More

    ಬ್ಲೂ ಫ್ಲ್ಯಾಗ್ ಬೀಚ್ ಯೋಜನೆ ಶೀಘ್ರ ಪೂರ್ಣ

    – ಹೇಮನಾಥ್ ಪಡುಬಿದ್ರಿ
    8 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನವಾಗುತ್ತಿರುವ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆ ಕಾಮಗಾರಿ ವೇಗ ಪಡೆಯುತ್ತಿದ್ದು, ಮಾರ್ಚ್ ತಿಂಗಳ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಕೇಂದ್ರ ತಂಡ ಆಗಮಿಸಿ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಶನ್ ಪರಿಶೀಲನೆ ನಡೆಸಲಿದೆ.ಪಡುಬಿದ್ರಿ ಬೀಚನ್ನು ಬ್ಲೂ ಪ್ಲ್ಯಾಗ್ ಸರ್ಟಿಫಿಕೇಶನ್ ಎಂದು ಪರಿಗಣಿಸುವ ಯೋಜನೆಗೆ ಕೇಂದ್ರ ಪರಿಸರ ಮಂತ್ರಾಲಯ 2018 ಆಗಸ್ಟ್ ತಿಂಗಳಲ್ಲಿ ಅನುಮೋದನೆ ನೀಡಿತ್ತು. ಗುರ್‌ಗಾಂವ್‌ನ ಎ ಟು ಝಡ್ ಇನ್‌ಫ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆ ಯೋಜನೆಯ ಟೆಂಡರ್ ವಹಿಸಿ ಕಾಮಗಾರಿ ಆರಂಭಿಸಿತ್ತು. ಅಂದುಕೊಂಡಂತೆ ಕಾಮಗಾರಿಗಳು ಸಾಗಿದ್ದರೆ ಆ ವರ್ಷ ಕೊನೆಯಲ್ಲಿ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಪಡೆಯುತ್ತಿತ್ತು. ಆದರೆ ಕೆಲ ತಾಂತ್ರಿಕ ಹಾಗೂ ಪ್ರಾಕೃತಿಕ ವಿಕೋಪದ ಪರಿಣಾಮ ಯೋಜನೆ ಮಂದಗತಿಯಲ್ಲಿ ಸಾಗಲಾರಂಭಿಸಿತು.

    ಸುರಕ್ಷಿತ ವಲಯಕ್ಕೆ ಸ್ಥಳಾಂತರ: ಮುಟ್ಟಳಿವೆಗೆ ಹೊಂದಿಕೊಂಡಂತೆ 500 ಮೀಟರ್ ವ್ಯಾಪ್ತಿಯಲ್ಲಿ ಯೋಜನೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಪ್ರಾಕೃತಿಕ ವಿಕೋಪ ಹಾಗೂ ಮಳೆಯಿಂದಾಗಿ ಕಾಮಿನಿ ನದಿ ಹಾಗೂ ಸಮುದ್ರದ ನೀರಿನ ಒಳ-ಹೊರ ಹರಿವು ಹೆಚ್ಚಾಗಿ ಬ್ಲೂ ಫ್ಲ್ಯಾಗ್ ಬೀಚ್ ಯೋಜನಾ ಪ್ರದೇಶವನ್ನು ಸೀಳಿಕೊಂಡು ನೀರು ಸಮುದ್ರ ಸೇರಿದ ಪರಿಣಾಮ ಯೋಜನಾ ಪ್ರದೇಶದ ಹಲವಾರು ಮರಗಳು ಧರಾಶಾಹಿಯಾಗಿ, ನಿರ್ಮಾಣವಾಗಿದ್ದ ಸಾಕಷ್ಟು ಕಾಮಗಾರಿಗಳಿಗೆ ಹಾನಿಯಾಗಿತ್ತು. ಇದನ್ನು ಮನಗಂಡು ಯೋಜನೆಯನ್ನು ಸುರಕ್ಷಿತ ವಲಯಕ್ಕೆ ಸ್ಥಳಾಂತರಿಸಲಾಯಿತು. ಸ್ಥಳಾಂತರಿತ ಜಾಗದಲ್ಲಿ ಡ್ರೆಸ್ ಬದಲಾವಣೆ ಕೋಣೆಗಳು, ಮಹಿಳೆಯರು ಹಾಗೂ ಪುರುಷ ಶೌಚಗೃಹ ಕಾಮಗಾರಿಗಳ ನಿರ್ಮಾಣವಾಗಬೇಕಿದೆ. ಅದರೊಂದಿಗೆ ಜಾಗಿಂಗ್ ಟ್ರ್ಯಾಕ್ ಹಾಗೂ ವಾಹನ ನಿಲುಗಡೆ ಪ್ರದೇಶಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಆಗಬೇಕಿದೆ.

    ಸೋಲಾರ್ ಹಾಗೂ ಘನತ್ಯಾಜ್ಯ ಘಟಕ ಸಿದ್ಧ: ಪಡುಬಿದ್ರಿ ಬೀಚ್ ಪ್ರದೇಶದಿಂದ ನಾಲ್ಕು ಕಿ.ಮೀ.ವ್ಯಾಪ್ತಿಯಲ್ಲಿ ಪ್ರತಿದಿನ ಬೀಚ್ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದು, ಸಂಗ್ರಹವಾಗುವ ತ್ಯಾಜ್ಯವನ್ನು ಅತ್ಯಾಧುನಿಕ ರೀತಿಯಲ್ಲಿ ಘನತ್ಯಾಜ್ಯ ಘಟಕದಲ್ಲಿ ಸಂಸ್ಕರಣೆ ಮಾಡಿ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ದಿನ ಸರಾಸರಿ 5 ಕೆ.ಜಿ.ಪ್ಲಾಸ್ಟಿಕ್, 8 ಕೆ.ಜಿ.ಸಾವಯವ ತ್ಯಾಜ್ಯ, 8 ಕೆ.ಜಿ.ಇತರ ತ್ಯಾಜ್ಯಗಳನ್ನು ಪ್ರತ್ಯೇಕಿಸಲಾಗುತ್ತಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದಂತೆ ದಡಕ್ಕಪ್ಪಳಿಸುವ ತ್ಯಾಜ್ಯವೂ ಹೆಚ್ಚಾಗುತ್ತದೆ. ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಘನತ್ಯಾಜ್ಯ ಸಂಸ್ಕರಣಾ ಘಟಕದ ಮೇಲ್ಛಾವಣಿಗೆ ಸೋಲಾರ್ ಫ್ಯಾನಲ್ ಅಳವಡಿಸಿ 40 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದನ್ನು ಯೋಜನಾ ಪ್ರದೇಶಕ್ಕೆ ಅಗತ್ಯಕ್ಕನುಸಾರ ಬಳಕೆ ಮಾಡಲಾಗುತ್ತಿದೆ. ಬಂದರು ಮತ್ತು ಮೀನುಗಾರಿಕಾ ಇಲಾಖೆ ಮೂಲಕ 1 ಕೋಟಿ ರೂ.ವೆಚ್ಚದಲ್ಲಿ ಪಡುಬಿದ್ರಿ ಬೀಚ್ ಎಂಡ್ ಪಾಯಿಂಟ್‌ನಿಂದ ನಡಿಪಟ್ಣದವರೆಗೆ ವಿಸ್ತಾರ ಗೊಳಿಸಿ ಕಾಂಕ್ರೀಟಿಕೃತಗೊಳಿಸಲಾಗಿದೆ. ಯೋಜನಾ ಪ್ರದೇಶದವರೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಮಾರ್ಗವೂ ಆಗಿದೆ.

    ಶೇ.50ಕ್ಕೂ ಹೆಚ್ಚಿನ ಕಾಮಗಾರಿ ಮುಕ್ತಾಯಗೊಂಡಿವೆ. ಬಾಕಿ ಉಳಿದಿರುವ ಕಾಮಗಾರಿ ಎರಡು ತಿಂಗಳೊಳಗೆ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬಳಿಕ ಸರ್ಟಿಫಿಕೇಶನ್‌ಗಾಗಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲಾಗುವುದು. ಕೇಂದ್ರ ನಿರ್ಣಾಯಕರ ತಂಡ ಬಂದು, ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಿದ ಬಳಿಕ ಅಂತಾರಾಷ್ಟ್ರೀಯ ತಂಡ ಆಗಮಿಸಲಿದೆ.
    – ಚಂದ್ರಶೇಖರ ನಾಯ್ಕ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ, ಉಡುಪಿ

    ಕೆಆರ್‌ಐಡಿಎಲ್ ಪ್ರವಾಸೋದ್ಯಮ ಇಲಾಖೆ ಮೂಲಕ ಬ್ಲೂ ಫ್ಲ್ಯಾಗ್ ಬೀಚ್ ಪ್ರದೇಶದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಮೂಲಕ ಸಮುದ್ರದ ಪೂರ್ವ ಭಾಗದಲ್ಲಿ ಕಾಮಿನಿ ನದಿಗೆ ಪ್ರತ್ಯೇಕವಾಗಿ ನಿರ್ಮಿಸಿ ಬಾಕಿ ಉಳಿದಿರುವ 120 ಮೀ.ತಡೆಗೋಡೆ ನಿರ್ಮಾಣಕ್ಕೆ ಅಂದಾಜುಪಟ್ಟಿ ಮಂಜೂರಾತಿ ಹಂತದಲ್ಲಿದೆ. ಮುಂದಿನ ಹಂತದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ತಡೆಗೋಡೆ ನಿರ್ಮಿಸಲಾಗುತ್ತದೆ. ಕುಡಿಯುವ ಶುದ್ಧ ನೀರು ಪೂರೈಕೆಗಾಗಿ ರಾ.ಹೆ.66 ಪಡುಬಿದ್ರಿ ಬೀಡುಬಳಿ ಕೊಳವೆ ಬಾವಿ ನಿರ್ಮಾಣಕ್ಕಿರುವ ಸಮಸ್ಯೆ ಬಗ್ಗೆ ಗ್ರಾಪಂನಲ್ಲಿ ಮಾತುಕತೆ ನಡೆಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗು ವುದು. ಅಲ್ಲಿಂದ ಪೈಪ್‌ಲೈನ್ ಮೂಲಕ ಕಾಮಿನಿ ನದಿ ಬದಿಯಿಂದ ಯೋಜನಾ ಪ್ರದೇಶಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
    – ಕೃಷ್ಣ ಹೆಬ್ಸೂರ್, ಕಾರ್ಯಕಾರಿ ಇಂಜಿನಿಯರ್, ಕೆಆರ್‌ಐಡಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts