More

    ಬಿಎಲ್‌ಡಿಇ ಡೀಮ್ಡ್ ವಿವಿ 11ನೇ ಘಟಿಕೋತ್ಸವ, ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದೇನು? ಹೇಗಿತ್ತು ಗೊತ್ತಾ ಘಟಿಕೋತ್ಸವದ ವೈಭವ?

    ವಿಜಯಪುರ: ಡಿಜಿಟಲ್ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯಗಳಿಂದಾಗಿ ಆರೋಗ್ಯ ಕ್ಷೇತ್ರ ಸಾಕಷ್ಟು ವಿಸ್ತರಣೆಯಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

    ಇಲ್ಲಿನ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 11ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ವೈದ್ಯರು ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಗೆ ಒತ್ತು ನೀಡಬೇಕು ಎಂದರು.

    21ನೇ ಶತಮಾನ ಡಿಜಿಟಲ್ ತಂತ್ರಜ್ಞಾನಮಯವಾಗಿದೆ. ರೋಬೊಟಿಕ್, ನ್ಯಾನೋ ಮತ್ತು ಲೇಸರ್ ತಂತ್ರಜ್ಞಾನಗಳು ಆರೋಗ್ಯ ಮತ್ತು ವೃತ್ತಿ ಶಿಕ್ಷಣದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಅಲ್ಲದೇ, ಔಷಧ, ದಂತವೈದ್ಯಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕೆ ಹಾಗೂ ಕೃಷಿಯ ಮೇಲೂ ಪರಿಣಾಮ ಬಿರುತ್ತಿವೆ. ರೋಗ ನಿರ್ಣಯ, ಶಸ್ತ್ರಚಿಕಿತ್ಸಾ ವಿಧಾನಗಳು, ಟೆಲಿಮೆಡಿಸೀನ್ ಸೇರಿದಂತೆ ನಾನಾ ಹೊಸ ಆವಿಷ್ಕಾರಗಳು, ಇವುಗಳ ಜೊತಗೆ ನಾಲ್ಕನೇ ಕೈಗಾರಿಕೆ ಕ್ರಾಂತಿಗಳಾದ, ಕೃತಕ ಬುದ್ದಿಮತ್ತೆ, ಯಾಂತ್ರಿಕೃತ ಭಾಷೆ, ಜೀನ್ ಥೆರಪಿ ನ್ಯಾನೋ ಚಿಕಿತ್ಸೆ, ಕಡಿಮೆ ನೋವಿನ ಚಿಕಿತ್ಸೆಗಳು, ಲ್ಯಾಪ್ರೋಸ್ಕೋಪಿಕ್, ರೋಬೋಟಿಕ್ ಸರ್ಜರಿ, ಎಂಡೋಸ್ಕೋಪಿ, ಲೇಸರ್ ಆಧಾರಿತ ಚಿಕಿತ್ಸಾ ವಿಧಾನಗಳು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿವೆ. ಎಂಆರ್‌ಐ, ಸಿಟಿ ಸ್ಕ್ಯಾನ್, ಪೆಟ್ ಸ್ಕ್ಯಾನ್‌ಗಳು ಚಿಕಿತ್ಸೆಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿವೆ ಎಂದು ಹೇಳಿದರು.

    ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು

    ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಕೌಶಲಗಳನ್ನು ಮತ್ತು ಸಾಮರ್ಥ್ಯವನ್ನು ಒತ್ತಿ ಹೇಳುವ ಮೂಲಕ ಹೊಸ ವಿಧಾನಗಳನ್ನು ಪರಿಚಯಿಸುತ್ತಿದೆ. ಡಿಜಿಟಲ್ ಮತ್ತು ಐಸಿಟಿ ತಂತ್ರಜ್ಞಾನಗಳು ಸರ್ಚ್ ಇಂಜಿನ್‌ಗಳು ಯಾವಾಗ ಬೇಕಾದರೂ ಸ್ಮಾರ್ಟಫೋನ್ ಮೂಲಕ ಮಾಹಿತಿ ಪಡೆಯಲು ಅನುಕೂಲವಾಗಿವೆ. ಇದರಿಂದ ಜಾಗತಿಗವಾಗಿ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಬಳಸಿಕೊಳ್ಳಬಹುದು. ಈಗ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ನಾನಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವ ತಾವು ಈಗ ವಿಶ್ವಾದ್ಯಂತ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ಅರ್ಹರಾಗಿದ್ದೀರಿ ಎಂದು ಪದವಿಧರರನ್ನುದ್ದೇಶಿಸಿ ನುಡಿದರು.

    ಆಧುನಿಕ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ನಡುವೆಯೂ ಗ್ರಾಮೀಣ ಆರೋಗ್ಯ ವ್ಯವಸ್ಥೆಗಳಲ್ಲಿ ಇನ್ನೂ ಸುಧಾರಣೆಯಾಗಬೇಕಿದೆ. ವೈದ್ಯಕೀಯ ಸೌಲಭ್ಯಗಳು ರೋಗಿಗಳಿಗೆ ಕೈಗೆಟುಕಬೇಕಾಗಿದೆ. ಆದ್ದರಿಂದ ಸರ್ಕಾರ ಆರೋಗ್ಯ ವಿಮೆ ಮತ್ತು ಉಚಿತ ಆರೋಗ್ಯ ಯೋಜನೆಗಳ ಮೂಲಕ ಅಗತ್ಯವಾಗಿರುವ ಜನರಿಗೆ ವೈದ್ಯಕೀಯ ಸೇವೆಗಳನ್ನು ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಮತ್ತು ಚಿಕಿತ್ಸೆ ಒದಗಿಸುಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

    ಬಿಎಲ್‌ಡಿಇ ಪಾತ್ರ ಅನನ್ಯ

    ಕರೊನಾ ಸಂದರ್ಭದಲ್ಲಿ ಬಿಎಲ್ಡಿಇ ಆಸ್ಪತ್ರೆ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿದೆ. ಸರ್ಕಾರ ನಿಗದಿ ಪಡಿಸಿದ ದರಕ್ಕಿಂತಲೂ ಕಡಿಮೆ ಶುಲ್ಕ ಮತ್ತು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ನೀಡಿ ಮಾನವೀಯತೆ ತೋರಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಬರಪೀಡಿತ ಹಣೆಪಟ್ಟಿ ಹೊಂದಿದ್ದ ವಿಜಯಪುರ ಜಿಲ್ಲೆಯಲ್ಲಿ 1910ರಲ್ಲಿ ಆರಂಭವಾದ ಬಿಎಲ್ಡಿಇ ಸಂಸ್ಥೆ ಜಿಲ್ಲೆಯ ಆರ್ಥಿಕ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ನಾನಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ, ಕಲೆ, ವಿಜ್ಞಾನ, ಶಿಕ್ಷಣ, ಕಾನೂನು, ವಾಣಿಜ್ಯ, ನಿರ್ವಹಣೆ, ಫಾರ್ಮಸಿ, ನರ್ಸಿಂಗ್, ಇಂಜಿನಿಯರಿಂಗ್, ಆಯುರ್ವೇದ ಮತ್ತು ಇತರ ಆರೋಗ್ಯ ವಿಜ್ಞಾನ ಕೋರ್ಸ್‌ಗಳನ್ನು ನಡೆಸುವ ಮೂಲಕ ಶತಮಾನ ಪೂರೈಸಿದೆ. 113 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯಲ್ಲಿ ಈಗ 88ಕ್ಕೂ ಹೆಚ್ಚು ನಾನಾ ಶಿಕ್ಷಣ ಸಂಸ್ಥೆಗಳಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬಿಎಲ್ಡಿಇ ಸಂಸ್ಥೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಸಂಸ್ಥೆಯ ಅಭಿವೃದ್ಧಿಯಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ, ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು, ದಕ್ಷ ಆಡಳಿತಗಾರ ಬಿ. ಎಂ. ಪಾಟೀಲರ ಪಾತ್ರ ಬಹುದೊಡ್ಡದಿದೆ ಎಂದರು.

    ಎಂ.ಬಿ. ಪಾಟೀಲರ ಸಾಧನೆಯ ಸ್ಮರಣೆ

    1984ರಲ್ಲಿ ಸ್ಥಳೀಯ ಆಸ್ಪತ್ರೆಯಾಗಿ ಕಾರ್ಯಾರಂಭ ಮಾಡಿದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಈಗ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯವಾಗಿ ಮೇಲ್ಜರ್ಜೆಗೇರಿದ್ದು, ಕುಲಾಧಿಪತಿ ಎಂ.ಬಿ. ಪಾಟೀಲ ಅವರ ಸಮರ್ಥ ನೇತೃತ್ತದಲ್ಲಿ 21ನೇ ಶತಮಾನಕ್ಕೆ ಅಗತ್ಯವಾಗಿರುವ ಸೇವೆಗಳನ್ನು ಒದಗಿಸುವ ಮೂಲಕ ದೇಶದ ಮುಂಚೂಣಿ ವೈದ್ಯಕ್ಷೀಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸೂಪರ್ ಸ್ಪೇಷಾಲಿಟಿ ಕೋರ್ಸ್‌ಗಳು, ನುರಿತ ವೈದ್ಯಕೀಯ ಶಿಕ್ಷಣ ತಜ್ಞರು, ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಗ್ರಾಮೀಣ ಭಾಗದ ಜನರಿಗೆ ಅಗತ್ಯವಾಗಿರುವ ವೈದ್ಯಕೀಯ ಸೌಲಭ್ಯಗಳು, 15 ಕ್ಕೂ ಹೆಚ್ಚು ಸೂಪರ್ ಸ್ಪೇಷಾಲಿಟಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಇಲ್ಲಿ ಈಗ ತೆರೆದ ಹೃದಯ ಶಸ್ತ್ರಚಿಕಿತ್ಸೆ ಪ್ರಾರಂಭ ಮಾಡಿರುವುದು ಸಂತಸದ ವಿಷಯವಾಗಿದೆ.

    ಅಷ್ಟೇ ಅಲ್ಲ, ನೀರಾವರಿ ಕ್ಷೇತ್ರಕ್ಕೆ ಎಂ.ಬಿ. ಪಾಟೀಲರು ನೀಡಿರುವ ಕೊಡುಗೆ, ಅರಣ್ಯೀಕರಣಕ್ಕೆ ಮಾಡುತ್ತಿರುವ ಕಾರ್ಯಗಳನ್ನು ಪರಿಗಣಿಸಿ ಜನತೆ ಆಧುನಿಕ ಭಗೀರಥ, ಕೋಟಿ ವೃಕ್ಷ ವೀರ ಎಂದು ಹೆಮ್ಮೆಯಿಂದ ಕರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದೆಲ್ಲದರ ಪರಿಣಾಮ ಬಿಎಲ್ಡಿಇ ವೈದ್ಯಕೀಯ ಕಾಲೇಜು ಎನ್‌ಐಆರ್‌ಎಫ್ ಪಟ್ಟಿಯಲ್ಲಿ ದೇಶದಲ್ಲಿಯೇ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದಿದೆ. ಈಗ ಗುಣಮಟ್ಟದ ವೈದ್ಯಕೀಯ ಸೇವೆಗಾಗಿ ಎನ್‌ಎಬಿಎಚ್ ಮಾನ್ಯತೆ ಸಿಕ್ಕಿರುವ ಉತ್ತರ ಕರ್ನಾಟಕದ ಏಕೈಕ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಓರ್ವ ವೈದ್ಯನಾಗಿರುವ ನನಗೂ ಹೆಮ್ಮೆಯ ವಿಷಯವಾಗಿದೆ. ಇದರ ಜೊತೆಗೆ ನ್ಯಾಕ್‌ನಿಂದ ‘ಎ’ ಗ್ರೇಡ್ ಲಭಿಸಿರುವುದು ಹಾಗೂ ದೇಶದ 150 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವುದು ಸಾಧನೆಗೆ ಗರಿ ಮೂಡಿಸಿದೆ ಎಂದು ಅವರು ಹೇಳಿದರು.

    ಕುಲಾಧಿಪತಿ ಎಂ.ಬಿ. ಪಾಟೀಲ, ಮಾಜಿ ಸಚಿವ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕುಲಪತಿ ಡಾ.ಆರ್.ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ರಜಿಸ್ಟ್ರಾರ ಪ್ರೊ.ಆರ್.ವಿ. ಕುಲಕರ್ಣಿ, ವಿದ್ಯಾಧಿಕಾರಿ ಡಾ.ಎಸ್.ವಿ. ಪಾಟೀಲ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್.ಎಸ್. ದೇವರಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts