More

    ಯುವ ರಾಜಕಾರಣದಲ್ಲಿ ಕನ್ನಡಿಗರ ಖದರ್! ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದವರದ್ದೇ ಮೇಲುಗೈ

    | ರಾಘವ ಶರ್ಮ ನಿಡ್ಲೆ, ನವದೆಹಲಿ
    ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯರನ್ನು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಿದ ಬೆನ್ನಲೇ ಪಕ್ಷದ ಯುವ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ಉಂಟಾಗಿದೆ. ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಯುವ ಕಾರ್ಯಕರ್ತರನ್ನು ಕಟ್ಟಿಕೊಂಡು ಟಿಎಂಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಸೂರ್ಯ, ಬಂಗಾಳ ರಾಜಕಾರಣದಲ್ಲೂ ಬಿರುಗಾಳಿ ಎಬ್ಬಿಸಿ ಬಂದಿದ್ದಾರೆ. ಮತ್ತೊಂದೆಡೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಕೇಂದ್ರದ ನೀತಿಗಳ ವಿರುದ್ಧ ಸತತ ಹೋರಾಟಗಳನ್ನು ನಡೆಸಿದ್ದಾರೆ.

    ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ರಾಷ್ಟ್ರೀಯ ಯುವ ವೇದಿಕೆಗೆ ಕನ್ನಡಿಗರ ಸಾರಥ್ಯ ಸಿಕ್ಕಿರುವುದು ರಾಜ್ಯದ ಮಟ್ಟಿಗೆ ಮಹತ್ವದ ಬೆಳವಣಿಗೆ. ಹಾಗೆ ನೋಡಿದರೆ, ಎರಡೂ ಪಕ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಯುವ ಕಾರ್ಯಕರ್ತರನ್ನು ಮುನ್ನಡೆಸುವ ಅವಕಾಶ ಕನ್ನಡಿಗರಿಗೆ ದೊರಕಿರುವುದು ಇದೇ ಮೊದಲು.

    ಒಂದು ವರ್ಷದ ಹಿಂದೆ ರಾಜ್ಯದ ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್‌ರನ್ನು ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅಂದಿನಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಹೋರಾಟ ತೀವ್ರಗೊಳಿಸಿರುವ ಶ್ರೀನಿವಾಸ್, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ, ಉತ್ತರ ಭಾರತದ ಶಕ್ತಿ ರಾಜಕಾರಣದ ಮುಂದೆ ದಕ್ಷಿಣ ಭಾರತೀಯರು ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುವುದು ಸುಲಭದ ಮಾತಲ್ಲ. ಕಾಂಗ್ರೆಸ್ ಮಟ್ಟಿಗೆ ಶ್ರೀನಿವಾಸ್ ಸಬಲರಾಗುತ್ತಿದ್ದರೆ, ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಕೂಡ ಭರವಸೆ ಮೂಡಿಸಿದ್ದಾರೆ.

    ಹಿಂದೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತೇಜಸ್ವಿ ಸೂರ್ಯ, 2018ರ ವಿಧಾನಸಭೆ ಚುನಾವಣೆ ವೇಳೆ ಮಾಹಿತಿ ತಂತ್ರಜ್ಞಾನ ಮತ್ತು ಸೋಷಿಯಲ್ ಮೀಡಿಯಾ ವಿಭಾಗದ ಉಸ್ತುವಾರಿ ಹೊತ್ತಿದ್ದರು ಮತ್ತು 2019ರ ಲೋಕಸಭೆ ಚುನಾವಣೆ ವೇಳೆ ಪಕ್ಷದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸದಸ್ಯರಾಗಿದ್ದರು. ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಸಿಕ್ಕಿತ್ತು.

    ಯುವ ರಾಜಕಾರಣದಲ್ಲಿ ಕನ್ನಡಿಗರ ಖದರ್! ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದವರದ್ದೇ ಮೇಲುಗೈಪರಿಶ್ರಮಕ್ಕೆ ಬೆಲೆ: ಕರೊನಾ ಲಾಕ್‌ಡೌನ್‌ನಿಂದಾಗಿ ಬೀದಿಗೆ ಬಂದಿದ್ದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಯುವ ಕಾಂಗ್ರೆಸ್‌ನಿಂದ 2 ಹೊತ್ತು ಊಟದ ವ್ಯವಸ್ಥೆ ಮಾಡಿದ್ದ ಶ್ರೀನಿವಾಸ್, ಸಾವಿರಾರು ಮಂದಿಯನ್ನು ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಬಗ್ಗೆ ವಿದೇಶಿ ಮಾಧ್ಯಮಗಳೂ ಅವರನ್ನು ಸಂದರ್ಶಿಸಿ ವರದಿ ಮಾಡಿವೆ. ‘ಈಗಲೂ ಸಾವಿರಾರು ಯುವಕರು ಫೋನ್ ಮಾಡಿ, ಎಲ್ಲಾದರೂ ಕೆಲಸ ಕೊಡಿಸಿ ಎನ್ನುವಾಗ ಬೇಸರವಾಗುತ್ತದೆ. ನಮ್ಮ ಕೈಲಾದಷ್ಟು ನೆರವು ಮಾಡುತ್ತಿದ್ದೇವೆ’ ಎನ್ನುತ್ತಾರೆ ಶ್ರೀನಿವಾಸ್. ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ, ಜಿಲ್ಲಾ ಪದಾಧಿಕಾರಿ, ರಾಜ್ಯ ಪದಾಧಿಕಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸ್, 2017ರಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದರು. 2019ರಲ್ಲಿ ಅಧ್ಯಕ್ಷ ಪಟ್ಟ ಒಲಿಯಿತು.

    ಲಾಕ್‌ಡೌನ್ ವೇಳೆ ಯುವ ಕಾಂಗ್ರೆಸ್ ಸಕ್ರಿಯವಾಗಿದ್ದಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್ ಬೀದಿಗಿಳಿದು ಕೆಲಸ ಮಾಡಲಿಲ್ಲ ಎಂಬ ಅಪಸ್ವರಗಳೆದ್ದಿದ್ದವು. ಇದು ಕೂಡ ತೇಜಸ್ವಿ ಆಯ್ಕೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಸೂರ್ಯರ ಮುಂದೆ ಪ್ರಬಲ ಸವಾಲಿದೆ.

    ಸಂಸತ್‌ನಲ್ಲಿ ತೇಜಸ್ಸು: ತೇಜಸ್ವಿ ಸೂರ್ಯಗೆ ಸಣ್ಣ ವಯಸ್ಸಲ್ಲೇ ಲೋಕಸಭೆ ಟಿಕೆಟ್ ಸಿಕ್ಕರೂ, ಸಂಸದರಾಗಿ ಕ್ಷೇತ್ರ ಹಾಗೂ ರಾಷ್ಟ್ರಕ್ಕೆ ಸಂಬಂಧಿಸಿದ ಹಲವು ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ಈಗಾಗಲೇ ಅನೇಕ ಜ್ವಲಂತ ವಿಷಯಗಳನ್ನು ಪ್ರಸ್ತಾಪಿಸಿ ಪಕ್ಷ-ವಿಪಕ್ಷಗಳ ಮುಖಂಡರ ಗಮನ ಸೆಳೆದಿದ್ದಾರೆ.
    ಬಿ.ವಿ. ಶ್ರೀನಿವಾಸ್-ಸೂರ್ಯ ನಡುವೆ 10 ವರ್ಷಗಳ ಅಂತರವಿದೆ. ಹಲವು ರಾಜ್ಯಗಳಲ್ಲಿ ಬಿಜೆಪಿಯ ಪ್ರಬಲ ರಾಜಕೀಯ ಎದುರಾಳಿ ಕಾಂಗ್ರೆಸ್ ಪಕ್ಷವೇ ಆಗಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಇವರಿಬ್ಬರ ‘ಪೊಲಿಟಿಕಲ್ ಫೈಟ್’ ವ್ಯಾಪಕ ಕುತೂಹಲ ಕೆರಳಿಸಿದೆ.

    ತೇಜಸ್ವಿ ಸೂರ್ಯ ಶಕ್ತಿ ಮತ್ತು ಸವಾಲು

    • ಸಂಸತ್ತಿನಲ್ಲೂ ಗಮನ ಸೆಳೆಯುತ್ತಿರುವ ಯುವ ನಾಯಕ
    • ಹೈಕಮಾಂಡ್, ಸಂಘ ಪರಿವಾರದ ಪೂರ್ಣ ಬೆಂಬಲ
    • ಹಿಂದುತ್ವದ ಪ್ರಬಲ ಪ್ರತಿಪಾದಕ. ಹಿಂದು ಮತಗಳ ಕ್ರೋಢೀಕರಣಕ್ಕೆ ಅನುಕೂಲ
    • ಇಂಗ್ಲಿಷ್ ಮೇಲೆ ಹಿಡಿತ, ಹಿಂದಿಯಲ್ಲೂ ಮಾತನಾಡಬಲ್ಲರು. ರಾಷ್ಟ್ರ ರಾಜಕಾರಣಕ್ಕೆ ಇದು ಮುಖ್ಯ
    • ಉತ್ತಮ ಭಾಷಣಕಾರ, ವಿಷಯ ವಿಶ್ಲೇಷಣೆಯಲ್ಲಿ ನೈಪುಣ್ಯ
    • ಯುವಕರನ್ನು ಸೆಳೆಯುವ ಚರೀಷ್ಮಾ, ವರ್ಚಸ್ಸಿದೆ
    • ಜನಸಂಪರ್ಕ, ಗ್ರೌಂಡ್‌ನಲ್ಲಿ ಕಾರ್ಯಕರ್ತರ ವಿಶ್ವಾಸ ಗಳಿಸುವ ಸವಾಲಿದೆ
    • ಬೇರು ಮಟ್ಟದಿಂದ ಬೆಳೆದು ಬಂದ ರಾಜ್ಯದ ಹಿರಿಯ ನಾಯಕ, ಕಾರ್ಯಕರ್ತರೊಂದಿಗೆ ಸಂಪರ್ಕ, ಒಡನಾಟ ಹೆಚ್ಚಿಸಿಕೊಳ್ಳಬೇಕಿದೆ
    • ಟ್ವಿಟ್ಟರ್, ಫೇಸ್‌ಬುಕ್, ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯ ಯುವ ರಾಜಕಾರಣದಲ್ಲಿ ಕನ್ನಡಿಗರ ಖದರ್! ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದವರದ್ದೇ ಮೇಲುಗೈ
      ಬೇರೆ ಪಕ್ಷಗಳಲ್ಲಿ ವಂಶವಾಹಿ ಹಿನ್ನೆಲೆಯ ನಾಯಕರಿಗಷ್ಟೇ ಆದ್ಯತೆ ಸಿಗುತ್ತದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ, ಯುವಕನಿಗೂ ಬಿಜೆಪಿಯಲ್ಲಿ ಮಾನ್ಯತೆ ಸಿಗುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷತೆ. ಮೋದಿಯವರು ಪ್ರಧಾನಿಯಾದ ಬಳಿಕ ವಿಪಕ್ಷಗಳ ಮುಖಂಡರು, ಕಾರ್ಯಕರ್ತರು ನಿರುದ್ಯೋಗಿಗಳಾಗಿದ್ದಾರೆ. ಯಾವುದೇ ಉದ್ಯೋಗ ಮಾಡದವರಿಗೆ ನಿರುದ್ಯೋಗದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪಕ್ಷದ ಯುವ ಕಾರ್ಯಕರ್ತರೊಂದಿಗೆ ಸೇರಿ, ಸರ್ವವ್ಯಾಪಿ-ಸರ್ವಸ್ಪರ್ಶಿಯಾಗಿ ಬೆಳೆಯಬೇಕು ಎಂಬ ಪಕ್ಷದ ಘೋಷಣೆಗೆ ತಕ್ಕಂತೆಯೇ ಕೆಲಸ ಮಾಡುತ್ತೇನೆ.

      |ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

    ಬಿ.ವಿ. ಶ್ರೀನಿವಾಸ್ ಶಕ್ತಿ ಮತ್ತು ಸವಾಲು

    •  ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪೂರ್ಣ ಬೆಂಬಲ, ಸಹಕಾರ
    • ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೃಪಾಶೀರ್ವಾದವೂ ಬೆನ್ನಿಗಿದೆ
    • ಹೋರಾಟದ ರಾಜಕಾರಣದಿಂದಲೇ ಪಕ್ಷದ ಯುವಕರ ಮಧ್ಯೆ ಗುರುತಿಸಿಕೊಂಡಿದ್ದಾರೆ
    • 9 ವರ್ಷಗಳ ಸತತ ಪರಿಶ್ರಮದಿಂದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ
    • 2008ರಲ್ಲಿ ರಾಜ್ಯ ಬಿಜೆಪಿ ಸರ್ಕಾರವೇ ಕ್ರೆಡಾ ಮತ್ತು ಸಾಮಾಜಿಕ ಸೇವೆಗೆ ‘ರಾಜ್ಯ ಯುವ ಪ್ರಶಸ್ತಿ’ ನೀಡಿ ಗೌರವಿಸಿತ್ತು
    • ಉತ್ತರ ಭಾರತದಲ್ಲಿ ಯುವ ಕಾಂಗ್ರೆಸ್ ಪಡೆಯ ಬೆಂಬಲ ಗಳಿಸುವಲ್ಲಿ ಸಫಲ
    • ದೇಶದ ಎಲ್ಲಾ ರಾಜ್ಯಗಳ ಪ್ರವಾಸ ಮಾಡಿರುವ ಅನುಭವ
    • ಕೇಂದ್ರದ ವಿರುದ್ಧ ಹತ್ತಾರು ಪ್ರತಿಭಟನೆ, ಧರಣಿ ನಡೆಸಿದ್ದಾರೆ. ಪರಿಣಾಮ ನೂರಾರು ಕೇಸ್‌ಗಳೂ ದಾಖಲಾಗಿವೆ
    • ಕರೊನಾ ಲಾಕ್‌ಡೌನ್ ವೇಳೆ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಊಟ, ವಾಸ್ತವ್ಯಕ್ಕೆ ವ್ಯವಸ್ಥೆ ಒದಗಿಸಿ ನೆರವಾಗಿದ್ದಾರೆ
    • ಬಿಹಾರ ಸೇರಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಲೆ ಕುಗ್ಗಿದೆ. ಇದನ್ನು ಮೇಲೆತ್ತುವ ಸವಾಲುಯುವ ರಾಜಕಾರಣದಲ್ಲಿ ಕನ್ನಡಿಗರ ಖದರ್! ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದವರದ್ದೇ ಮೇಲುಗೈ
      ನನಗೆ ಯಾರೂ ಗಾಡ್‌ಫಾದರ್‌ಗಳಿಲ್ಲ. ವರ್ಷಗಳ ಕಾಲದ ಪರಿಶ್ರಮಕ್ಕೆ ಮನ್ನಣೆ ಸಿಕ್ಕಿದೆ. ಕೇಂದ್ರ ಸರ್ಕಾರ ದೇಶದ ಯುವಕರಿಗೆ ಅನ್ಯಾಯ ಎಸಗಿದೆ, ಕೃಷಿಕರನ್ನು ಹಾಳು ಬಾವಿಗೆ ತಳ್ಳುತ್ತಿದೆ. ಪ್ರಧಾನಿ ಮೋದಿ ಜನ್ಮದಿನವನ್ನು ನಿರುದ್ಯೋಗಿಗಳ ದಿನ ಎಂದು ಆಚರಿಸಿದ್ದು ನಾವೇ. ವಿಪಕ್ಷಗಳಿಗೆ ನಿರುದ್ಯೋಗ ಕಾಡುತ್ತಿಲ್ಲ. ಕಳೆದ 6 ವರ್ಷಗಳಿಂದ ಸತ್ಯ, ವಾಸ್ತವಗಳನ್ನು ಮರೆಮಾಚಿ ಜನರನ್ನು ಭ್ರಮೆಯಲ್ಲಿ ತೇಲಿಸಲಾಗುತ್ತಿದೆ. ತಾಳ್ಮೆಗೆ ಮಿತಿ ಇದೆ. ಇನ್ನು ದೇಶದ ಯುವಕರು, ಕೃಷಿಕರು ಸುಮ್ಮನಿರುವುದಿಲ್ಲ.

      |ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ

    ಶಾಲೆ ಆರಂಭಿಸುವ ವಿಷಯದಲ್ಲಿ ಸಿದ್ದು-ಎಚ್‌ಡಿಕೆ ಮಾತಿಗೆ ದನಿಗೂಡಿಸಿದ ಶೋಭಾ

    VIDEO| ಸಮಾಧಿಯೊಳಗೆ ಕೂತು ಗೋಳಾಡಿದ ರೈತ! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts