More

    ಪ್ರಜಾಪ್ರಭುತ್ವ ಸದೃಢಗೊಳಿಸಲು ಯುವಕರು ಕೈಜೋಡಿಸಲಿ

    ಪಿರಿಯಾಪಟ್ಟಣ: ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಸದೃಢಗೊಳಿಸುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಡಿ.ಶೇಖರ್ ಹೇಳಿದರು.


    ತಾಲೂಕಿನ ಅರಸು ಭವನದಲ್ಲಿ ತಾಲೂಕು ಸ್ವೀಪ್ ಸಮಿತಿ, ಪುರಸಭೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಯುವಕರು ಅರಿತುಕೊಳ್ಳಬೇಕು, ಒಂದೊಂದು ಮತಕ್ಕೂ ಬೆಲೆಯಿದೆ, ಒಂದು ಸದೃಢ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮತದಾನವು ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.
    ಯುವಕರು ಮತದಾನ ಮಾಡುವುದರ ಜತೆಗೆ ಕುಟುಂಬ ಹಾಗೂ ಸುತ್ತಮುತ್ತಲಿನ ಜನರನ್ನೂ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.


    ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ. ಇಒ ಡಿ.ಬಿ.ಸುನೀಲ್ ಕುಮಾರ್ ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕು, ಅದನ್ನು ಚಲಾಯಿಸಿದಾಗ ಮಾತ್ರ ಆ ಹಕ್ಕಿಗೆ ಅರ್ಥ ಬರುವುದು ಎಂದರು.


    ವಿಎಚ್‌ಎ(ವೋಟರ್ ಹೆಲ್ಪ್ ಲೈನ್) ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಹೊಸದಾಗಿ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು, ಗುರುತಿನ ಚೀಟಿಯಲ್ಲಿ ತಪ್ಪಿದ್ದಲ್ಲಿ ತಿದ್ದುಪಡಿಗೂ ಅವಕಾಶವಿದೆ, ಅದಲ್ಲದೇ ಅಭ್ಯರ್ಥಿಗಳ ಮಾಹಿತಿಯು ಕೂಡ ಲಭ್ಯವಿದ್ದು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.


    ಪ್ರತಿಯೊಬ್ಬರು ಮತದಾನ ಮಾಡಲಿ ಎಂಬ ಉದ್ದೇಶದಿಂದ ಚುನಾವಣೆ ನಡೆಯುವ ದಿನ ರಜೆ ನೀಡಲಾಗುತ್ತದೆ. ಆದರೆ ಕೆಲವರು ರಜೆಯನ್ನು ಮೋಜಿನಲ್ಲಿ ಕಳೆಯಲು ಪ್ರಯತ್ನಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಕೊರಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ತಿಳಿಸಿದರು.


    ವ್ಯವಸ್ಥೆಯನ್ನು ದೂರುವ ಮೊದಲು ನಾವು ನಮ್ಮ ಹಕ್ಕು, ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಬೇಕು. ಇತರರಿಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
    ತಹಸೀಲ್ದಾರ್ ಸುರೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ಕುಟುಂಬದ ಸದಸ್ಯರಿಗೆ ತಿಳಿಸುವ ಜತೆಗೆ ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡುವಂತೆ ಮನವಿ ಮಾಡಬೇಕು ಎಂದರು.


    ಕಾರ್ಯಕ್ರಮದ ನಂತರ ಜಾಥಾ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.


    ಪುರಸಭೆ ಮುಖ್ಯಾಧಿಕಾರಿ ಕೆ.ಯು.ಮುತ್ತಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಅಂಬಿಕಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts