More

    ಜನರಿಂದಲೇ ಕಾಂಗ್ರೆಸ್ ವಿಸರ್ಜನೆ: ಕೆ.ಎಸ್.ಈಶ್ವರಪ್ಪ ಲೇವಡಿ

    ಶಿವಮೊಗ್ಗ: ಸ್ವಾತಂತ್ರೃದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂಬುದು ಮಹಾತ್ಮಾ ಗಾಂಧೀಜಿ ಅವರ ಅಭಿಲಾಷೆಯಾಗಿತ್ತು. ಆದರೆ ಜನರೇ ಕಾಂಗ್ರೆಸ್ ವಿಸರ್ಜನೆಗೆ ಮುಂದಾಗಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
    ಮುಂದಿನ ತಿಂಗಳು ನಡೆಯಲಿರುವ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಬಲಿಧಾನ ಮಾಡಿದ ನಾಯಕರ ಕಾಂಗ್ರೆಸ್ ಈಗಿಲ್ಲ. ಜೈಲಿಗೆ ಹೋಗಿ ಬಂದಿರುವ ಡಿ.ಕೆ.ಶಿವಕುಮಾರ್, ನಲಪಾಡ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸಿಲುಕಿದೆ ಎಂದು ಹೇಳಿದರು.
    ಗಾಂಧಿ ಮನೆತನದ ನೇತೃತ್ವದಲ್ಲಿ ಕಾಂಗ್ರೆಸ್ ಕುಸಿದಿದೆ. ಪಿಎಫ್‌ಐ ಮುಂತಾದ ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಬೆಂಬಲ ನೀಡುವ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬಾರದಂತೆ ತಡೆಯಬೇಕಿದೆ. ರಾಷ್ಟ್ರ ವಿರೋಧಿಗಳ ಬಗ್ಗೆ ಮಾತನಾಡಿದರೆ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್‌ಗೆ. ಎಂದಿಗೂ ಚುನಾವಣೆ, ಮತಕ್ಕೋಸ್ಕರ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
    ಜಾತಿ ಹೋರಾಟ ಬೇಡ
    ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಹಿಂದುಳಿದ ಮೋರ್ಚಾ ಉತ್ತಮ ವೇದಿಕೆಯಾಗಿದೆ. ಇದರ ಹೆಸರಿನಲ್ಲಿ ಜಾತಿ ಹೋರಾಟ ಮಾಡಬಾರದು. ಜಾತಿ ಹೋರಾಟದಿಂದ ಹಿಂದುಳಿದ ವರ್ಗಗಳಲ್ಲಿ ಬಿರುಕು ಮೂಡುವ ಅಪಾಯವಿದೆ. ಅಹಿಂದ ರಾಜಕಾರಣವೂ ನಮಗೆ ಸವಾಲಿನದ್ದಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಎಚ್ಚರಿಸಿದರು.
    ಮಾಜಿ ಸಿಎಂ ಎಸ್.ಬಂಗಾರಪ್ಪ ಅತ್ಯುತ್ತಮ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳದೇ ಉತ್ತಮ ಕೆಲಸ ಮಾಡಬೇಕು. ಪಕ್ಷದ ಕಾರ್ಯಕ್ರಮಗಳ ಬಗ್ಗೆ, ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
    ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಸಿ.ಎಚ್.ಮಾಲತೇಶ್, ರಾಜ್ಯ ಉಪಾಧ್ಯಕ್ಷ ಅಶೋಕಮೂರ್ತಿ, ಪ್ರಮುಖರಾದ ಶಿವರಾಜ್, ಧರ್ಮಪ್ರಸಾದ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts