More

    ಮಾಲಿನ್ಯ, ತಾಪಮಾನದಿಂದ ಸಮುದ್ರ ನೀಲಿ, ಮೀನುಗಾರಿಕಾ ಕಾಲೇಜಿನ ತಜ್ಞರಿಂದ ಅಧ್ಯಯನ ವರದಿ

    – ವೇಣುವಿನೋದ್ ಕೆ.ಎಸ್.ಮಂಗಳೂರು

    ಹೆಚ್ಚುತ್ತಿರುವ ಮಾಲಿನ್ಯ, ಸಮುದ್ರದ ನೀರಿನ ತಾಪಮಾನ ಏರಿಕೆ, ಸಾಗರ ಸೇರುವ ಕೊಳಚೆ ನೀರು, ಹೆಚ್ಚುವ ಸಮುದ್ರದ ಅಬ್ಬರ ಇವೆಲ್ಲವೂ ಸೇರಿ ಸಮುದ್ರದಲ್ಲಿ ರಾತ್ರಿ ನೀಲಿ ಬಣ್ಣದಲ್ಲಿ ನೀರು ಹೊಳೆಯಲು ಕಾರಣವಾಗುತ್ತಿದೆಯೇ?

    ಕಳೆದ ಹಲವು ದಿನಗಳಿಂದ ಕರ್ನಾಟಕ, ಗೋವಾ ಕರಾವಳಿಯುದ್ದಕ್ಕೂ ರಾತ್ರಿ ಅಲ್ಲಲ್ಲಿ ಸಮುದ್ರದ ನೀರು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು ಹಲವು ಬೀಚ್‌ಗಳಿಗೆ ತೆರಳಿ ಸ್ಯಾಂಪಲ್ ಸಂಗ್ರಹಿಸಿ ಅಧ್ಯಯನ ನಡೆಸಿ, ಪ್ರಾಥಮಿಕ ವರದಿ ನೀಡಿದ್ದಾರೆ. ವರದಿ ನೀರಿನ ನೀಲಿ ಬಣ್ಣಕ್ಕೆ ಹಲವು ಕಾರಣಗಳಿವೆ.

    ವರ್ಷದಿಂದ ವರ್ಷಕ್ಕೆ ಏರುತ್ತಿರುವ ಜಾಗತಿಕ ತಾಪಮಾನವೂ ಸಮುದ್ರದ ನೀಲಿವರ್ಣ ಹೊರಸೂಸುವ ಪಾಚಿ ಮಾದರಿಯ ಜೀವಿಗಳು ಹೆಚ್ಚಾಗಲು ಕಾರಣ. ಕಾಲೇಜಿನ ತಜ್ಞರಾದ ಡಾ.ಎಂ.ಟಿ.ಲಕ್ಷ್ಮೀಪತಿ, ಡಾ.ಟಿ.ಎಸ್.ಅಣ್ಣಪ್ಪಸ್ವಾಮಿ, ಡಾ.ರಾಜೇಶ್ ಡಿ.ಪಿ, ಚಂದನ್ ಮತ್ತು ಹರ್ಷತ್ ಪಡುಕೆರೆ, ಸಸಿಹಿತ್ಲು, ಸುರತ್ಕಲ್ ಬೀಚ್‌ಗಳಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ನೀರಿನ ಮಾದರಿಗಳನ್ನು ಪ್ಲಾಂಕ್ಟನ್ ಅನಾಲಿಸಿಸ್ ಹಾಗೂ ಬ್ಯಾಕ್ಟೀರಿಯಲ್ ರಚನೆಗಳಿಗಾಗಿ ವಿಶ್ಲೇಷಣೆ ನಡೆಸಲಾಗಿದೆ.

    ನೀರಿನಲ್ಲಿ ಜೈವದೀಪ್ತಿ: ಮೈಕ್ರೋಸ್ಕೋಪಿಕ್ ವಿಧಾನ ಅನುಸರಿಸಿ ಪ್ಲಾಂಕ್ಟನ್ ಅನಾಲಿಸಿಸ್ ನಡೆಸಿದಾಗ ಇದರಲ್ಲಿರುವ ಸೂಕ್ಷ್ಮಾಣು ಜೀವಿ ನೋಕ್ಟಿಲೂಕಾ ಸಿಂಟಿಲನ್ಸ್(ಘೆಟ್ಚಠಿಜ್ಝ್ಠ್ಚಿ ಠ್ಚಜ್ಞಿಠಿಜ್ಝ್ಝಿಚ್ಞ) ಎನ್ನುವುದು ಗೊತ್ತಾಗಿದೆ. ಈ ಜೀವಿ ಕರಾವಳಿಯ ಸಮುದ್ರ ನೀರಿನಲ್ಲಿ ಜೈವದೀಪ್ತಿ ಅಥವಾ ಬಯೋಲ್ಯುಮಿನಿಸೆನ್ಸ್ ಉಂಟಾಗಲು ಕಾರಣವಾಗಿದೆ. ಇದು ಸಾಮಾನ್ಯ ಘಟನೆ. ಪಡುಕೆರೆ, ಸಸಿಹಿತ್ಲು, ಎನ್‌ಐಟಿಕೆ, ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ ಬೀಚ್‌ಗಳಲ್ಲೂ ಇದು ಕಾಣಿಸಿದೆ ಎನ್ನುತ್ತಾರೆ ತಜ್ಞರು.

    ಸೂಕ್ಷ್ಮಾಣು ಜೀವಿಗಳು ಅಥವಾ ಪಾಚಿ ಮಾದರಿಯ ಪ್ಲಾಂಕ್ಟನ್ ಜೀವಿಗಳಲ್ಲಿ ಉಂಟಾಗುವ ಜೈವಿಕ ರಾಸಾಯನಿಕ ಕ್ರಿಯೆಯಿಂದಾಗಿ ಈ ರೀತಿಯ ನೀಲಿ ಬೆಳಕು ಕಾಣಿಸುತ್ತದೆ. ಕೆಲವೊಮ್ಮೆ ಕೊಳೆಯುವಂತಹ ಜೈವಿಕ ವಸ್ತುಗಳು ಮರಳಿನಲ್ಲಿರುವಾಗಲೂ ಜೈವದೀಪ್ತಿ ಕಾಣಿಸುತ್ತದೆ.
    ಪ್ರಸ್ತುತ ರಾಜ್ಯದ ಕರಾವಳಿಯಲ್ಲಿ ಕಾಣಿಸಿರುವ ಸೂಕ್ಷ್ಮಾಣು ಜೀವಿಯು ನೋಕ್ಟಿಲೂಕಾ ಸಿಂಟಿಲೆನ್ಸ್‌ನ್ನು ಸಾಮಾನ್ಯ ಭಾಷೆಯಲ್ಲಿ ಸೀ ಸ್ಪಾರ್ಕಲ್ ಎಂದು ಕರೆಯಲಾಗುತ್ತದೆ. ನಾಕ್ಟಿಲ್ಲಾ ಜೀವಿ 1-2 ಮಿ.ಮಿ ದೊಡ್ಡದಾಗಿರುವ ಸೂಕ್ಷ್ಮಜೀವಿ. ಇತರ ಸೂಕ್ಷ್ಮಾಣುಜೀವಿಗಳನ್ನು ಭಕ್ಷಿಸುತ್ತದೆ. ಇವುಗಳು ದೊಡ್ಡ ಪ್ರಮಾಣದಲ್ಲಿ ಸೇರುವಾಗ ದೇಹದಲ್ಲಿ ಜೈವಿಕ ರಾಸಾಯನಿಕ ವಸ್ತುಗಳಾದ ಲುಸಿಫೆರಿನ್ ಮತ್ತು ಲುಸಿಫೆರೇಸ್ ಪ್ರಕ್ರಿಯೆ ನಡೆದು ಬೆಳಕು ಹೊರಸೂಸುತ್ತವೆ.

    ನಮ್ಮ ತಜ್ಞರು ನಿರಂತರವಾಗಿ ಪಶ್ಚಿಮ ಕರಾವಳಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಬ್ಯಾಕ್ಟೀರಿಯಾ ಅನಾಲಿಸಿಸನ್ನು ಇನ್ನೊಂದು ದಿನದಲ್ಲಿ ನೀಡಲಿದ್ದೇವೆ ಎನ್ನುತ್ತಾರೆ ಡೀನ್ ಸೆಂಥಿಲ್ ವೇಲ್. ಪಶ್ಚಿಮ ಕರಾವಳಿ ಇತ್ತೀಚೆಗೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. 2019ರ ಡಿಸೆಂಬರ್‌ನಿಂದ ಫೆಬ್ರವರಿ 2020ರವರೆಗೆ ಕಾರ್ಗಿಲ್ ಫಿಶ್, ಗೋವಾದ ಹಲವೆಡೆ ಜೆಲ್ಲಿ ಫಿಶ್ ಇತ್ಯಾದಿ ಅಲ್ಲದೆ ಈಗ ಪ್ಲಾಂಕ್ಟನ್ ಜೀವಿಗಳ ಇರುವಿಕೆ ದೊಡ್ಡ ಪ್ರಮಾಣದಲ್ಲಿದೆ.

    ಬಿಸಿಯಾಗುತ್ತಿದೆ ಕಡಲು!: ಮೀನುಗಾರಿಕಾ ಕಾಲೇಜಿನ ತಜ್ಞರು ನ.21ರಂದು ರಾತ್ರಿ ಮಾದರಿ ಸಂಗ್ರಹಕ್ಕಾಗಿ ತೆರಳುವಾಗ ಸಮುದ್ರ ನೀರಿನ ತಾಪಮಾನ ಹೊರಗಿನ ವಾತಾವರಣದ ತಾಪಮಾನಕ್ಕಿಂತ ಹೆಚ್ಚಿರುವುದನ್ನು ಗಮನಿಸಿದ್ದಾರೆ. ಹೊರಗೆ 30 ಡಿಗ್ರಿ ಸೆಲ್ಸಿಯಸ್ ಇದ್ದಾಗ, ಸಮುದ್ರ ನೀರಿನ ತಾಪಮಾನ 32 ಡಿಗ್ರಿ ಇತ್ತು. ಪ್ಲಾಂಕ್ಟನ್‌ಗಳ ಜೈವದೀಪ್ತಿ ರಾತ್ರಿ 7.30ಕ್ಕೆ ಅತ್ಯಧಿಕವಾಗಿತ್ತು. ಸಾಮಾನ್ಯವಾಗಿ ಕಡಲಿನ ನೀರು ತಂಪಾಗಿರಬೇಕು. 25 ಡಿಗ್ರಿ ಸೆಲ್ಸಿಯಸ್ ಮೀರಬಾರದು. ಆದರೆ ಕಡಲು ಬಿಸಿಯಾಗುತ್ತಿರುವುದು ಶುಭಸೂಚಕವಲ್ಲ ಎನ್ನುತ್ತಾರೆ ಡಾ.ಸೆಂಥಿಲ್ ವೇಲ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts