More

    ಈ ಬಾರಿ ಕುಟುಂಬ ರಾಜಕಾರಣದ ವಿರುದ್ಧ ಚುನಾವಣೆ

    ಅರಕಲಗೂಡು: ಜಿಲ್ಲೆಯ ಲೋಕಸಭಾ ಚುನಾವಣೆ ಈ ಬಾರಿ ದರ್ಪ, ದುರಹಂಕಾರ, ಪಾಳೇಗಾರಿಕೆ, ಕುಟುಂಬ ರಾಜಕಾರಣ ವಿರುದ್ಧ ನಡೆಯುತ್ತಿದ್ದು, ನನ್ನನ್ನು ಗೆಲ್ಲಿಸುವಂತೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

    ಪಟ್ಟಣದ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ತಾಲೂಕಿನ ಎಲ್ಲ ಬೂತ್ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ನಮ್ಮ ರಾಜಕೀಯ ಹಾದಿ ಅಷ್ಟು ಸುಗಮವಾಗಿಲ್ಲ. ಬರೀ ಕಲ್ಲು, ಮುಳ್ಳು. ನಮ್ಮ ತಾಯಿ 2 ಬಾರಿ, ನಾನು 1 ಬಾರಿ ಸೋತಿದ್ದು, ಬಹಳಷ್ಟು ನೊಂದಿದ್ದೇನೆ. ಇದೀಗ 2ನೇ ಬಾರಿ ಅಗ್ನಿಪರೀಕ್ಷೆಗೆ ನಿಂತಿದ್ದು, ನಿಮ್ಮೆಲ್ಲರ ಆಶೀರ್ವಾದ ಬೇಕಿದೆ. ಇದು ಪಕ್ಷದ ಚುನಾವಣೆಯಲ್ಲ. ಕಾರ್ಯಕರ್ತರ ಚುನಾವಣೆ ಎಂದು ಹೇಳಿದರು.

    ಈ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದು, ನಾವೆಲ್ಲ ನೆಮ್ಮದಿಯಿಂದ ಉಸಿರಾಡಬೇಕಾದರೆ ಗೆಲ್ಲಲೇಬೇಕಿದೆ. ಹಾಗಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಚುನಾವಣೆಗೆ ಕೇವಲ 35 ದಿನ ಬಾಕಿ ಇರುವುದರಿಂದ ಕಾರ್ಯಕರ್ತರು ಪಕ್ಷ ಸಂಘಟಿಸಬೇಕಿದೆ. ಒಂದು ಕುಟುಂಬಕ್ಕೆ ಪ್ರಧಾನಿಯಿಂದ ಜಿಪಂವರೆಗೂ ಅಧಿಕಾರ ನೀಡಿದ್ದೀರಿ. ಇದೊಂದು ಬಾರಿ ನನಗೆ ಅವಕಾಶ ಮಾಡಿಕೊಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.

    ಮುಖಂಡ ಶ್ರೀಧರ್‌ಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಹೆಸರು ಅಜರಾಮರ. ಇದೀಗ ಶ್ರೇಯಸ್ ಪಟೇಲ್ ಅವರಿಗೆ ಪಕ್ಷ ಟಿಕೆಟ್ ನೀಡಿದ್ದು, ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾಂಗ್ರೆಸ್ ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿದ್ದಾರೆ ಎಂದರು.
    ಮುಖಂಡರಾದ ಲಕ್ಷ್ಮಣ್, ಶಿವಪ್ಪ, ನಾಗರಾಜ, ಗಣಪತಿ, ದೇವರಾಜೇಗೌಡ, ಮಹಮದ್, ರಾಮಚಂದ್ರ, ನಾಗರಾಜು, ಸಲೀಮ್, ದಿನೇಶ್, ಪ್ರಸನ್ನ, ಸುಭಾನ್ ಷರೀಫ್, ಅಬ್ದುಲ್ ಬಾಸಿದ್, ಮಂಜು, ಸೋಮಣ್ಣ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts