More

    ದೊಣ್ಣೆಯಿಂದ ಬಡಿದಾಡಿದ ಜನ

    ಬೆಳಗಾವಿ: ಸೌಹಾರ್ದಯುತವಾಗಿ ಐವರು ಮಹನೀಯರ ಪ್ರತಿಮೆಗಳನ್ನು ಒಂದೇ ಜಾಗದಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲು ಸಜ್ಜಾಗುತ್ತಿದ್ದ ಗ್ರಾಮದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳಿಂದ ಶಿವಸೇನೆ ಕಾರ್ಯಕರ್ತರು ಮತ್ತು ಸ್ಥಳೀಯರು ದೊಣ್ಣೆಯಿಂದ ಹೊಡೆದಾಡಿದ ಘಟನೆ ಭಾನುವಾರ ನಡೆದಿದೆ.

    ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಹೊರವಲಯದಲ್ಲಿ ಹೊಡೆದಾಟ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಎರಡೂ ತಂಡಗಳಿಗೆ ಸತ್ಯಾಸತ್ಯತೆ ಮನವರಿಕೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

    ಕಳೆದ ಮೂರು ದಿನಗಳಿಂದಲೂ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ತಂಟೆ ತೆಗೆಯುತ್ತಿರುವ ಶಿವಸೇನೆ ಕಾಯಕರ್ತರು ಭಾನುವಾರ ಮಧ್ಯಾಹ್ನ ತಂಡೋಪತಂಡವಾಗಿ ಜಮಾಯಿಸಿ, ರಾಷ್ಟ್ರೀಯ ಹೆದ್ದಾರಿ ತಡೆದು ಸ್ಥಳೀಯರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಕೆರಳಿದ ಸ್ಥಳೀಯ ನಿವಾಸಿಗಳು ಪ್ರತಿ ದಾಳಿ ನಡೆಸಿ, ಅವರನ್ನು ಹೊಡೆದೋಡಿಸಿದ್ದಾರೆ ಎನ್ನಲಾಗಿದೆ.

    ಪ್ರಕರಣದ ಹಿನ್ನೆಲೆ: ಆ. 5ರಂದು ರಾತ್ರಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಗ್ರಾಮದ ಶ್ರೀಮಹಾಲಕ್ಷ್ಮೀ ದೇವಿ ಕಮಿಟಿಗೆ ಸೇರಿದ್ದ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಈಗಾಗಲೇ ಗ್ರಾಮದಲ್ಲಿ ಶಿವಾಜಿ, ಅಂಬೇಡ್ಕರ್, ವಾಲ್ಮೀಕಿ, ಬಸವೇಶ್ವರ ಹಾಗೂ ಕೃಷ್ಣರ ಐದು ಮೂರ್ತಿಗಳ ಪ್ರತಿಷ್ಠಾಪನೆಗೆ ಸ್ಥಳ ನೀಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಳವಡಿಸಲಾಗಿದ್ದ ಶಿವಾಜಿ ಪ್ರತಿಮೆಯನ್ನು ಅವರ ಅಭಿಮಾನಿಗಳೇ ತೆರವು ಮಾಡಿ, ತಮ್ಮ ಸ್ವಾಧೀನದಲ್ಲಿಯೇ ಇಟ್ಟುಕೊಂಡಿದ್ದರು.

    ಮುಂದಿನ ದಿನಗಳಲ್ಲಿ ಊರಲ್ಲಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮದ ಪ್ರಮುಖ ಜಾಗದಲ್ಲಿ ಐವರು ಮಹನೀಯರ ಪ್ರತಿಮೆ ಪ್ರತಿಷ್ಠಾಪಿಸಿ ಆರಾಧಿಸಲು ನಿರ್ಧರಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ವಿರೋಧಿಸಲಾಗುತ್ತಿದೆ ಎಂಬಂತೆ ಸುದ್ದಿ ಬಿಂಬಿಸಲಾಗಿತ್ತು. ಇದರಿಂದ ಶಿವಸೇನೆ ಕಾಯಕರ್ತರು ತಂಡೋಪತಂಡವಾಗಿ ಗ್ರಾಮಕ್ಕೆ ಆಗಮಿಸಿ ವಿವಾದ ಎಬ್ಬಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts