ ಅಳವಡಿಸಲಾಗಿತ್ತು. ಫಿಲ್ಟರ್ ದುರಸ್ತಿಗೊಂಡ ಬಳಿಕವಾದರೂ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಆದರೆ ನಿರ್ವಹಣೆ ಹೊಣೆ ಹೊತ್ತಿರುವ ಪುರಸಭೆ ಸಿಬ್ಬಂದಿ ಬೇಜವಾಬ್ದಾರಿತನದಿಂದ ನೀರಿನ ಘಟಕ ಮತ್ತೆ ಕೆಟ್ಟು ಹೋಗಿದ್ದು, ಸಾರ್ವಜನಿಕರು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದ ಮೊರೆ ಹೋಗುವಂತಾಗಿದೆ. ಈಗಾಗಲೇ ನೀರಿನ ಘಟಕ ಕೆಟ್ಟು ತಿಂಗಳು ಕಳೆಯುತ್ತಿದ್ದು, ದುರಸ್ತಿಪಡಿಸದೆ ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ನಾಗರಿಕರು ಆಪಾದಿಸಿದ್ದಾರೆ.

    ಖಾಸಗಿ ಘಟಕದ ಮೊರೆ: ಪುರಸಭಾ ನಿರ್ವಹಣೆಯಲ್ಲಿರುವ ಈ ಘಟಕದಲ್ಲಿ 5 ರೂ.ಗೆ 20 ಲೀಟರ್‌ಗಳ ಒಂದು ಕ್ಯಾನ್ ನೀರು ದೊರೆತರೆ, ಖಾಸಗಿ ಘಟಕಗಳಲ್ಲಿ 20 ಲೀಟರ್ ನೀರು ಪಡೆಯಲು 10 ರೂ. ನೀಡಬೇಕಿದೆ. ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕಾದ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಸಭೆ ಸಿಬ್ಬಂದಿ ತಮಗೆ ಅಗತ್ಯ ಬಿದ್ದಾಗಲೆಲ್ಲ ಕಾಯಿನ್ ಬೂತ್‌ನ್ನು ಎತ್ತಿಟ್ಟು ಘಟಕದ ಬಾಗಿಲಿಗೆ ಬೀಗ ಜಡಿದು ಹೊರಟುಬಿಡುತ್ತಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿ, ಮುತ್ತಯ್ಯ ಬಡಾವಣೆ, ರಾಜಪುರ ಬಡಾವಣೆ, ಎಸ್‌ಪಿಆರ್ ಕಾಲನಿ, ಗೋಣಿಕೊಪ್ಪ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳ ನಾಗರಿಕರು ಅನಿವಾರ್ಯವಾಗಿ ಖಾಸಗಿ ಘಟಕಗಳ ಮೊರೆ ಹೋಗುವಂತಾಗಿದೆ. ಇನ್ನಾದರೂ ಪುರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

    ಪಟ್ಟಣದಲ್ಲಿರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಯಾವುದೇ ತೊಂದರೆ ಇಲ್ಲದಂತೆ ವರ್ಷವಿಡೀ ಸೇವೆ ನೀಡುತ್ತಿವೆ. ಆದರೆ ಪುರಸಭೆಯ ನಿರ್ವಹಣೆಯಲ್ಲಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಮೂರು ತಿಂಗಳಿಗೊಮ್ಮೆ ರಿಪೇರಿಗೆ ಬರುವುದು ಆಶ್ಚರ್ಯ ತರಿಸಿದೆ. ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಈವರೆಗೂ ರಿಪೇರಿ ಮಾಡಿಸಿಲ್ಲ. ಹೀಗಾಗಿ 10 ರೂ. ನೀಡಿ ಖಾಸಗಿ ನೀರಿನ ಘಟಕದಲ್ಲಿ ನೀರು ಖರೀದಿಸುವಂತಾಗಿದೆ.

    > ಪಿ.ಎಸ್.ಶ್ರೀಧರ್, ಸ್ಥಳೀಯ ನಿವಾಸಿ, ಪಿರಿಯಾಪಟ್ಟಣ:

    ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿಂದೆ ಫಿಲ್ಟರ್ ಟ್ಯಾಂಕ್ ಸಮಸ್ಯೆಯಾಗಿದ್ದರಿಂದ ಹೊಸ ಫಿಲ್ಟರ್ ಟ್ಯಾಂಕ್ ಅಳವಡಿಸಲಾಗಿದೆ. ಇದೀಗ ಮತ್ತೊಮ್ಮೆ ಶುದ್ಧ ಕುಡಿಯುವ ನೀರು ಘಟಕದ ಮೋಟಾರ್ ಮತ್ತು ಟ್ಯಾಂಕ್ ಸಮಸ್ಯೆಯಾಗಿದೆ ಎಂದು ತಾಂತ್ರಿಕ ಸಿಬ್ಬಂದಿ ಹೇಳುತ್ತಿದ್ದಾರೆ. ದುರಸ್ತಿ ಮಾಡಲು ಪರಿಣಿತ ಮೆಕ್ಯಾನಿಕ್‌ಗಳು ಮೈಸೂರಿನಿಂದಲೇ ಬರಬೇಕಿದೆ. ಅದರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿಗೆ ಶೀಘ್ರದಲ್ಲಿಯೇ ಸರಿಪಡಿಸುವಂತೆ ಸೂಚಿಸಿದ್ದೇನೆ.

    >ಎಚ್.ಕೆ.ಮಂಜುನಾಥ್, ಪುರಸಭೆ ಸದಸ್ಯ, ಪಿರಿಯಾಪಟ್ಟಣ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts