More

    ಗ್ರಾಮಗಳ ಅಭಿವೃದ್ಧಿಗೆ ಕೆಲಸ ಮಾಡಿ : ಜನಪ್ರತಿನಿಧಿಗಳಿಗೆ ಸಂಸದ ಎಸ್.ಮುನಿಸ್ವಾಮಿ ಸಲಹೆ

    ಬಂಗಾರಪೇಟೆ ಗ್ರಾಮಾಂತರ/ಕಾಮಸಮುದ್ರ : ಎಂ.ವಿ.ಕೃಷ್ಣಪ್ಪ ಅವರು ತೋರಿಸಿದ ಹಾಲು ಉತ್ಪಾದನೆಯ ಹಾದಿಯಿಂದ ಕೋಲಾರ ಜಿಲ್ಲೆಯಲ್ಲಿ ರೈತರು ಬರಗಾಲದ ಸಮಯದಲ್ಲೂ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದ ಡೇರಿ ಕಟ್ಟಡ ಹಾಗೂ ಬಿಎಂಸಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಜನಪ್ರತಿನಿಧಿಗಳು ಸಾರ್ವಜನಿಕರ ಕುಂದು ಕೊರತೆ ನಿವಾರಣೆಗೆ ಮುಂದಾಗಬೇಕು. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷಕ್ಕೋಸ್ಕರ ಗಂಟು ಬೀಳಬೇಕು. ಚುನಾವಣೆ ಮುಗಿದ ನಂತರ ಎಲ್ಲರೂ ಒಂದಾಗಿ ಗ್ರಾಮಗಳ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದರು.

    ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದಂತಹ ಕೋಲಾರ ಈಗ ಎರಡನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಿಸಿ ಮತ್ತೆ ಒಂದನೇ ಸ್ಥಾನಕ್ಕೆ ಏರಲು ರೈತರು ಶ್ರಮಿಸಬೇಕು ಎಂದರು.

    ಕೆಸಿ ವ್ಯಾಲಿ ನೀರಿನಿಂದ ಮೊದಲನೇ ಹಂತದಲ್ಲಿ 175 ಕೆರೆ ತುಂಬಬೇಕಿದ್ದು, ಅದರ ಪೈಕಿ ಈಗ 70-80 ಕೆರೆ ಭರ್ತಿಯಾಗಿವೆ. ಎರಡನೇ ಹಂತದಲ್ಲಿ 275 ಕೆರೆ ತುಂಬಿಸಲು ಮುಖ್ಯಮಂತ್ರಿ ಯಡಿಯೂರಪ್ಪ 455 ಕೋಟಿ ರೂ. ನೀಡಿದ್ದು, ಟೆಂಡರ್ ಕಾರ್ಯ ಮುಗಿದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ಹರಿಯಲಿದೆ. ಈಗಾಗಲೆ ನರಸಾಪುರ, ಲಕ್ಷ್ಮೀಸಾಗರ ಕೆರೆಗಳ ಸುತ್ತಮುತ್ತ ನೀರಿಲ್ಲದೆ ಒಣಗಿ ಹೋಗಿದ್ದಂತಹ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರು ತುಂಬಿದೆ ಎಂದರು.

    ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಪರವಾದ ಯೋಜನೆ ಕೈಗೊಂಡಿದ್ದು, ಹಲವು ಯೋಜನೆಗಳ ಮೂಲಕ ಹಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ಕೇಂದ್ರ ಸರ್ಕಾರ ರೈತರ ಉತ್ಪಾದಕರ ಸಂಘ (ಎಫ್‌ಪಿಒ)ತೆರೆಯಲು ಮುಂದಾಗಿದ್ದು, ಇದರ ಮೂಲಕ ದಲ್ಲಾಳಿ ಕಾಟವಿಲ್ಲದೆ ರೈತರಿಗೆ ಬೆಳೆಗೆ ದರ ನಿಗದಿ ಮಾಡುವ ಹಕ್ಕನ್ನು ನೀಡಲಾಗುತ್ತದೆ. ಆದರೆ ದೆಹಲಿ ಬಳಿ ಕೆಲವು ದಲ್ಲಾಳಿಗಳು ಯೋಜನೆ ಕೈಬಿಡಬೇಕೆಂದು ರೈತರ ಹೆಸರಿನಲ್ಲಿ ಧರಣಿಗೆ ಕುಳಿತಿದ್ದಾರೆ. ಅವರ‌್ಯಾರೂ ರೈತರಲ್ಲ ಎಂದರು.

    ಕೋಚಿಮುಲ್ ಒಕ್ಕೂಟದ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕರ ವಿ.ತಿಪ್ಪಾರೆಡ್ಡಿ, ಜಿಪಂ ಸದಸ್ಯರಾದ ಬಿವಿ.ಮಹೇಶ್, ಶ್ರೀನಿವಾಸಗೌಡ, ಡೇರಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ದೇವರಾಜ್, ಗ್ರಾಪಂ ಅಧ್ಯಕ್ಷೆ ಕಾವೇರಿ ಆದಿನಾರಾಯಣ, ಸದಸ್ಯ ಪಾರ್ಥಸಾರಥಿ, ಮುಖ್ಯಕಾರ್ಯನಿರ್ವಾಹಕ ವೆಂಕಟರೆಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts