More

    ಬ್ರಹ್ಮೇರಿ ಕಾಲನಿಯಲ್ಲಿ ಸಿಕ್ತು ನೀರು!

    ಬ್ರಹ್ಮೇರಿ: ಹಕ್ಲಾಡಿ ಗ್ರಾಮದ ಬ್ರಹ್ಮೇರಿ ಕಾಲನಿ ವಾಸಿಗಳ ಬವಣೆ ನೀಗಿದೆ. ಐಟಿಡಿಪಿ ಅನುದಾನದಲ್ಲಿ ಹೊಸ ಕೊಳವೆಬಾವಿ ಕೊರೆಯಲಾಗಿದ್ದು, ಒಂದೂವರೆ ಇಂಚು ನೀರು ಚಿಮ್ಮುವ ಮೂಲಕ ಹಲವು ವರ್ಷದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

    ಬ್ರಹ್ಮೇರಿ ಕಾಲನಿ ವಾಸಿಗಳೇ ಸ್ವಂತ ಪರಿಶ್ರಮದಿಂದ ತೋಡಿದ ಬಾವಿಯಲ್ಲಿ ಶಿಲೆ ಸಿಕ್ಕಿದ ಕಾರಣ ಸಮಸ್ಯೆಯಾಗಿತ್ತು. ಕೊಳವೆ ಬಾವಿ ಇದ್ದರೂ ನೀರು ಕಲುಷಿತವಾಗಿದ್ದರಿಂದ ಬೇರೆಡೆಯಿಂದ ಹೊತ್ತು ತರಬೇಕಿತ್ತು. ಇದರಿಂದ ಕೆಲಸಕ್ಕೆ ಹೋಗುವುದಕ್ಕೂ ಸಮಸ್ಯೆಯಾಗುತ್ತಿತ್ತು. ಕಾಲನಿ ವಾಸಿಗಳಿಗೆ ಐಟಿಡಿಪಿ ಮೂಲಕ ನಿರ್ಮಾಣವಾಗುತ್ತಿದ್ದ ಮನೆ ಕೂಡ ಅರ್ಧಕ್ಕೆ ನಿಂತು ಹೋಗಿತ್ತು.

    ಕಾಲನಿ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ, ಕೊಳವೆ ಬಾವಿಗೆ ಮೋಟಾರ್ ಅಳವಡಿಸಿ, ನೀರು ಪೂರೈಕೆಗೆ ಮುಂದಾಗಿದ್ದು, ಬಾವಿ ಕೇಸಿಂಗ್ ಬದಲಾಯಿಸಲು ಆಗದ ಕಾರಣ ನೀರು ಪೂರೈಕೆ ವಿಫಲವಾಯಿತು. ಹೊಸ ಕೊಳವೆ ಬಾವಿ ಪರಿಹಾರ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಐಟಿಡಿಪಿ ಅಧಿಕಾರಿಗಳು ಸಹಕಾರದಿಂದ ಕೊಳವೆಬಾವಿ ಸಿದ್ಧಗೊಂಡು ನೀರು ಸಿಕ್ಕಿದ್ದರಿಂದ ಕಾಲನಿ ವಾಸಿಗಳ ಮೊಗದಲ್ಲಿ ನಗು ಅರಳಿದೆ. ಬ್ರಹ್ಮೇರಿ ಕಾಲನಿ ಕುರಿತು ವಿಜಯವಾಣಿ ಸತತ ಮೂರು ಬಾರಿ ವಿಸ್ಕೃತ ವರದಿ ಪ್ರಕಟಿಸಿತ್ತು.

    ವಿಜಯವಾಣಿಗೆ ಪ್ರಶಂಸೆಯ ಮಹಾಪೂರ: 2012ರಲ್ಲಿ ಹಕ್ಲಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಚ್ಚಿಗಿಲ್ಲ ಬೆಚ್ಚಗಿನ ಸೂರು ಮೂಲಕ ವಿಜಯವಾಣಿ ಆರಂಭಿಸಿದ ಮೂಲನಿವಾಸಿಗಳ ಬದುಕು ಬವಣೆಯಿಂದ ಬ್ರಹ್ಮೇರಿ ಕಾಲನಿ ಮನೆ ಮತ್ತು ನೀರಿನ ಸಮಸ್ಯೆವರೆಗಿನ ವಿಶೇಷ ವರದಿಗೆ ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಅಧಿಕಾರಿಗಳು ಮತ್ತು ದಲಿತ ಸಂಘಟನೆ ಮುಖಂಡರಿಂದ ಪ್ರಶಂಸೆ ಮಹಾಪೂರ ಹರಿದುಬಂದಿದೆ. ಇದುವರೆಗೆ ವಿಜಯವಾಣಿ ವರದಿ ಪರಿಣಾಮ 23 ಮೂಲನಿವಾಸಿಗಳ ಮನೆ, ವಿದ್ಯುತ್ ಸಂಪರ್ಕ, ಮೂಲ ಸೌಲಭ್ಯ, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. 2012ರ ಅಂಬೇಡ್ಕರ್ ಜಯಂತಿಯಂದು ವಿಜಯವಾಣಿ ಪ್ರಕಟಿಸಿದ ವಿಶೇಷ ವರದಿಯಿಂದ ಕುಂಭಾಶಿ ಕಾಲನಿ ಚಿತ್ರಣವೇ ಬದಲಾಗಿದೆ. 8 ಕಾಲನಿಯ ಅಭಿವೃದ್ಧಿಯಾಗಿದೆ. ಹಳ್ಳಿಹೊಳೆ ಬಾಚಿಕೊಡ್ಲು ಕಾಲನಿಯಲ್ಲಿ ಐದು ಹೊಸ ಮನೆ, ಜಡ್ಕಲ್ 2 ಮನೆ, ಹೊಸ್ಮಠದಲ್ಲಿ 3 ಹೀಗೆ ಸಾಗಿದೆ. ಆರೋಗ್ಯ ಸೌಲಭ್ಯ, ಶಿಕ್ಷಣ, ಪಡಿತರ ಚೀಟಿ, ಹಕ್ಕುಪತ್ರ ಕೊಡಿಸುವಲ್ಲೂ ಯಶಸ್ವಿಯಾಗಿದೆ. ಕಾಲನಿ ಕುರಿತು ಬೆಳಕು ಚೆಲ್ಲಿದ ವಿಜಯವಾಣಿಗೆ ನಾವು ಆಭಾರಿಯಾಗಿದ್ದೇವೆ ಎಂದು ಬೈಂದೂರು ಮಹಾತ್ಮ ಜ್ಯೋತಿಬಾ ಪುಲೆ ಯುವ ಕಲಾ ವೇದಿಕೆ ಗೌರವಾಧ್ಯಕ್ಷ ಲಕ್ಷೀಣ ಹೇಳಿದ್ದಾರೆ. ಉಡುಪಿ ಐಟಿಡಿಪಿ ತನಿಖಾ ಸಹಾಯಕ ವಿಶ್ವನಾಥ ಶೆಟ್ಟಿ, ಮೂಲನಿವಾಸಿಗಳ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಇಲಾಖೆ, ಸರ್ಕಾರದ ಗಮನಕ್ಕೆ ತರುವ ಕೆಲಸ ಪತ್ರಿಕೆ ಯಶಸ್ವಿಯಾಗಿ ಮಾಡಿದ್ದು, ಇಲಾಖೆ ಮೂಲಕ ಸಮಸ್ಯೆ ಪರಿಹಾರಕ್ಕೆ ಸಹಾಯವಾಯಿತು ಎಂದಿದ್ದಾರೆ. ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಮೂಲನಿವಾಸಿಗಳ ಕುರಿತು ಮಾಡಿದ ವರದಿಯಲ್ಲಿ ವಾಸ್ತವತೆ ಇದೆ ಎಂದು ಪ್ರಶಂಸಿಸಿದ್ದಾರೆ.

    ಪತ್ರಿಕೆ ಮೂಲಕ ಜ್ವಲಂತ ಸಮಸ್ಯೆ ಗಮನಕ್ಕೆ ತಂದಾಗ ಸರ್ಕಾರದಿಂದ ಜನರಿಗೆ ಸೌಲಭ್ಯ ಮುಟ್ಟಿಸಲು ಸಹಕಾರಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಿಜಯವಾಣಿ ಸಹಕಾರ ನೀಡಿದೆ. ಮುಂಬರುವ ದಿನಗಳಲ್ಲಿ ಮೂಲನಿವಾಸಿಗಳ ಸಮಸ್ಯೆ ಬಗ್ಗೆ ಇನ್ನೂ ಹೆಚ್ಚು ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯುವಂತಾಗಲಿ. ಬ್ರಹ್ಮೇರಿ ಕಾಲನಿಗೆ ಕೊಳವೆ ಬಾವಿ ಸಿದ್ಧವಾಗಿದ್ದು, ಕ್ರಿಯಾಯೋಜನೆಯಲ್ಲಿ ಟ್ಯಾಂಕ್ ಅಳವಡಿಸಿ, ನಳ್ಳಿ ನೀರು ಪೂರೈಕೆ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದು, ಅನುಮೋದನೆ ಸಿಕ್ಕ ನಂತರ ವ್ಯವಸ್ಥೆ ಮಾಡಲಾಗುತ್ತದೆ.
    ವಿಶ್ವನಾಥ ಶೆಟ್ಟಿ ,ತನಿಖೆ ಸಹಾಯಕ ಐಟಿಡಿಪಿ ಉಡುಪಿ

    ಹಕ್ಲಾಡಿ ಗ್ರಾಮ ಬ್ರಹ್ಮೇರಿ ಕೊರಗ ಕಾಲನಿಗೆ ಹಲವು ವರ್ಷದಿಂದ ನೀರಿನ ಬವಣೆಯಿತ್ತು. ಸಮಸ್ಯೆ ಬಗ್ಗೆ ದಲಿತ ಸಂಘಟನೆ ಮುಖಂಡರು ವಿಜಯವಾಣಿ ಗಮನಕ್ಕೆ ತಂದಿದ್ದು, ಗಿರಿಜನ ಅಭಿವೃದ್ಧಿ ನಿಗಮ, ತಾಲೂಕು, ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದಿಂದ ಕೊಳವೆ ಬಾವಿ ಕೊರೆಯಲಾಗಿದೆ. ಸ್ಪಂದಿಸಿದ ಅಧಿಕಾರಿಗಳಿಗೆ ಆಭಾರಿಯಾಗಿದ್ದೇವೆ.
    ಲಕ್ಷೀಣ, ಗೌರವಾಧ್ಯಕ್ಷ, ಮಹಾತ್ಮ ಜ್ಯೋತಿ ಬಾಪುಲೆ ಯುವ ಕಲಾ ವೇದಿಕೆ, ಬೈಂದೂರು

    ಬ್ರಹ್ಮೇರಿಯಲ್ಲಿ ವಾಸ ಆರಂಭಿಸಿದ ನಂತರ ಕುಡಿಯುವ ನೀರಿನ ಸಮಸ್ಯೆ ನಮ್ಮನ್ನು ಬಹುವಾಗಿ ಕಾಡಿತ್ತು. ಈ ಬಗ್ಗೆ ವಿಜಯವಾಣಿ ಗಮನ ಸೆಳೆದಿದ್ದು, ಬಾಕಿಯಾಗಿದ್ದ ಮನೆ ಸಂಪೂರ್ಣವಾಗುತ್ತಿದೆ. ಕೊಳವೆ ಬಾವಿ ಕೂಡ ಸಿದ್ಧಗೊಂಡಿದೆ. ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದ ಪತ್ರಿಕೆಗೆ ಋಣಿಯಾಗಿದ್ದೇವೆ.
    ಬೇಬಿ, ಕಾಲನಿ ವಾಸಿ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts