More

    ಬಳ್ಳಕ್ಕದ ದಲಿತ ಕಾಲನಿಗೆ ಬಂತು ನೀರು

    ಸುಳ್ಯ: ಗುತ್ತಿಗಾರು ಗ್ರಾಮದ ಬಳ್ಳಕ್ಕ ದಲಿತ ಕಾಲನಿಯ ಬಹುದಿನದ ಬೇಡಿಕೆಯೊಂದು ಈಡೇರಿದೆ. ಇಲ್ಲಿನ ಜನರು ಇನ್ನು ಮುಂದೆ ನೀರಿಗಾಗಿ ಮತ್ತೊಬ್ಬರ ಮನೆಯ ಕೆರೆ, ಬಾವಿಯ ಮೊರೆಹೋಗಬೇಕಿಲ್ಲ. ಕಾಲನಿಯ ತುಸು ದೂರದಲ್ಲಿ ಗುತ್ತಿಗಾರು ಗ್ರಾಪಂ ವತಿಯಿಂದ ಬುಧವಾರ ಕೊಳವೆಬಾವಿ ಕೊರೆಯಲಾಗಿದ್ದು, ಸದ್ಯದಲ್ಲೇ ನೀರಿನ ಸಂಪರ್ಕ ದೊರೆಯಲಿದೆ.

    ಈ ಹಿಂದೆ ಬಳ್ಳಕ್ಕ ದಲಿತ ಕಾಲನಿಯ ನಾಲ್ಕು ಕುಟುಂಬಗಳು ಕುಡಿಯುವ ನೀರಿಗಾಗಿ ಬೇರೆಯವರ ಕೆರೆ, ಬಾವಿಯನ್ನು ಆಶ್ರಯಿಸಬೇಕಾಗಿತ್ತು. ಆದರೆ, ಇದೇ ಕುಟುಂಬದ ಓರ್ವರಿಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆ ನೀರು ಪಡೆಯುವವರಿಗೂ, ಕೊಡುವವರಿಗೂ ಭಯ ಆವರಿಸಿತ್ತು.

    ಪಂಚಾಯಿತಿ ಸದಸ್ಯರು ಹಾಗೂ ಕೋವಿಡ್ ಟಾಸ್ಕ್‌ಫೋರ್ಸ್ ಸದಸ್ಯರು ಕೆಲ ದಿನಗಳ ಹಿಂದೆ ಕಾಲನಿಯ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದಾಗ ಮನೆಯ ಸದಸ್ಯರು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕೋರಿಕೊಂಡಿದ್ದರು. ಸಮಸ್ಯೆಯ ತೀವ್ರತೆ ಅರಿತ ವಿಜಯವಾಣಿ ಪತ್ರಿಕೆ ‘ಗುತ್ತಿಗಾರು ಬಳ್ಳಕ್ಕ ದಲಿತ ಕಾಲನಿಗೆ ಕುಡಿಯುವ ನೀರಿಲ್ಲ’ ಎಂಬ ಶೀರ್ಷಿಕೆಯಡಿ ಮೇ 24ರಂದು ವರದಿ ಪ್ರಕಟಿಸಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಶಾಶ್ವತ ಪರಿಹಾರವಾಗಿ ಗ್ರಾಪಂ ಬುಧವಾರ ಕೊಳವೆ ಬಾವಿ ನಿರ್ಮಿಸಿದೆ.

    ಸ್ಥಳೀಯರ ವಿರೋಧ: ಆದರೆ ಕೊಳವೆ ಬಾವಿ ಕೊರೆದರೆ ಹತ್ತಿರದ ಕೆರೆ ಬಾವಿಗಳು ಬತ್ತಿ ಕೃಷಿಗೆ ತೊಂದರೆಯಾಗಬಹುದೆಂಬ ಯೋಚನೆಯಲ್ಲಿ ಗ್ರಾಮ ಪಂಚಾಯಿತಿಯ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರೇ ಅಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಗ್ರಾ.ಪಂ ಪಿಡಿಒ ವಿರುದ್ಧ ಜಿಲ್ಲಾಧಿಕಾರಿಗೂ ಮೌಖಿತ ದೂರು ನೀಡಲಾಗಿತ್ತು. ಆದರೆ, ಕುಡಿಯುವ ನೀರಿಗೆ ಆದ್ಯತೆ ಕೊಡಬೇಕೆಂಬ ನಿಟ್ಟಿನಲ್ಲಿ ಕಾಲನಿಯ ಸಮೀಪ ಕೊಳವೆ ಬಾವಿ ಕೊರೆಯಲಾಗಿದೆ.

    ಕೊಳವೆ ಬಾವಿ ತೋಡಲು ಸ್ಥಳೀಯರ ವಿರೋಧ ಇದ್ದದ್ದು ನಿಜ. ಆದರೆ, ಕುಡಿಯುವ ನೀರಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದ್ದುದರಿಂದ ಆದ್ಯತಾ ನೆಲೆಯಲ್ಲಿ ಕೊಳವೆ ಬಾವಿ ತೋಡಲಾಗಿದೆ. ವಿರೋಧಿಸಿದವರಿಗೆ ಮುಂದೆ ನೀರಿಗಾಗಿ ಅಥವಾ ಇನ್ಯಾವುದೇ ಸಮಸ್ಯೆ ಎದುರಾದರೆ ನಾವು ಬಗೆಹರಿಸಲು ಬದ್ಧರಾಗಿದ್ದೇವೆ.
    ಭರತ್ ಕೆ.ವಿ.
    ಕಮಿಲ, ಗ್ರಾಪಂ ಸದಸ್ಯ

    ಗ್ರಾಪಂ ಸದಸ್ಯರು, ಪಂಚಾಯಿತಿ ಸಿಬ್ಬಂದಿ ಹಾಗೂ ಊರಿನ ಜನರು ನಮ್ಮ ಕಷ್ಟಕ್ಕೆ ಸ್ಪಂದಿಸಿ ಕೊಳವೆ ಬಾವಿ ತೋಡಿ ಸಹಾಯ ಮಾಡಿದ್ದು ಮನಸ್ಸಿಗೆ ತುಂಬಾ ಖುಷಿ ನೀಡಿದೆ. ಇನ್ನು ಪೈಪು ಅಳವಡಿಕೆ ಕೆಲಸವೂ ಶೀಘ್ರವಾಗಿ ಆಗಬೇಕಿದೆ.
    ಸ್ವಾತಿ ಬಳ್ಳಕ್ಕ, ಕಾಲನಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts