More

    ನಮ್ಮ ಕಾಲ ಹೀಗಿತ್ತು | ನನ್ನ ಪ್ರೀತಿಯ ಆಸ್ಟಿನ್ ಕಾರ್‌ನಲ್ಲಿ ಪ್ರಚಾರ ಮಾಡಿದ್ದೆ; ಹಿರಿಯ ಬಿಜೆಪಿ ನಾಯಕನ ನೆನಪಿನ ಸುರುಳಿ!

    ಹಿಂದೆ ನಡೆಯುತ್ತಿದ್ದ ಚುನಾವಣಾ ಪ್ರಚಾರಕ್ಕೂ ಈಗ ನಡೆಯುತ್ತಿರುವ ಪ್ರಚಾರ ವೈಖರಿಗೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಇಲ್ಲಿ ವಿವರಿಸಿದ್ದಾರೆ.

    ‘‘ಅಂದಿನ ಧಾರವಾಡ ಮತಕ್ಷೇತ್ರವನ್ನು ನಾನು 3 ಬಾರಿ ಪ್ರತಿನಿಧಿಸಿದ್ದೇನೆ. ಈಗಿನ ಚುನಾವಣಾ ಭರಾಟೆಗೂ ನಮ್ಮ ಕಾಲದ ಚುನಾವಣೆ ವೈಖರಿಗೂ ಭಾರೀ ವ್ಯತ್ಯಾಸ. ನಾವು ಕ್ಷೇತ್ರದ ಒಂದೇ ಒಂದು ಓಣಿಯನ್ನೂ ಬಿಡದಂತೆ, ಪ್ರತಿ ಮನೆಗೂ ಕಾಲ್ನಡಿಗೆಯಲ್ಲೇ ಹೋಗಿ ಪ್ರಚಾರ ಮಾಡುತ್ತಿದ್ದೆವು. ಆಗಿನ ಕಾರ್ಯಕರ್ತರು ಮತ್ತು ಮತದಾರರು ಭಿನ್ನವಾಗಿದ್ದರು. 1980ರ ದಶಕದಲ್ಲಿ ರಾಜ್ಯದಲ್ಲಿ ಜನತಾ ಪಕ್ಷದ್ದೇ ಪಾರುಪತ್ಯ. 1983ರಲ್ಲಿ ಜನತಾ ಪಕ್ಷದಿಂದ ಮೊದಲ ಬಾರಿ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸಿದ್ದೆ. ಮತ ಎಣಿಕೆಯಲ್ಲಿ ನಡೆದ ಮೋಸದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇವಲ 132 ಮತಗಳಿಂದ ಸೋಲನುಭವಿಸಿದೆ. 1985ರಲ್ಲಿ ಜನತಾ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸಿದೆ. 15,949 ಮತ ಪಡೆದು, ಕಾಂಗ್ರೆಸ್‌ನ ಲೀಲಾವತಿ ಚರಂತಿಮಠ ವಿರುದ್ಧ 1287 ಮತಗಳ ಅಂತರದಲ್ಲಿ ಜಯ ಸಾಧಿಸಿದೆ. 1994ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಕಾಂಗ್ರೆಸ್‌ನ ಮಹಾದೇವ ಹೊರಟ್ಟಿ ವಿರುದ್ಧ ಗೆದ್ದೆ. 1999ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ 47,638 ಮತ ಪಡೆದು ಕಾಂಗ್ರೆಸ್‌ನ ಎಸ್.ಆರ್. ಮೋರೆ ವಿರುದ್ಧ 988 ಮತಗಳಿಂದ ಜಯ ಸಾಧಿಸಿದೆ.’’

    ‘‘1980ರ ದಶಕದಲ್ಲಿ ಜನತಾ ಪಕ್ಷದ ರೆಂಟೆ ಹೊತ್ತ ರೈತನ ಚಿಹ್ನೆ ಮನೆ ಮಾತಾಗಿತ್ತು. ನೇಗಿಲ ಮಾದರಿಯನ್ನು ಹೊತ್ತುಕೊಂಡೇ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದುಂಟು. ಬಿಜೆಪಿ ಸೇರಿದ ನಂತರ 1994 ಮತ್ತು 1999ರ ಚುನಾವಣೆಗಳಲ್ಲಿ ದೇಶದ ಘಟಾನುಘಟಿ ನಾಯಕರು ಪ್ರಚಾರ ಸಭೆಗಳಿಗೆ ಧಾರವಾಡಕ್ಕೆ ಆಗಮಿಸಿದ್ದರು. ಎ.ಬಿ. ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿ ಹಲವರು (ಪ್ರತ್ಯೇಕ ಸಭೆಗಳಿಗೆ) ಬಂದಿದ್ದರು. ಅವರ ಬಹಿರಂಗ ಸಮಾವೇಶಗಳು ಉತ್ತರ ಕರ್ನಾಟಕ ಭಾಗದ ಚುನಾವಣಾ ಲಿತಾಂಶದ ದಿಕ್ಸೂಚಿಯಾಗಿದ್ದು ಸ್ಮರಣೀಯ.
    ಈಗಿನ ಹಾಗೆ ಅಂದು ಬೈಕ್ ರ‌್ಯಾಲಿಗಳಿರಲಿಲ್ಲ. ನನ್ನ ಪ್ರೀತಿಯ ಆಸ್ಟಿನ್ ಕಾರ್‌ನಲ್ಲಿ ಪ್ರಚಾರ ಮಾಡಿದ್ದೂ ಉಂಟು. ಆ ಕಾರನ್ನು ಇಂದಿಗೂ ನಮ್ಮ ಕಾರ್ ಶೋರೂಂನಲ್ಲಿ ಸಂರಕ್ಷಿಸಿ ಇಟ್ಟಿದ್ದೇವೆ.’’
    (2023ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಬರಹ ಇದು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts