More

    ಗಡಿ ವಿಷಯದಲ್ಲಿ ಪಕ್ಷಗಳ ‘ಸೇಫ್‌ಗೇಮ್!’

    ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ಕ್ಯಾತೆಗೆ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ನಡೆಯುತಿದ್ದರೆ ಇತ್ತ ವಿವಾದಕ್ಕೆ ಕೇಂದ್ರಸ್ಥಾನವಾದ ಬೆಳಗಾವಿಯಲ್ಲಿ ರಾಜಕೀಯ ಪಕ್ಷಗಳು ಮಾತ್ರ ಈ ವಿಷಯದಲ್ಲಿ ‘ಸುರಕ್ಷತೆ’ ಕಾಯ್ದುಕೊಳ್ಳುತ್ತಿವೆ. ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಾಗೂ ಪಾಲಿಕೆ ಫೈಟ್‌ನಲ್ಲಿ ಗೆಲ್ಲಲು ಬೇಕಾದ ಮತ ಗಳಿಕೆಯ ‘ಲೆಕ್ಕಾಚಾರ’ದ ಹೆಜ್ಜೆ ಇಡುತ್ತಿವೆ.

    ಬೆಳಗಾವಿ ಗ್ರಾಮೀಣ, ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳು, ಪಾಲಿಕೆಯ 58 ವಾರ್ಡ್‌ಗಳು, 20 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ 30ಕ್ಕೂ ಹೆಚ್ಚು ತಾಪಂ ಕ್ಷೇತ್ರಗಳಲ್ಲಿ 2.2 ಲಕ್ಷಕ್ಕೂ ಅಧಿಕ ಮರಾಠಿ ಭಾಷಿಕ ಮತದಾರರಿದ್ದಾರೆ. ಹೀಗಾಗಿ ಈ ಭಾಷಿಗರ ವಿರುದ್ಧ ಏನಾದರೂ ಮಾತನಾಡಿದರೆ ಎಲ್ಲಿ ತಮಗೆ ಮತದಾನ ಮಾಡುವುದಿಲ್ಲವೋ ಎಂಬ ಭಯದಿಂದ ‘ಸ್ೇಗೇಮ್’ ಆಡತೊಡಗಿದ್ದಾರೆ.

    ಮರಾಠಿಗರೇ ನಿರ್ಣಾಯಕ: ಈ ಕ್ಷೇತ್ರಗಳಲ್ಲಿ ನಡೆಯುವ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿನಲ್ಲಿ ಮರಾಠಿ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಕಾರಣಕ್ಕಾಗಿಯೇ ರಾಜಕೀಯ ಲೆಕ್ಕಾಚಾರದ ದೃಷ್ಟಿಯಿಂದ ‘ಗಡಿ ತಂಟೆ’ ವಿಷಯದಲ್ಲಿ ಪ್ರಮುಖ ಪಕ್ಷದ ಮುಖಂಡರು ಆಕ್ರಮಣಕಾರಿ ಧೋರಣೆಗಳಿಂದ ದೂರ ಉಳಿಯುತ್ತಾರೆ. ಅಲ್ಲದೆ, ಗಡಿ ವಿವಾದದ ವಿಷಯವನ್ನೇ ಶಿವಸೇನೆ ಹಾಗೂ ಎಂಇಎಸ್ ಮುಖಂಡರು ರಾಜಕೀಯವಾಗಿ ಲಾಭ ಮಾಡಿಕೊಳ್ಳದಂತೆಯೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಎಚ್ಚರ ವಹಿಸುತ್ತಿದ್ದಾರೆ.

    ಭಾವನಾತ್ಮಕ ಅಲೆ ಏಳದಂತೆ ಎಚ್ಚರ: ಬೆಳಗಾವಿ ಗ್ರಾಮೀಣ, ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಿದೆ. ಅಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳ ಪೈಕಿ 36 ವಾರ್ಡ್‌ಗಳಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳೇ ಈವರೆಗೆ ಗೆಲುವು ಸಾಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು, ಶಾಸಕರು, ಮರಾಠಿ ಭಾಷಿಕ ಮತದಾರರು ಕೈತಪ್ಪದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಹಾಗಾಗಿ ಗಡಿ ವಿಷಯವೇ ಚುನಾವಣೆಯಲ್ಲಿ ಭಾವನಾತ್ಮಕ ಅಲೆ ಸೃಷ್ಟಿಸಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಮುಳುವಾಗಬಾರದು ಎಂಬ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.

    ಗಡಿ ವಿಷಯ ಸೂಕ್ಷ್ಮ ನಿರ್ವಹಣೆ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಅಲ್ಲಿನ ಸಚಿವರು, ಶಿವಸೇನೆ ಮುಖಂಡರು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ರಾಜಕೀಯ ಲಾಭಕ್ಕಾಗಿ ಮತ್ತು ಅಸ್ತಿತ್ವ ಗಟ್ಟಿಗೊಳಿಸುವ ಉದ್ದೇಶಕ್ಕಾಗಿ ಮೇಲಿಂದ ಮೇಲೆ ಗಡಿ ತಗಾದೆ ತೆಗೆದು ವಿವಾದ ಎಬ್ಬಿಸುತ್ತಿದ್ದಾರೆ. ಅದಕ್ಕೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತಿವೆ. ಆದರೆ, ರಾಷ್ಟ್ರೀಯ ಪಕ್ಷಗಳು ಗಡಿ ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಿಕೊಂಡು ಬರುತ್ತಿರುವುದು ಮಹಾರಾಷ್ಟ್ರ ನಾಯಕರಲ್ಲೂ ಅಚ್ಚರಿ ಮೂಡಿಸಿದೆ.

    ಗಡಿ ವಿಷಯದಲ್ಲಿ ರಾಜಕೀಯ ಪಕ್ಷಗಳು ಗಟ್ಟಿ ನಿರ್ಧಾರ ಕೈಗೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಎಂಇಎಸ್, ಶಿವಸೇನೆ ತಮ್ಮ ಅಸ್ತಿತ್ವಕ್ಕಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಗಡಿ ವಿಷಯ ಮುಂದಿಟ್ಟುಕೊಂಡು ಶಾಂತಿ ಕದಡಲು ಪ್ರಯತ್ನ ಮುಂದುವರಿಸುತ್ತಲೇ ಇರುತ್ತವೆ. ಗಡಿ ವಿಷಯ ಕೋರ್ಟ್‌ನಲ್ಲಿರುವಾಗ ಇಲ್ಲಸಲ್ಲದ ಹೇಳಿಕೆ ನೀಡುವವರ ವಿರುದ್ಧ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು.
    | ರವೀಂದ್ರ ತೋಟಗೇರ ನ್ಯಾಯವಾದಿ, ಗಡಿ ಹೋರಾಟಗಾರ

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ರಾಜಕೀಯ ಲಾಭಕ್ಕಾಗಿ ಗಡಿ ವಿಷಯ ಕೆದಕುತ್ತಿದ್ದಾರೆ. ಗಡಿ ವಿಷಯ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಲು ಸಂಕಲ್ಪ ಮಾಡಿದ್ದೇವೆ.
    | ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts