More

    ಮೂಡುಬಿದಿರೆ ಪುರಸಭೆ ಬಿಜೆಪಿ ತೆಕ್ಕೆಗೆ

    ಮೂಡುಬಿದಿರೆ: ಮೂಡುಬಿದಿರೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
    ಪುರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿ ಪ್ರಸಾದ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಸುಜಾತಾ ಶಶಿಧರ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಒಟ್ಟು 23 ಸದಸ್ಯ ಬಲವಿರುವ ಮೂಡುಬಿದಿರೆ ಪುರಸಭೆಗೆ ಕಳೆದ 18 ತಿಂಗಳ ಹಿಂದೆ ಚುನಾವಣೆ ನಡೆದಿದ್ದು, ಬಿಜೆಪಿ 12 ಮತ್ತು ಕಾಂಗ್ರೆಸ್ 11 ಸದಸ್ಯ ಬಲಹೊಂದಿದೆ. ಶನಿವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಪ್ರಸಾದ್ ಕುಮಾರ್ ಅವರು ಕಾಂಗ್ರೆಸ್‌ನ ಪಿ.ಕೆ ಥೋಮಸ್ ವಿರುದ್ಧ 12-11 ಮತಗಳ ಅಂತರದಲ್ಲಿ ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿಜೆಪಿಯ ಸುಜಾತಾ ಶಶಿಧರ್ ಕಾಂಗ್ರೆಸ್‌ನ ಮಮತಾ ಆನಂದ್ ಅವರನ್ನು 12-11 ಮತಗಳ ಅಂತರದಲ್ಲಿ ಸೋಲಿಸಿದರು.

    ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಬಿಜೆಪಿ ಹಿರಿಯ ಮುಖಂಡರಾದ ಕೆ.ಆರ್ ಪಂಡಿತ್, ದಯಾನಂದ ಪೈ, ಕಾಂಗ್ರೆಸ್ ಬೆಂಬಲಿತ ಸದಸ್ಯರು, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು. ತಹಸೀಲ್ದಾರ್ ಗುರುಪ್ರಸಾದ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಾಧಿಕಾರಿ ಇಂದು ಉಪಸ್ಥಿತರಿದ್ದರು.

    ನೀರಿನ ಸಮಸ್ಯೆ ನೀಗಿಸಲು ಕ್ರಮ: ಪುರಸಭೆಯ ನೀರಿನ ಸಮಸ್ಯೆ ನೀಗಿಸಲು ಕೊಳವೆ ಬಾವಿ ಬದಲು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಪುಚ್ಚೆಮೊಗರು ನದಿಯಿಂದ ಇಲ್ಲಿಗೆ ನೀರು ಸರಬರಾಜು ಮಾಡಿ ಜನತೆಗೆ ಪೂರೈಕೆ ಮಾಡುವ ಚಿಂತನೆ ಇದೆ. ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಪುರಸಭೆ ನೂತನ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಮಾರ್ಕೆಟ್ ಬಗ್ಗೆ ಮುಖ್ಯಾಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು. ಒಳ ಚರಂಡಿ ಯೋಜನೆ ಬಗ್ಗೆ ಹೆಚ್ಚಿನ ಗಮನ ನೀಡಿ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಮೂಡುಬಿದಿರೆ ಪುರಸಭೆಯಲ್ಲಿ ಬಿಜೆಪಿ ಶಕೆ ಆರಂಭಗೊಂಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿದ್ದು ಸುವರ್ಣ ಕಾಲದಲ್ಲಿದ್ದೇವೆ. ಪುರಸಭೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳಿಗೆ ಅಡಿಪಾಯ ಹಾಕುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕಿದೆ. ಭ್ರಷ್ಟಾಚಾರ ರಹಿತ ಆಡಳಿತ ಬಿಜೆಪಿ ಆದ್ಯತೆ.
    ಸುದರ್ಶನ್ ಎಂ. ಬಿಜೆಪಿ ಜಿಲ್ಲಾಧ್ಯಕ್ಷ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts