More

    ಬೀದಿಗೆ ಬೀಳದಿರಲಿ ಬಾಲಕರ ಬದುಕು!

    ಕರಿಯಪ್ಪ ಅರಳೀಕಟ್ಟಿ ರಾಣೆಬೆನ್ನೂರ

    ಆಟ-ಪಾಠ ಎಂದು ಸ್ವಚ್ಛಂದವಾಗಿ ಓಡಾಡಿಕೊಂಡಿರಬೇಕಿದ್ದ ಮುಗ್ಧ ಮಕ್ಕಳ ಹೆಗಲಿಗೆ ಜೋಳಿಗೆ. ಪಾಲಕರ ಪೋಷಣೆಯಲ್ಲಿ ತುಂಟಾಟ ಮಾಡುತ್ತ ಬೆಳೆಯಬೇಕಿದ್ದವರು ಬೀದಿಯಲ್ಲಿ ಭಿಕ್ಷಾಟನೆ ಮಾಡುವ ದುಸ್ಥಿತಿ. ಬಡ ಪಾಲಕರ ಒತ್ತಡಕ್ಕೆ ಮಣಿದು ಭವಿಷ್ಯದ ಅರಿವೇ ಇಲ್ಲದೆ, ಹೋಗಿ- ಬರುವವರ ಮುಂದೆ ಕೈ ಒಡ್ಡುವ ಅನಿವಾರ್ಯತೆ!

    ತಾಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ಹಬ್ಬ ಹರಿದಿನ ಸೇರಿ ವಿಶೇಷ ದಿನಗಳಂದು ಭಕ್ತರ ಬರುವಿಕೆ ಹೆಚ್ಚಾದಾಗ 8-12 ವರ್ಷದ ಕೆಲ ಬಾಲಕರು ಕಾಣಿಸಿಕೊಳ್ಳುತ್ತಾರೆ. ಹೋಗಿ- ಬರುವವರಲ್ಲಿ ಕೈ ಚಾಚಿ ಹಣಕ್ಕಾಗಿ ಅಂಗಲಾಚುತ್ತಾರೆ. ಈ ಮಕ್ಕಳು ಅನಾಥರಲ್ಲ, ನಿರಾಶ್ರಿತರೂ ಅಲ್ಲ. ಆದರೆ, ಪಾಲಕರ ಒತ್ತಾಯದಿಂದಲೇ ಅಸಹಾಯಕತೆಯಲ್ಲಿ ಭಿಕ್ಷಾಟನೆಗಿಳಿದವರು.

    ಭಾರತ ಹುಣ್ಣಿಮೆ ನಿಮಿತ್ತ ದೇವರಗುಡ್ಡ ಮಾಲತೇಶ ಸ್ವಾಮಿ ದೇವರ ಜಾತ್ರೆ ನಡೆಯುತ್ತಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗದಿಂದ ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುತ್ತಾರೆ. ಇದರಿಂದ ಮುಗ್ಧ ಬಾಲಕರ ಭವಿಷ್ಯ ಹಾಳಾಗುತ್ತದೆ ಎಂಬ ವೇದನೆ ಕೆಲವರದ್ದಾದರೆ, ಈ ಬಾಲಕರು ಭಕ್ತರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ ಎಂಬ ಆರೋಪ ಹಲವರಿಂದ ಕೇಳಿಬರುತ್ತಿದೆ.

    ಈ ಬಾಲಕರು ಹಣಕ್ಕೆ ಕೈಯೊಡ್ಡುತ್ತಾರೆ. ಕೊಟ್ಟರೆ ಸರಿ. ಇಲ್ಲದಿದ್ದರೆ ಅವರನ್ನು ಹಿಂಬಾಲಿಸುತ್ತ, ‘ನಿಮಗೆ ಒಳ್ಳೆಯದಾಗುವುದಿಲ್ಲ, ನಿಮಗೆ ಮುಂದೆ ಕೇಡು ಕಾದಿದೆ’ ಎಂದೆಲ್ಲ ಭಯ ಹುಟ್ಟಿಸುತ್ತಾರೆ. ಇದರಿಂದ ಭಕ್ತರು ನರಕಯಾತನೆ ಅನುಭವಿಸುವಂತಾಗಿದೆ.

    ನಿದ್ರೆಯಲ್ಲಿ ಅಧಿಕಾರಿಗಳು: ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ.

    ಮಕ್ಕಳು ಭಿಕ್ಷಾಟನೆಗೆ ಇಳಿಯಬಾರದು, ಒಂದು ವೇಳೆ ಭಿಕ್ಷಾಟನೆ ಮಾಡುವ ಮಕ್ಕಳಿದ್ದರೆ ಅಂಥವರನ್ನು ರಕ್ಷಿಸಿ, ಅವರನ್ನು ಭಿಕ್ಷಾಟನೆಗೆ ತಳ್ಳಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೆಂದೇ ಒಂದು ಇಲಾಖೆ, ಅಧಿಕಾರಿಗಳು ಸರ್ಕಾರದಿಂದ ನೇಮಕವಾಗಿರುತ್ತಾರೆ. ಆದರೆ, ಅಂತಹ ಅಧಿಕಾರಿ ಮಹೋದಯರು ಜನರ ಮಧ್ಯೆ ಬಂದು ಏಕೆ ಇಂತಹ ಸಮಸ್ಯೆಗಳನ್ನು ತಿಳಿದುಕೊಳ್ಳುವುದಿಲ್ಲ. ಯಾರಿಂದಲಾದರೂ ಆರೋಪ, ದೂರು ಬಂದರಷ್ಟೇ ಕ್ರಮ ಕೈಗೊಳ್ಳಬೇಕು ಎಂಬ ಮನಸ್ಥಿತಿ ಏಕೆ? ತಮ್ಮ ಕರ್ತವ್ಯ ನಿರ್ವಹಿಸಲೇಕೆ ಅಧಿಕಾರಿಗಳಿಗೆ ನಿರಾಸಕ್ತಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

    ಶಾಲೆಗೆ ಹೋಗ್ತೇವೆ ಅಂದ್ರೂ ಬಿಡಲ್ಲ!: ನಮಗೂ ಶಾಲೆಗೆ ಹೋಗುವ ಮನಸ್ಸಿದೆ. ಆದರೆ, ಭಿಕ್ಷಾಟನೆ ಮಾಡಿಕೊಂಡು ಹಣ ತೆಗೆದುಕೊಂಡು ಮನೆಗೆ ಹೋಗದಿದ್ದರೆ ಊಟ ಹಾಕಲ್ಲ. ಹೊಡೆದು ಹೊರಗೆ ಕಳುಹಿಸುತ್ತಾರೆ. ಹಾಸ್ಟೇಲ್​ನಲ್ಲಿಟ್ಟು ಓದಿಸ್ತಾರೆ ಎಂದಾದರೆ ನಾವು ಹೋಗುತ್ತೇವೆ ಎಂದು ಭಿಕ್ಷಾಟನೆ ಮಾಡುತ್ತಿದ್ದ ಬಾಲಕನೋರ್ವ ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡನು.

    ದೇವರಗುಡ್ಡದಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈ ಭಾಗದಲ್ಲಿ ಅಧಿಕಾರಿಗಳಿಗೆ ಇದನ್ನು ತಡೆಯಲು ಆಗುತ್ತಿಲ್ಲವೇ? ಭಿಕ್ಷೆ ಬೇಡುವ ಮಕ್ಕಳು ಹಣ ಇಲ್ಲ ಎಂದರೂ ಕೇಳಲ್ಲ. ಕಿರಿಕಿರಿಯುಂಟು ಮಾಡುತ್ತಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಬಾಲಕರಿಗೆ ಉತ್ತಮ ಶಿಕ್ಷಣ ಒದಗಿಸಲು ಮುಂದಾಗಬೇಕು.

    | ನಂದಿತಾ ಆನೂರ, ದಾವಣಗೆರೆ ನಿವಾಸಿ

    ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಸೂಚಿಸಿ ಕೂಡಲೆ ದೇವರಗುಡ್ಡದಲ್ಲಿ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡಲಾಗುವುದು. ಯಾರೂ ಮಕ್ಕಳನ್ನು ಭಿಕ್ಷಾಟನೆಗೆ ಬಿಡಬಾರದು. ಬಿಟ್ಟರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.

    | ಜಯಶ್ರೀ ಪಾಟೀಲ, ಸಿಡಿಪಿಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts