More

  ಬೆಂಗಳೂರು, ತಿರುಪತಿಯಲ್ಲಿ ಶಾಖಾಮಠ: ಕನ್ಯಾಡಿ ಸ್ವಾಮೀಜಿ ಪಟ್ಟಾಭಿಷೇಕ ವರ್ಧಂತಿ ವೈಭವದಲ್ಲಿ ಮಂಕಾಳ ಎಸ್.ವೈದ್ಯ ಹೇಳಿಕೆ

  ಬೆಳ್ತಂಗಡಿ: ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಶಾಖಾ ಮಠಗಳನ್ನು ಬೆಂಗಳೂರು ಮತ್ತು ತಿರುಪತಿಯಲ್ಲಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶಯ ಮತ್ತು ಅಪೇಕ್ಷೆಯಂತೆ ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.

  ದೇವರಗುಡ್ಡೆ ಗುರುದೇವಮಠದಲ್ಲಿ ಭಾನುವಾರ ಕನ್ಯಾಡಿ ರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ 15ನೇ ವರ್ಷದ ಪಟ್ಟಾಭಿಷೇಕ ವರ್ದಂತಿ ಸಮಾರಂಭದಲ್ಲಿ ಮಾತನಾಡಿದರು.

  ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪ್ರೇರಣೆಯಂತೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ದೇವರಗುಡ್ಡೆಯಲ್ಲಿ ಈಗಾಗಲೇ ಆರಂಭಿಸಿದ ಅನ್ನಛತ್ರ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಭಾಭವನವನ್ನು 10 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು. ಇದಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸಲಾಗುವುದು. ದೇವಸ್ಥಾನ ಹಾಗೂ ಮಠ- ಮಂದಿರಗಳಿಗೆ ನೀಡಿದ ಅನುದಾನ ಮತ್ತು ಸೇವೆ ಶಾಶ್ವತವಾಗಿ ಜನರ ಮನದಲ್ಲಿರುತ್ತದೆ. ಆದ್ದರಿಂದ ಸಿಕ್ಕಿದ ಅಧಿಕಾರ ಮತ್ತು ಅವಕಾಶ ಸದುಪಯೋಗಪಡಿಸಿ ಸಾಧ್ಯವಾದಷ್ಟು ಸೇವಾಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

  ಮುಂದಿನ ವರ್ಷ ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ಚಾತುರ್ಮಾಸ್ಯ ವ್ರತ ಆಚರಣೆ ನಡೆಯಲಿದ್ದು, ಈ ಬಗ್ಗೆ ಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಶಾಸಕ ಹರೀಶ ಪೂಂಜ ಅವರ ವಿನಯ ಹಾಗೂ ಸೌಜನ್ಯಪೂರ್ಣ ಸೇವೆ ಶ್ಲಾಘಿಸಿ ಅಭಿನಂದಿಸಿದರು.
  ಶಾಸಕ ಹರೀಶ್ ಪೂಂಜ ಮಾತನಾಡಿ, ಮುಂದಿನ ವರ್ಷ ನೂತನ ಅನ್ನಛತ್ರ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟಿಸಲಾಗುವುದು ಎಂದರು.

  ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿದರು. ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಠದ ಹಿರಿಯ ಟ್ರಸ್ಟಿ ಚಿತ್ತರಂಜನ್ ಗರೋಡಿ, ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್, ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್‌ಪಿ ಪೀತಾಂಬಾರ ಹೇರಾಜೆ, ಉತ್ತರ ಕನ್ನಡ ಜಿಪಂ ಮಾಜಿ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಟ್ರಸ್ಟಿ ತುಕಾರಾಮ್ ಸಾಲಿಯಾನ್, ಶ್ರೀರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಹೊನ್ನಾವರ ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ವಾಮನ ನಾಯ್ಕ, ಸಿದ್ದಾಪುರ ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ಆರ್.ಎನ್.ನಾಯ್ಕ, ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ್ ನಾಯ್ಕ, ದ.ಕ., ಉಡುಪಿ, ಉತ್ತರ ಕನ್ನಡ, ಭಟ್ಕಳದ ಭಕ್ತರು ಉಪಸ್ಥಿತರಿದ್ದರು. ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೇಶವ ಬಂಗೇರ ಸ್ವಾಗತಿಸಿದರು. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ವಂದಿಸಿದರು. ಸೀತಾರಾಮ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

  ಧರ್ಮದ ಮರ್ಮವನ್ನರಿತು ಸಾತ್ವಿಕ ಜೀವನ ನಡೆಸಿದರೆ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಅತಿಯಾಸೆ ಪಡದೆ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸೌಹಾರ್ದಯುತ ಜೀವನ ನಡೆಸಬೇಕು. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ-ಸಂದೇಶಗಳನ್ನು ಅರಿತು ಬದುಕಿನಲ್ಲಿ ಅನುಷ್ಠಾನಗೊಳಿಸಿದರೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಯಾಗುತ್ತದೆ.
  – ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

  See also  72 ಜನರಿಗೆ ಪೌತಿಖಾತೆ ದಾಖಲೆ ವಿತರಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts