More

    ರಕ್ತದಾನ ಮಾಡಿ ಜೀವ ಉಳಿಸಿ

    ಕುಶಾಲನಗರ : ಯುವಜನರು ಹೆಚ್ಚು ಹೆಚ್ಚು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವವನ್ನು ಉಳಿಸಲು ಸಹಕಾರ ನೀಡಬೇಕು ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರದ ವೈದ್ಯ ಡಾ.ಕರುಂಬಯ್ಯ ಸಲಹೆ ನೀಡಿದರು.
    ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕ, ವಿದ್ಯಾರ್ಥಿ ಸಂಘ, ದೈಹಿಕ ಶಿಕ್ಷಣ ವಿಭಾಗ, ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲೇ ರಕ್ತದ ಕೊರತೆ ಇದೆ. ಶಿಬಿರಗಳ ಮೂಲಕ ರೋಗಿಗಳ ತುರ್ತು ಚಿಕಿತ್ಸೆಗೆ ದಾನಿಗಳು ನೆರವಾಗುವ ಅವಕಾಶವಿದೆ. ಯುವಜನರು ಚಟಗಳಿಗೆ ದಾಸರಾಗದೇ ಉತ್ತಮ ಆಹಾರ ಸೇವಿಸಿ ಆರೋಗ್ಯವಂತರಾಗಿ ಇನ್ನೊಂದು ಜೀವವನ್ನು ಉಳಿಸುವ ರಕ್ತದಾನದಂಥ ಮಹತ್ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಶಾಲನಗರ ರೆಡ್ ಕ್ರಾಸ್ ಅಧ್ಯಕ್ಷ ಎಸ್.ಕೆ.ಸತೀಶ್, ರಕ್ತದಾನ ಮಹಾದಾನ. ಆರೋಗ್ಯವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಈ ಬಗ್ಗೆ ಯಾವುದೇ ಗೊಂದಲ ಮತ್ತು ಭಯ ಬೇಡ ಎಂದರು. ಜನರು ಮದ್ಯಪಾನ, ಧೂಮಪಾನ, ತಂಬಾಕು, ಅಫೀಮು ಇತ್ಯಾದಿ ಸೇವನೆಗಳಿಂದ ದೂರ ಇರಬೇಖು. ಸದೃಢ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
    ಪ್ರಾಂಶುಪಾಲ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕುಶಾಲನಗರ ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತಾ, ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಹರ್ಷ, ಐಕ್ಯೂಎಸಿ ಸಂಚಾಲಕಿ ರಶ್ಮಿ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ರಮೇಶ್ ಚಂದ್ರ ಇತರರು ಇದ್ದರು. ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿ ಒಟ್ಟು 40 ಜನ ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts