More

    ಸಮಷ್ಟಿ ಪ್ರಜ್ಞೆಯಿಂದ ರಾಷ್ಟ್ರ ರಕ್ಷಣೆ ಸಾಧ್ಯ; ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸಲಹೆ

    ತುಮಕೂರು ; ವ್ಯಕ್ತಿ ಚಿಂತನೆ ಬದಲು ಸಮಷ್ಟಿ ಪ್ರಜ್ಞೆಯಿಂದ ರಾಷ್ಟ್ರವನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.

    ನಗರದ ಶ್ರೀಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಶ್ರೀಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಭಾನುವಾರ ನಿವೃತ್ತ ಶಿಕ್ಷಕ ಎಸ್.ರೇಣುಕಾರಾಧ್ಯ ಅವರ ವಂದೇ ಭಾರತಂ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವು ವ್ಯಕ್ತಿ ಚಿಂತನೆಯನ್ನು ಪಕ್ಕಕ್ಕೆ ಸರಿಸಿ ಸಮಷ್ಟಿಯ ಚಿಂತನೆನ್ನು ಗಟ್ಟಿಗೊಳಿಸಿದರೆ ದೇಶ ರಕ್ಷಣೆ ಮಾಡಬಹುದು ಎಂದರು.

    ಅಖಂಡ ಭಾರತ ಕಲ್ಪನೆಯನ್ನು ನಮ್ಮ ಮಕ್ಕಳಲ್ಲಿ, ಯುಕವರಲ್ಲಿ, ಸಾಮಾಜಿಕ ಚಿಂತಕರಲ್ಲಿ ಬಿತ್ತಬೇಕು ಎನ್ನುವುದು ರೇಣುಕಾರಾಧ್ಯ ಅವರ ಕೃತಿಯ ಮೂಲ ದಾತುವಾಗಿದೆ. ಅವರ ಈ ಕಲ್ಪನೆ ಸ್ವಾತಂತ್ರ್ಯೋತ್ಸವ ಸಂದರ್ಭಕ್ಕೆ ತುಂಬಾ ಅನ್ವಯವಾಗುತ್ತದೆ. ನಮಗೆ ದೇಶ ಮುಖ್ಯವಾಗುತ್ತಿಲ್ಲ, ಸ್ವಾರ್ಥವೇ ಎಲ್ಲೆಡೆ ತುಂಬಿತುಳುಕುತ್ತಿದೆ. ಸಮಷ್ಟಿ ಪ್ರಜ್ಞೆ ದೂರವಾಗಿದ್ದು ಇದು ಇಂದಿನ ದುಃಸ್ಥಿತಿಗೆ ಕಾರಣವಾಗಿದೆ. ಈ ಸಾತ್ವಿಕ ಕ್ರೋಧವನ್ನು ರೇಣುಕಾರಾಧ್ಯ ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ. ವಿಜ್ಞಾನ, ಕಲೆ, ಆಧ್ಯಾತ್ಮ ಈ ಮೂರನ್ನೂ ಪ್ರತಿಯೊಬ್ಬ ಲೇಖಕರೂ ಬದುಕಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಕೃತಿಗಳು ಮೂಡಿಬರಲು ಸಾಧ್ಯವಾಗುತ್ತದೆ. ಇದರಿಂದ ಸಾಮಾಜಿಕ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

    ಓದುವ ಸಂಸ್ಕೃತಿ ಕ್ಷೀಣಿಸಿದೆ: ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿಯೇ ಕ್ಷೀಣಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕಗಳ ಓದಿನ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ ಬೆಳೆಸಬೇಕು. ಅವರಲ್ಲಿ ಉತ್ತಮ ಆದರ್ಶಗಳನ್ನು ತುಂಬುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

    ಕೃತಿಯನ್ನು ಬರೆಯಲು ಪ್ರೊ.ಬಿ.ಗಂಗಾಧರಯ್ಯ, ಕೆ.ಸಿ.ಶಿವಗಂಗಯ್ಯ ಅವರ ಪ್ರೋತ್ಸಾಹವೇ ಕಾರಣ. ಡಾ. ಶಿವಕುಮಾರ ಸ್ವಾಮೀಜಿ ಅವರನ್ನು 1965ರಿಂದ 67ರವರೆಗೆ ಎರಡು ವರ್ಷಗಳ ಕಾಲ ಮಠದಲ್ಲಿ ಹತ್ತಿರದಿಂದ ಬಲ್ಲವನಾಗಿ ನಾನು ಕಂಡಂತೆ ಶ್ರೀಮಠವನ್ನು ಕಟ್ಟಲು ಎಷ್ಟು ಕಷ್ಟಪಟ್ಟರು ಎಂಬ ಸಂಪೂರ್ಣ ಚಿತ್ರಣವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದು ಈ ಕೃತಿಯನ್ನು ಶ್ರೀಗಳು ಸಮರ್ಪಿಸುತ್ತೇನೆ ಎಂದು ಕೃತಿ ಲೇಖಕ ಎಸ್.ರೇಣುಕಾರಾಧ್ಯ ತಿಳಿಸಿದರು.

    ತುಮಕೂರು ವಿವಿ ಡೀನ್ ಪ್ರೊ.ಡಿ.ವಿ.ಪರಮಶಿವಮೂರ್ತಿ, ಸಿದ್ಧಗಂಗಾ ಆಸ್ಪತ್ರೆಯ ಡಾ.ಶಾಲಿನಿ, ಎಸ್.ನಾಗಣ್ಣ, ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ, ಡಾ.ಎಸ್.ಪರಮೇಶ್, ಡಾ.ಆರ್.ಉಮಾಶಂಕರ್, ಎಂ.ವಿ.ನಾಗಣ್ಣ, ಎನ್.ಹನುಮಂತರಾಜು, ನಟರಾಜು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts