More

    ಸಾಮಾಜಿಕ ಸ್ಥಿತಿಗತಿ ಸರ್ಕಾರಕ್ಕೆ ವರದಿ, ಜಯಪ್ರಕಾಶ್ ಹೆಗ್ಡೆ ಹೇಳಿಕೆ

    ಕಾರ್ಕಳ: ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ನಡೆಸಿ ಸಮಗ್ರ ವರದಿಯನ್ನು ಸರ್ಕಾರದ ಮುಂದೆ ಇರಿಸುವುದು ಆಯೋಗದ ಉದ್ದೇಶವಾಗಿದೆ. ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಮಾಡಿ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಲಾಗಿದ್ದ ಸನ್ಮಾನ- ಸಂವಾದ- ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜದ ಜತೆ ಗುರುತಿಸಿಕೊಳ್ಳುವ ಪತ್ರಕರ್ತರಿಂದ ಸನ್ಮಾನ ಪಡೆದಿರುವುದು ಖುಷಿ ನೀಡಿದೆ ಎಂದರು.
    ಆಯೋಗವು ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಜಾತಿ ಪ್ರಮಾಣಪತ್ರ ನೀಡುವಲ್ಲಿ ತಾಂತ್ರಿಕ ತೊಂದರೆಗಳಿವೆ. ರಾಜ್ಯದಲ್ಲಿ 207 ಜಾತಿಗಳು ಹಾಗೂ 877 ಉಪಜಾತಿಗಳಿವೆ. ಜಾತಿಗಳಲ್ಲಿ ಉಪ ಜಾತಿಗಳು ಬಾಕಿಯಾಗಿ ಬೇರೆ ಪಟ್ಟಿಯಲ್ಲಿ ಹಂಚಿ ಹೋಗಿ ಸಮಸ್ಯೆಗಳಾಗಿವೆ. ಅವುಗಳನ್ನು ಒಂದೇ ಪಟ್ಟಿಗೆ ಸೇರ್ಪಡೆಗೊಳಿಸಿ, ಸಮಸ್ಯೆಗಳನ್ನು ಸರಿಪಡಿಸುವ ಕೆಲಸವಾಗಬೇಕಿದೆ ಎಂದರು.

    ಕಾರ್ಯನಿರತ ಪತ್ರಕರ್ತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಪೂರ್ಣಿಮಾ ಸಿಲ್ಕ್ಸ್‌ನ ಪಾಲುದಾರ ರವಿಪ್ರಕಾಶ್ ಪ್ರಭು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದಯಾನಂದ, ಪತ್ರಕರ್ತರ ಸಂಘ ಅಧ್ಯಕ್ಷ ಜಗದೀಶ್ ಆರ್.ಬಿ. ಉಪಸ್ಥಿತರಿದ್ದರು. ಮಹಮ್ಮದ್ ಶರೀಫ್ ಸ್ವಾಗತಿಸಿ, ವಂದಿಸಿದರು.

    ಅರ್ಹರಿಗೆ ಅನ್ಯಾಯವಾಗಕೂಡದು: ಜಾತಿ ಸಮುದಾಯಗಳ ಪೈಕಿ ಅರ್ಹರಿಗೆ ಜಾತಿ ಪ್ರಮಾಣಪತ್ರ ಸಿಗದಿದ್ದಾಗ ಅವರ ಕುಟುಂಬಕ್ಕೆ ಅನ್ಯಾಯವಾಗುತ್ತದೆ. ಕುಟುಂಬದ ಒಂದು ಮಗುವಿಗೆ ಒಳ್ಳೆಯ ಶಿಕ್ಷಣ ಸಿಕ್ಕಿದಾಗ, ಇಡೀ ಕುಟುಂಬ ಅಭಿವೃದ್ಧಿಯಾಗುತ್ತದೆ. ಜಾತಿ ಪ್ರಮಾಣ ಪತ್ರ ಹಾಗೂ ಜಾತಿಗಳ ಪಟ್ಟಿ ಸೇರಿಸುವ ವಿಚಾರದಲ್ಲಿ, ವಲಸೆ ಕಾರ್ಮಿಕರಿಗೆ ಸರ್ಟಿಫಿಕೆಟ್ ನೀಡುವ ವಿಚಾರದಲ್ಲಿ, ವರದಿ ಸಲ್ಲಿಕೆ ಸಂದರ್ಭದಲ್ಲೆಲ್ಲ ಅಧಿಕಾರಿಗಳು ಸಾಕಷ್ಟು ಅಧ್ಯಯನ ನಡೆಸಬೇಕು ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
    ಸನ್ಮಾನ: ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಉದ್ಯಮಿ ಪೂರ್ಣಿಮಾ ಸಿಲ್ಕ್ಸ್‌ನ ಪಾಲುದಾರ ರವಿಪ್ರಕಾಶ ಪ್ರಭು ಅವರನ್ನು ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

    ಬೋವಿ ಜನಾಂಗದ ಸಮಗ್ರ ಅಧ್ಯಯನ: ಅರಣ್ಯ ಪ್ರದೇಶದಲ್ಲಿ ಕುಳಿತವರು ಮತ್ತು ಡೀಮ್ಡ್ ಫಾರೆಸ್ಟ್‌ನಲ್ಲಿ ವಾಸ ಮಾಡುವ ಸಮುದಾಯದ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿ ತಾಂತ್ರಿಕ ತೊಂದರೆಗಳಿವೆ. 1971ರ ನಂತರ ಡೀಮ್ಡ್ ಫಾರೆಸ್ಟ್ ಎಂದಾಗಿದೆ. ರೆವಿನ್ಯೂ, ಫಾರೆಸ್ಟ್ ಜಂಟಿ ಸರ್ವೇ ನಡೆಸಬೇಕಿದೆ. ಬೋವಿ ಜನಾಂಗ ಪರಿಶಿಷ್ಟ ಜಾತಿ ಅಂತ ಇದೆ. ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿ ಎಂದು ಕೊಡುತ್ತಿಲ್ಲ. ಅಧಿಕಾರಿಗಳಲ್ಲಿ ಕೂಡ ಗೊಂದಲವಿದೆ. ಈ ಜನಾಂಗ ಯಾವ ಗುಂಪಿಗೆ ಸೇರಬೇಕು ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts