More

    ಬಿಜೆಪಿ ಅಚ್ಚರಿ ಆಯ್ಕೆ ಸಾಧ್ಯತೆ; ಹಳಬರಿಗೆ ಕೊಕ್, ಹೊಸ ನಾಯಕತ್ವ ನಿರೀಕ್ಷೆ

    ನವದೆಹಲಿ: ಬಿಜೆಪಿ ಗೆದ್ದಿರುವ ರಾಜಸ್ಥಾನ, ಛತ್ತೀಸ್​ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಅಚ್ಚರಿಯ ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶದ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಸಿಂಧಿಯಾ ಮತ್ತು ಛತ್ತೀಸ್​ಗಢ ಮಾಜಿ ಸಿಎಂ ರಮಣ್

    ಸಿಂಗ್​ಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ವರಿಷ್ಠರಿಗೆ ಸಮ್ಮತಿ ಇಲ್ಲ ಎಂದು ಮೂಲಗಳು ತಿಳಿಸಿವೆ. ಹೊಸ ನಾಯಕತ್ವ ಬೆಳೆಸಲು ಇದು ಸದವಕಾಶ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ವರಿಷ್ಠರ ವಲಯದಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ.

    ಮಧ್ಯಪ್ರದೇಶದಲ್ಲಿ ಕಳೆದ 20 ವರ್ಷಗಳಲ್ಲಿ 18 ವರ್ಷ ಶಿವರಾಜ್ ಸಿಂಗ್ ಸಿಎಂ ಸ್ಥಾನದಲ್ಲಿದ್ದಾರೆ. ರಾಜಸ್ಥಾನದಲ್ಲೂ ವಸುಂಧರಾ ರಾಜೆ ಸಿಂಧಿಯಾಗೆ ಹಲವು ಅವಕಾಶಗಳನ್ನು ನೀಡಲಾಗಿದ್ದು, ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಚರ್ಚೆಯಾಗಿದೆ. ಛತ್ತೀಸ್​ಗಢದಲ್ಲಿ ರಮಣ್ ಸಿಂಗ್ ಚುನಾವಣೆ ಗೆದ್ದಿದ್ದರೂ, ಅವರ ಬದಲಿಗೆ ಒಬಿಸಿ ಮುಖಂಡರತ್ತ ಗಮನಹರಿಸಲಾಗುತ್ತಿದೆ ಎಂದು ಹೇಳಲಾಗಿದೆ.

    ರೆಸಾರ್ಟ್​ಗೆ ತೆರಳಿದ ಶಾಸಕರು: ರಾಜಸ್ಥಾನ ಸಿಎಂ ಆಯ್ಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ವಸುಂಧರಾ ರಾಜೆ ಬಂದಿರುವ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿದ್ದು, ತಾವು ಸೊಸೆ ಭೇಟಿಗಾಗಿ ದಿಲ್ಲಿಗೆ ಬಂದಿರುವುದಾಗಿ ವಸುಂಧರಾ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ವಸುಂಧರಾ ಪುತ್ರ ದುಷ್ಯಂತ್ ಸಿಂಗ್, ಐವರು ಬಿಜೆಪಿ ಶಾಸಕರನ್ನು ಜೈಪುರ ಹೊರಭಾಗದಲ್ಲಿರುವ ರೆಸಾರ್ಟ್​ಗೆ ಕರೆದೊಯ್ದಿದ್ದಾರೆ ಎನ್ನುವುದು ಸಂಚಲನ ಸೃಷ್ಟಿಸಿತ್ತು. ಕಿಶನ್​ಗಂಜ್ ಕ್ಷೇತ್ರದ ಶಾಸಕ ಲಲಿತ್ ಮೀನಾ ರೆಸಾರ್ಟ್​ಗೆ ಹೋಗಿದ್ದಾರೆ ಎನ್ನುವುದು ಗೊತ್ತಾದ ಕೂಡಲೇ ಶಾಸಕರ ತಂದೆ ಹೇಮರಾಜ್ ಮೀನಾ ಬಿಜೆಪಿ ಕಚೇರಿಗೆ ಮಾಹಿತಿ ನೀಡಿದರು. ತಕ್ಷಣವೇ ಶಾಸಕರನ್ನು ರಾಜ್ಯ ಬಿಜೆಪಿ ಘಟಕಕ್ಕೆ ಕರೆಸಿಕೊಳ್ಳಲಾಯಿತು.

    Revanth reddy

    ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ: ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಪಕ್ಷದ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು. ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಹಾಗೂ ಇತರ ಹತ್ತು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

    ಗ್ಯಾರಂಟಿಗೆ ಸಹಿ: ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಚುನಾವಣೆಯಲ್ಲಿ ಘೊಷಿಸಲಾಗಿದ್ದ 6 ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಫೈಲ್​ಗೆ ಸಿಎಂ ರೇವಂತ್ ಸಹಿ ಹಾಕಿದ್ದು, ವಿಕಲಾಂಗ ಮಹಿಳೆಗೆ ಉದ್ಯೋಗ ಕೊಡಿಸಲು ಮುಂದಾಗಿದ್ದಾರೆ. ಮಹಾಲಕ್ಷ್ಮಿ, ರೈತು ಭರೋಸಾ, ಗೃಹ ಜ್ಯೋತಿ, ಇಂದಿರಮ್ಮ ಇಂದ್ಲು, ಯುಹ ವಿಕಾಸಮ್ ಚೆಯುತಾ ಎಂಬ 6 ಗ್ಯಾರಂಟಿಗಳನ್ನು ಘೊಷಿಸಲಾಗಿತ್ತು.

    ಸಿಎಂ ಅಧಿಕೃತ ನಿವಾಸ ಮತ್ತು ಕಚೇರಿ ಎಲ್ಲಾ ಸಂದರ್ಭದಲ್ಲೂ ಜನರಿಗೆ ಮುಕ್ತವಾಗಿರಲಿದೆ ಎಂದಿರುವ ರೇವಂತ್ ರೆಡ್ಡಿ, ಪ್ರಗತಿ ಭವನ ಎಂಬ ಹೆಸರಿನ ಸಿಎಂ ಕಚೇರಿಗೆ ಜ್ಯೋತಿರಾವ್ ಫುಲೆ ಪ್ರಜಾ ಭವನ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಡಿ. 8ರಂದು 10 ಗಂಟೆಗೆ ಪ್ರಜಾ ದರ್ಬಾರ್ ನಡೆಸಲಾಗುವುದು ಎಂದೂ ಅವರು ಘೊಷಿಸಿದ್ದಾರೆ.

    ಆಕ್ಷೇಪವಿದ್ದರೂ ಆಯ್ಕೆಯಾದ ಟೈಗರ್: ಬೆಂಬಲಿಗರ ಮಧ್ಯೆ ಟೈಗರ್ ಎಂದೇ ಖ್ಯಾತಿಯಾಗಿರುವ ರೇವಂತ್ ರೆಡ್ಡಿ, ನಿರ್ಗಮಿತ ಬಿಆರ್​ಎಸ್ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟ ನಡೆಸುವ ಮೂಲಕ ಪಕ್ಷವನ್ನು ಚುನಾವಣೆ ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರನ್ನು ಸಿಎಂ ಮಾಡುವ ಬಗ್ಗೆ ಆಕಾಂಕ್ಷಿಗಳಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಮಲ್ಲುಭಟ್ಟಿ ವಿಕ್ರಮಾರ್ಕ ಆಕ್ಷೇಪ ತೆಗೆದರೂ ದಿಲ್ಲಿ ನಾಯಕರು ರೇವಂತ್ ರೆಡ್ಡಿ ಪರ ನಿಂತು ಅವರಿಗೆ ಪೂರ್ಣ ಸಹಕಾರ ನೀಡುವಂತೆ ಉಳಿದ ನಾಯಕರಿಗೆ ಸಲಹೆ ನೀಡಿದ್ದಾರೆ.

    ಸಿಎಂ ಘೋಷಣೆ ಏಕೆ ವಿಳಂಬ?: ಚುನಾವಣಾ ಫಲಿತಾಂಶ ಡಿ.3 ರಂದು ಪ್ರಕಟವಾಗಿದೆ. ತೆಲಂಗಾಣ ಮುಖ್ಯಮಂತ್ರಿ ನೇಮಕದಲ್ಲಿ ವಿಳಂಬ ಎಂದು 24 ಗಂಟೆಯೊಳಗೆ ಎಲ್ಲೆಡೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಲಾಯಿತು. ನಮ್ಮ ಮುಖ್ಯಮಂತ್ರಿಯನ್ನು ಒಂದು ದಿನ ಮೊದಲೇ ಘೋಷಣೆ ಮಾಡಲಾಗಿದ್ದು, ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಮೂರು ದಿನ ಕಳೆದರೂ ಛತ್ತೀಸ್​ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಮುಖ್ಯಮಂತ್ರಿಗಳನ್ನು ಘೊಷಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಈ ವಿಚಾರವನ್ನು ಅಷ್ಟೇ ತುರ್ತು ಮತ್ತು ಪ್ರಾಮುಖ್ಯತೆಯೊಂದಿಗೆ ಏಕೆ ಪ್ರಸ್ತಾಪಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts