More

    ಧರ್ಮ ಉಳಿಸಲು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ದೇಶದ ಸಂಸ್ಕೃತಿ, ಧರ್ಮ ಉಳಿಸಲು ಬಿಜೆಪಿಯನ್ನು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಬಗ್ಗೆ ಸಂಕಲ್ಪ ಮಾಡಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ಮೈಲಾರೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಶಿವಮೊಗ್ಗ ನಗರ ಸಮಿತಿಯ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ ಆಗಬೇಕಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಮೂಲಕ ರಾಷ್ಟ್ರದ್ರೋಹಿಗಳಿಗೆ ಎಚ್ಚರಿಕೆ ಕೊಡಬೇಕಿದೆ. ಧರ್ಮ ಮತ್ತು ದೇಶವನ್ನು ಉಳಿಸಲು ಶಿವಮೊಗ್ಗದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಲು ನಿಶ್ಚಯ ಮಾಡಬೇಕಿದೆ ಎಂದರು.
    ರಸ್ತೆ, ಚರಂಡಿಗಾಗಿ ನಮ್ಮ ಹೋರಾಟವಲ್ಲ. ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದಾರೋ ಅಲ್ಲೆಲ್ಲ ಮರಳಿ ದೇವಸ್ಥಾನಗಳನ್ನು ನಿರ್ಮಾಣ ಮಾಡಬೇಕಿದೆ. ಅಯೋಧ್ಯೆಯಲ್ಲಿ ಆ ಕೆಲಸ ಆಗಿದ್ದು ಮುಂದಿನ ಸರದಿ ಕಾಶಿಯಲ್ಲಿ ಆಗಬೇಕಿದೆ ಎಂದು ಹೇಳಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರಂಟಿ ಆಗಿದ್ದು ಈ ಬಾರಿ 400ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ. ಅದರ ಜತೆಗೆ ಮತ್ತೊಮ್ಮೆ ಶಿವಮೊಗ್ಗ ಕ್ಷೇತ್ರದಿಂದ ಹೆಚ್ಚಿನ ಅಂತರದಿಂದ ಗೆಲ್ಲಬೇಕಿದೆ. ಆ ಮೂಲಕ ಮೋದಿಯ ಕೈ ಬಲಪಡಿಸಬೇಕಿದೆ ಎಂದು ಮನವಿ ಮಾಡಿದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮೂರು ವರ್ಷಕ್ಕೊಮ್ಮೆ ಪದಾಧಿಕಾರಿಗಳ ಬದಲಾವಣೆ ಆಗುತ್ತಿದೆ. ಈ ರೀತಿಯ ಹಬ್ಬದ ವಾತಾವರಣ ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷದಲ್ಲೂ ಸಾಧ್ಯವಿಲ್ಲ. ಶೌಚಗೃಹದಿಂದ ವಿಮಾನ ನಿಲ್ದಾಣದವರೆಗೆ ಮೇರು ಅಭಿವೃದ್ಧಿ ಕಂಡ ಜಿಲ್ಲೆ ಶಿವಮೊಗ್ಗ ಆಗಿದೆ. ಮುಂಬರುವುದು ಕೇವಲ ಮೋದಿ ಅಥವಾ ರಾಘಣ್ಣನ ಚುನಾವಣೆ ಅಲ್ಲ, ದೇಶದ ಚುನಾವಣೆ. ದೇಶದ ಅಳಿವು ಉಳುವಿನ ಚುನಾವಣೆ ಆಗಿದೆ. ಹಾಗಾಗಿ ಕಾರ್ಯಕರ್ತರು ಹೆಚ್ಚು ಸಕ್ರಿಯಗೊಳ್ಳಬೇಕಿದೆ ಎಂದರು.
    ನಗರ ಮಾಜಿ ಅಧ್ಯಕ್ಷ ಎನ್.ಕೆ.ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಎಂಎಲ್ಸಿ ಆರ್.ಕೆ.ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ, ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎಸ್.ಜ್ಞಾನೇಶ್ವರ್, ಸೂಡಾ ಮಾಜಿ ಅಧ್ಯಕ್ಷ ಎನ್.ಜಿ.ನಾಗರಾಜ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಡಾ. ಧನಂಜಯ ಸರ್ಜಿ, ಎಸ್.ಎಸ್.ಜ್ಯೋತಿಪ್ರಕಾಶ್, ಸಿ.ಎಚ್.ಮಾಲತೇಶ್, ಶಿವರಾಜ್, ಸುರೇಖಾ ಮುರುಳೀಧರ್, ಈ.ವಿಶ್ವಾಸ್, ಭಾಗ್ಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts