More

    ಬೂಸ್ಟರ್ ಡೋಸ್ ಬೇಕಿಲ್ಲ; ಭಾರತದ ತಜ್ಞರ ಅಭಿಮತ, ಜನವರಿಯಲ್ಲಿ ಮಕ್ಕಳಿಗೂ ಲಸಿಕೆ ಲಭ್ಯ..

    ನವದೆಹಲಿ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಜನರೂ ಎರಡು ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ಬೂಸ್ಟರ್ ಡೋಸ್ (ತೃತೀಯ ಡೋಸ್) ಲಸಿಕೆ ಬೇಕೆಂಬ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ ಎಂದು ತಜ್ಞರ ಗುಂಪು ಹೇಳಿದೆ. ಎರಡೂ ಡೋಸ್​ಗಳನ್ನು ಬಹುತೇಕ ಮಂದಿ ಪಡೆದು, ಅವರಲ್ಲಿನ ಪ್ರತಿರೋಧ ಶಕ್ತಿಯನ್ನು ವಿಶ್ಲೇಷಣೆ ನಡೆಸಿ ಅದು ಸೋಂಕು ತಡೆಯಲು ಅಸಮರ್ಥ ಎಂಬುದು ಸಾಬೀತಾದರೆ ಮೂರನೇ ಡೋಸ್​ಗೆ ಶಿಫಾರಸು ಮಾಡಬಹುದು. ಭಾರತದಲ್ಲಿ ಪ್ರಸ್ತುತ ಎರಡೂ ಡೋಸ್ ಪಡೆದವರ ಪ್ರಮಾಣ ಶೇ. 15ರಷ್ಟಿದೆ. ಇಂಥ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಪಡೆಯುವುದು ಸರಿಕಾಣದು ಎಂದು ರಾಷ್ಟ್ರೀಯ ಇಮ್ಯುನಾಲಜಿ ಸಂಸ್ಥೆಯ ತಜ್ಞ ಡಾ. ಸತ್ಯಜಿತ್ ರಾಥ್ ತಿಳಿಸಿದ್ದಾರೆ.

    ಸೋಂಕಿಗೆ ಹೆಚ್ಚು ಬಾಧಿತರಾಗುವವರು ಈಗಾಗಲೇ ಅನೇಕ ಕಾಯಿಲೆಯಿಂದ ಪೀಡಿತರಾಗಿರುವವರು. ಅಂಥವರಲ್ಲಿ ಪ್ರತಿಕಾಯವನ್ನು ವೈಯಕ್ತಿಕವಾಗಿ ಗುರುತಿಸಿ ಬೂಸ್ಟರ್ ಡೋಸ್​ಗೆ ಪರಿಗಣಿಸಬಹುದು. ಎರಡು ಡೋಸ್ ಲಸಿಕೆ ನೀಡುವುದು ಈ ಹೊತ್ತಿನ ಆದ್ಯತೆಯೇ ಹೊರತು, ಮೂರನೇ ಡೋಸ್ ವಿಷಯದ ಸದ್ಯ ಸರ್ಕಾರದ ಮುಂದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ. ಮುಂಬೈನಲ್ಲಿ ಅನೇಕ ಆರೋಗ್ಯ ಕಾರ್ಯಕರ್ತರು, ವೈದ್ಯರು, ಕೆಲವು ರಾಜಕಾರಣಿಗಳು ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಜ್ಞರು ಈ ಅಭಿಪ್ರಾಯ ನೀಡಿದ್ದಾರೆ.

    23.50 ಕೋಟಿ ಡೋಸ್ ಲಸಿಕೆ: ಸೆಪ್ಟೆಂಬರ್​ನಲ್ಲಿ 20 ಕೋಟಿ ಕೋವಿಶೀಲ್ಡ್ ಮತ್ತು 3.50 ಕೋಟಿ ಕೊವ್ಯಾಕ್ಸಿನ್​ಗಳನ್ನು ಹೊಂದಲು ಸರ್ಕಾರ ಬಯಿಸಿದೆ. ಮುಂಬರುವ ಪ್ರತಿ ತಿಂಗಳಲ್ಲಿ 25 ಕೋಟಿ ಡೋಸ್ ಲಸಿಕೆ ಖರೀದಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಮೇ ನಲ್ಲಿ 4.90 ಕೋಟಿ ಮತ್ತು ಆಗಸ್ಟ್​ನಲ್ಲಿ 10 ಕೋಟಿ ಡೋಸ್ ಖರೀದಿ ಮಾಡಲಾಗಿತ್ತು.

    ಸೆಕೆಂಡ್​ಗೆ 466 ಡೋಸ್ ಲಸಿಕೆ!: ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಸೆ. 17ರಂದು ದೇಶದಲ್ಲಿ ಪ್ರತಿ ಸೆಕೆಂಡ್​ಗೆ 466 ಡೋಸ್ ಲಸಿಕೆಯಂತೆ ಶುಕ್ರವಾರ ಮಧ್ಯೆ 2.50 ಕೋಟಿಗೂ ಹೆಚ್ಚು ಲಸಿಕೆ ನೀಡಿರುವುದು ವಿಶ್ವ ದಾಖಲೆ. ಇದು ಆಸ್ಟ್ರೇಲಿಯಾದ ಜನಸಂಖ್ಯೆಗೆ ಸಮ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ. ತಮ್ಮ ಜನ್ಮದಿನದಂದು 2.50 ಕೋಟಿ ಡೋಸ್ ಲಸಿಕೆ ನೀಡಿ ಸಾಧನೆ ಮಾಡಿರುವುದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು, ಇದು ತಮ್ಮನ್ನು ಹೆಚ್ಚು ವಿನೀತಿನನ್ನಾಗಿ ಮಾಡಿದೆ ಮತ್ತು ಈ ಸಂದರ್ಭವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ದಾಖಲೆಯ ಚುಚ್ಚುಮದ್ದು ನೀಡಿದ್ದನ್ನು ಕೇಳಿ ಒಂದು ಪಕ್ಷಕ್ಕೆ ಜ್ವರ ಏರಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.

    35000 ದಾಟಿದ ದೈನಿಕ ಕೇಸ್: ದೇಶದಲ್ಲಿ 35,662 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ಶುಕ್ರವಾರಕ್ಕಿಂತ ಶೇ. 3.65 ಪ್ರಸರಣ ಹೆಚ್ಚಿದೆ. 24 ತಾಸಿನಲ್ಲಿ 281 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. ಕೇರಳದಲ್ಲಿ ಸೋಂಕು ಪ್ರಸರಣ ಹೆಚ್ಚಳವಾಗಿದ್ದು, ಶನಿವಾರ 23,260 ಕೇಸ್​ಗಳು ಕಂಡು ಬಂದಿವೆ. ಮರಣಿಸಿದವರ ಸಂಖ್ಯೆ 131ಕ್ಕೆ ಹೆಚ್ಚಿದೆ.

    ಡಬ್ಲ್ಯುಎಚ್​ಒ ಅನುಮತಿ ವಿಳಂಬ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಮಾನ್ಯತೆ ದೊರಕುವುದು ತುಸು ವಿಳಂಬವಾಗಲಿದ್ದು, ಅಕ್ಟೋಬರ್ 5ಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೊವ್ಯಾಕ್ಸಿನನ್ನು ಜಾಗತಿಕವಾಗಿ ತುರ್ತು ಬಳಕೆಯ ಔಷಧವೆಂದು ಡಬ್ಲ್ಯುಎಚ್​ಒ ಈ ತಿಂಗಳಲ್ಲಿ ಪರಿಗಣಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಚುಚ್ಚುಮದ್ದು ಕುರಿತ ಡಬ್ಲ್ಯುಎಚ್​ಒ ತಜ್ಞರ ಸಲಹಾ ಸಮಿತಿ ಸಭೆ ಅಕ್ಟೋಬರ್ 5ಕ್ಕೆ ನಿಗದಿಯಾಗಿದೆ. ಅಲ್ಲಿ ಕೊವ್ಯಾಕ್ಸಿನ್​ಗೆ ಅನುಮೋದನೆ ದೊರೆಯಬೇಕಿದೆ ಎಂದು ಮೂಲಗಳು ಹೇಳಿವೆ.

    ಮುಂದಿನ ವರ್ಷ ಮಕ್ಕಳಿಗೆ ಲಸಿಕೆ: ಮಕ್ಕಳ ಮೇಲಿನ ಕೋವಿಡ್ ಲಸಿಕೆ ಟ್ರಯಲ್ ಸುಗಮವಾಗಿ ಸಾಗಿದ್ದು, ಇದರ ಫಲಿತಾಂಶ ವರ್ಷಾಂತ್ಯಕ್ಕೆ ಸಿಗುವ ನಿರೀಕ್ಷೆ ಇದೆ. ಇದರ ಪರೀಶಿಲನಾ ಕಾರ್ಯವೆಲ್ಲ ಮುಗಿದು ಮುಂದಿನ ವರ್ಷ ಜನವರಿ ಇಲ್ಲವೆ ಫೆಬ್ರವರಿ ಹೊತ್ತಿಗೆ ಬಳಕೆಗೆ ಸಿದ್ಧವಾಗಲಿದೆ ಎಂದು ಪುಣೆ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಸಿಇಒ ಅದಾರ್ ಪೂನಾವಾಲಾ ವಿಶ್ವಾಸ ವ್ಯಕ್ತಪಡಿದ್ದಾರೆ. ಪರೀಕ್ಷಾರ್ಥಿ ಮಕ್ಕಳಿಗೆ ಹಂತ ಹಂತವಾಗಿ ಕೊವೊವಾಕ್ಸ್ ಚುಚ್ಚುಮದ್ದು ನೀಡಲಾಗುತ್ತಿದ್ದು, 12 ವರ್ಷಕ್ಕಿಂತ ಕೆಳಗಿನವರ ಮೇಲೂ ಟ್ರಯಲ್ ನಡೆಯುತ್ತಿದೆ. ಲಸಿಕೆ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದು ತಿಳಿಯಬೇಕಾದರೆ 3-4 ತಿಂಗಳು ಬೇಕು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಜನವರಿ-ಫೆಬ್ರವರಿ ಹೊತ್ತಿಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯದ (ಡಿಸಿಜಿಐ) ಅನುಮತಿ ದೊರೆಯಬಹುದು. ದೇಶದಲ್ಲಿ ವಯಸ್ಕರು ಸೋಂಕಿಗೆ ಒಳಗಾದಷ್ಟು ಮಕ್ಕಳು ಆಗಲಿಲ್ಲ. ಆದರೂ ಪಾಲಕರಿಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಇದ್ದೇ ಇದೆ. ಲಸಿಕೆ ಸಿದ್ಧಗೊಂಡ ಮೇಲೆ ಇದು ದೂರವಾಗುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts