More

    ಕುಮಾರಧಾರೆಯ ದಂಡೆ ಮೇಲೆ ಸುಸಜ್ಜಿತ ವೃಕ್ಷೋದ್ಯಾನ

    ಸುಬ್ರಹ್ಮಣ್ಯ: ಕುಮಾರಧಾರಾ ನದಿ ದಂಡೆ ಮೇಲಿನ ಮೀಸಲು ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸುಸಜ್ಜಿತ ವೃಕ್ಷೋದ್ಯಾನ ದೇಗುಲದ ಸಹಕಾರದಿಂದ ನಿರ್ಮಾಣಗೊಂಡಿದ್ದು ಶುಕ್ರವಾರ ಲೋಕಾರ್ಪಣೆಯಾಗಿದೆ.
    ಸುಬ್ರಹ್ಮಣ್ಯ ದೇಗುಲದಿಂದ 2 ಕಿ.ಮೀ. ದೂರದಲ್ಲಿ ರಾಜ್ಯ ಹೆದ್ದಾರಿ ಪಕ್ಕ 25 ಎಕರೆ ಭೂಮಿಯಲ್ಲಿ ವೃಕ್ಷೋದ್ಯಾನವನ ನಿರ್ಮಾಣಗೊಂಡಿದೆ. ಇಲ್ಲಿ ಪಶ್ಚಿಮಘಟ್ಟದ ಅಮೂಲ್ಯ ಸಸ್ಯಗಳು, ಮಕ್ಕಳಿಗೆ ಆಟಿಕೆಗಳು, ಮರದಿಂದ ಮರಕ್ಕೆ ಜೋಡಿಸಿ ಸಂಚರಿಸಲು ಅನುಕೂಲವಾಗುವ ಪಥ, ಪಕ್ಷಿ ವೀಕ್ಷಣೆ ಪಥ, ನೈಸರ್ಗಿಕ ಪಥ, ನಕ್ಷತ್ರವನ, ಆಯುರ್ವೇದ ಸಸ್ಯವನಗಳಿವೆ.
    ಇಲ್ಲಿ ಮಲೆನಾಡಿನಲ್ಲಿ ಬೆಳೆಯುವ ಅಪೂರ್ವ ಸಸ್ಯರಾಶಿಗಳನ್ನು ಹಾಗೂ 17 ಜಾತಿಯ ಬಿದಿರು ಬೆಳೆಸಲಾಗುತ್ತಿದೆ. ಬಣ್ಣಬಣ್ಣದ ಹೂವು ಹಾಗೂ ಪಶ್ಚಿಮಘಟ್ಟದ ಅಮೂಲ್ಯ ಮರಗಳನ್ನು ಬೆಳೆಸಲಾಗಿದೆ. ಮುಂದಿನ ಐದು ವರ್ಷಗಳ ಒಳಗೆ ಸುಂದರ ವೃಕ್ಷೋದ್ಯಾನ ಮತ್ತಷ್ಟು ಹೊಳಪು ಪಡೆಯಲಿದೆ.

    5 ಕೋಟಿ ರೂ. ವೆಚ್ಚ
    5 ಕೋಟಿ ರೂ. ವೆಚ್ಚದ ಯೋಜನೆಯಿದು. ಒಂದು ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ವ್ಯವಸ್ಥೆಗಳನ್ನು ಅಳವಡಿಸಲಾಗಿವೆ. ಮುಂದಕ್ಕೆ ಉದ್ಯಾನವನ ಪ್ರವೇಶಿಸುವಲ್ಲಿ ಕೌಂಟರ್ ತೆರೆಯಲಾಗುತ್ತದೆ. ನಿರ್ವಹಣೆಗೆ ಕಾವಲು ಸಮಿತಿ ರಚಿಸಲಾಗುತ್ತಿದೆ. ಮುಂದೆ ಇಲ್ಲಿ ಸ್ಕೈ ವಾಕರ್, ಕಾಡಿನೊಳಗೆ 5 ಕಿ.ಮೀ. ದೂರದಲ್ಲಿ ಟ್ರೆಕ್ಕಿಂಗ್ ಪಾರ್ಕ್ ಇತ್ಯಾದಿ ರಚಿಸಲಾಗುವುದು. ಕುಮಾರಧಾರ ಸ್ನಾನಘಟ್ಟದಲ್ಲಿ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆಯನ್ನೂ ಮಾಡಲಾಗುವುದು. ಉದ್ಯಾನದ ಒಳಗೆ ಮಳಿಗೆ ಸ್ಥಾಪಿಸಿ, ಕ್ಷೇತ್ರದ ಮಹಿಮೆ ಹಾಗೂ ಇತಿಹಾಸ ತಿಳಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುವ ಕ್ಷೇತ್ರದಲ್ಲಿ ಬಿಡುವಿನ ವೇಳೆ ಕಳೆಯಲು ಪ್ರೇಕ್ಷಣೀಯ ಸ್ಥಳದ ಕೊರತೆಯನ್ನು ಈ ವೃಕ್ಷೋದ್ಯಾನ ನೀಗಿಸಲಿದೆ.

    ವೃಕ್ಷೋದ್ಯಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಸಂಬಂಧ ಸಮಿತಿ ಸಭೆ ಕರೆದು, ಸಮಯ ಹಾಗೂ ಪ್ರವೇಶ ಶುಲ್ಕ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಿ ವಾರದೊಳಗೆ ತೀರ್ಮಾನ ಕೈಗೊಳ್ಳಲಾಗುವುದು.
    ರಾಘವೇಂದ್ರ, ಆರ್‌ಎಫ್‌ಒ ಸುಬ್ರಹ್ಮಣ್ಯ ವಿಭಾಗ

    ವ್ಯವಸ್ಥಿತವಾಗಿ ಮುನ್ನಡೆಯಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಶಯ
    ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ನಿರ್ಮಾಣಗೊಂಡ ವೃಕ್ಷೋದ್ಯಾನ ವ್ಯವಸ್ಥಿತವಾಗಿ ಮುನ್ನಡೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಕುಕ್ಕೆ ಸುಬ್ರಹ್ಮಣ್ಯ ಬಳಿ ಕುಮಾರಧಾರ ದಂಡೆಯ ಮೀಸಲು ಅರಣ್ಯದಲ್ಲಿ ನಿರ್ಮಾಣಗೊಂಡ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರ ಹಾಗೂ ದೇವಸ್ಥಾನದ ವತಿಯಿಂದ ಇಲ್ಲಿಗೆ ಬೇಕಾಗುವ ಸಹಕಾರದ ಬಗ್ಗೆ ಪ್ರಸ್ತಾವನೆ ಕಳುಹಿಸಿದಲ್ಲಿ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದರು.
    ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ವಲಯ ಉಪ ಅರಣ್ಯಾಧಿಕಾರಿ ಆಸ್ಟೀನ್ ಸೋಮ್ ಮಾತನಾಡಿ, ವೃಕ್ಷೋದ್ಯಾನವನದಲ್ಲಿ ಈ ತನಕ 1.21 ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದೆ. 42 ಎಕರೆ ಪ್ರದೇಶದಲ್ಲಿ ಮರ ಗಿಡಗಳಿಗೆ ಹಾನಿ ಮಾಡದೆ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗಿದೆ ಎಂದರು.
    ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಆಶಾ ತಿಮ್ಮಪ್ಪ, ಕಡಬ ತಾಪಂ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ.ಕುಸುಮಾ, ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್ ಉಪಸ್ಥಿತರಿದ್ದರು. ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಗತಿಸಿದರು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಎಚ್.ಪಿ.ರಾಘವೇಂದ್ರ ವಂದಿಸಿದರು. ರಾಜೇಶ್ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts