More

    ಕಾಂಗ್ರೆಸ್​ ಸರ್ಕಾರದಲ್ಲಿ ಹೆಣ್ಣು ಮಕ್ಕಳ ಮಾನ, ಪ್ರಾಣಕ್ಕೆ ಬೆಲೆ ಇಲ್ಲ: ಬಸವರಾಜ ಬೊಮ್ಮಾಯಿ

    ವಿಜಯವಾಣಿ ಸುದ್ದಿಜಾಲ ಗದಗ
    ರಾಹುಲ್​ ಗಾಂಧಿ ಅತ್ಯಂತ ಅಸಮರ್ಥ ನಾಯಕ. ದೇಶದ ಬಗ್ಗೆ ವಿದೇಶದಲ್ಲಿ ಅವಮಾನಕರವಾಗಿ ಮಾತನಾಡುವ ನಾಯಕ, ಹೀಗಾಗಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿಲ್ಲ ಎಂದು ಮಾಜಿ ಸಿಎಂ, ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
    ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ನರೇಗಲ್​, ಡಂಬಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಹುಲ್​ ಗಾಂಧಿ ಒಬ್ಬ ಅಸಮರ್ಥ ನಾಯಕರಾಗಿದ್ದು, ಅದೇ ಕಾರಣಕ್ಕೆ ಕಾಂಗ್ರೆಸ್​ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿಲ್ಲ. ನಾವು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇವೆ. ಜನರು ಮೋದಿಯವರನ್ನು ಆಯ್ಕೆ ಮಾಡುತ್ತಾರೆ ಎಂದರು.
    ಇಡೀ ದೇಶದಲ್ಲಿ ಮೋದಿ ಸುನಾಮಿ ಇದೆ. ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲೂ ಮೋದಿಯವರ ಸುನಾಮಿ ಇದೆ. ದೇಶದ ಅತ್ಯಂತ ದಿಟ್ಟ ನಾಯಕ ನರೇಂದ್ರ ಮೋದಿ ಆಗಿದ್ದಾರೆ ಎಂದು ಹೇಳಿದ ಬೊಮ್ಮಾಯಿ ಇನ್ನೊಂದು ಕಡೆ ರಾಹುಲ್​ ಗಾಂಧಿ ಪ್ರಧಾನಿ ಅಭ್ಯರ್ಥಿ ಅಂತ ಯಾಕೆ ಇಂಡಿಯಾ ಒಕ್ಕೂಟ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
    ಕಾಂಗ್ರೆಸ್​ ಪಕ್ಷ ದೀನ ದಲಿತರಿಗೆ ನಿರಂತರ ಅನ್ಯಾಯ ಮಾಡುತ್ತ ಬಂದಿದೆ. ತಮ್ಮ 50 ವರ್ಷದ ಆಳ್ವಿಕೆಯಲ್ಲಿ ದಲಿತರಿಗೆ ಏನು ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.
    ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಕಾನೂನಿನ ಭಯ ಇಲ್ಲ. ಆುಂತಕರಿಗೆ ಪೊಲೀಸ್​ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ನಗ್ನ ಮಾಡಿದರು. ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಆರು ಜನರು ಅತ್ಯಾಚಾರ ಮಾಡುತ್ತಾರೆ. ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಾಡು ಹಗಲೇ ಕಾಲೇಜು ವಿದ್ಯಾಥಿರ್ನಿಯನ್ನು ಕೊಲೆ ಮಾಡಿದ್ದರೆ, ಅದೊಂದು ಸಾಮಾನ್ಯ ಸಂಗತಿ ಅಂತ ಹೇಳುತ್ತಾರೆ?. ಈ ಸರ್ಕಾರದಲ್ಲಿ ಹೆಣ್ಣು ಮಕ್ಕಳ ಮಾನ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಕೊಲೆ ಮಾಡಿದ ಆರೋಪಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಆಗಿರುವುದರಿಂದ ಮತಬ್ಯಾಂಕ್​ ರಾಜಕಾರಣಕ್ಕಾಗಿ ಕಾಂಗ್ರೆಸ್​ ಮುಖಂಡರು ಉಡಾೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ನಿಡುವ ಬದಲು ನ್ಯಾಯಾಂಗ ಬಂಧನದಕ್ಕೆ ಕೊಟ್ಟ ಉದ್ದೇಶವಾದರೂ ಏನು? ಎಂದು ಬೊಮ್ಮಾಯಿ ಪ್ರಶ್ನಿಸಿದರು.
    ಕಳಕಪ್ಪ ನಮ್ಮ ಅಭ್ಯರ್ಥಿ?
    ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಆಗ ಕಳಕಪ್ಪ ಬಂಡಿಯವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಬೇಕು. ಕಳಕಪ್ಪ ಬಂಡಿಯವರೆ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದರು.

    ಮಲಪ್ರಭಾ ಯೋಜನೆ ಜಾರಿ:
    ಈ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿ ಬಗ್ಗೆ ಕೆ.ಸಿ. ರೆಡ್ಡಿ ಸಮಿತಿ ಮಾಡಿ ವರದಿ ಪಡೆದುಕೊಂಡರು. ನಾವು 18 ಟಿಎಂಸಿ ನೀರು ಕೇಳಿದ್ದೇವು. ಅವರು 12 ಟಿಎಂಸಿ ನೀರು ಬಳಕೆ ಮಾಡಬಹುದಾಗಿ ಹೇಳಿದರು. ನಮ್ಮ ಕಾಲದಲ್ಲಿ 18 ಟಿಎಂಸಿ ನೀರು ಬಳಸಿಕೊಳ್ಳಲು 850 ಕೋಟಿ ರೂ. ವೆಚ್ಚದಲ್ಲಿ ಎರಡು ಲಕ್ಷ ಎಕರೆ ಜಮೀನು ನೀರಾವರಿ ಮಾಡಲಾಯಿತು. ಡಂಬಳ್​ ಕೆರೆ ತುಂಬಿಸುವ ಕೆಲಸ ಮಾಡಿದ್ದೇನೆ. ನಾನು ಸಂಸದನಾಗಿ ಒಂದೂವರೆ ವರ್ಷದಲ್ಲಿ ಮಲಪ್ರಭಾ ಕಾಲುವೆಗೆ ನೀರು ಹರಿಸಿ ಕೆರೆ ತುಂಬಿಸುವ ಕೆಲಸ ಮಾಡಲಾಗುವುದು. ಕೊಪ್ಪಳದ ಗುಡ್ಡದ ಮಲ್ಲಾಪುರ ಯೋಜನೆಯಿಂದ ರೋಣ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
    ನಮಗೆ ಸುಳ್ಳು ಹೇಳುವ ಸಾಮರ್ಥ್ಯ ಇಲ್ಲ ಜಾತಿ ಜಾತಿ ನಡುವೆ ಕಂದಕ ಸೃಷ್ಟಿಸುವ ಸಾಮರ್ಥ್ಯ ಇಲ್ಲ. ಕಿತ್ತೂರ ಕರ್ನಾಟಕ ಅಂತ ಘೋಷಣೆ ಮಾಡಿದ್ದು ಬಸವರಾಜ ಬೊಮ್ಮಾಯಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಐದು ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು ನಾನು ಎಂದು ಹೇಳಿದರು.
    18 ಗಂಟೆ ಕೆಲಸ:
    ಲಾಲ ಬಹದ್ದೂರು ಶಾಸ್ತ್ರಿ ನಂತರ ದೇಶಕ್ಕಾಗಿ 18 ಗಂಟೆ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು. ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಅವರು ತಮ್ಮ ಸ್ವಂತ ತಾಯಿ ತೀರಿಕೊಂಡಾಗ ಕೇವಲ ಮೂರು ತಾಸಿನಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಿ, ದೇಶದ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಕೆಂಪು ಕೋಟೆಯನ್ನು ಸ್ವಚ್ಚ ಮಾಡಿದ ಸಫಾಯಿ ಕರ್ಮಚಾರಿಗಳ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು. ಕೊವಿಡ್​ ಸಂದರ್ಭದಲ್ಲಿ ಮೋದಿಯವರು ಎಲ್ಲರಿಗೂ ಮೂರು ಬಾರಿ ಉಚಿತ ಲಸಿಕೆ ಹಾಕಿಸಿದರು. ಎಲ್ಲರ ಮನೆಗಳಿಗೆ ನಳದ ಮೂಲಕ ನೀರು ತಲುಪಿಸಿದ್ದಾರೆ. ಅವರ ಋಣ ತೀರಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
    ಸಮಾವೇಶದಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್​ ನಾಯಕ ಬಂಡೆಪ್ಪ ಕಾಶಂಪೂರ್​, ಕಳಕಪ್ಪ ಬಂಡಿ, ನಿವೃತ್ತ ಐಎಎಸ್​ ಅಧಿಕಾರಿ ಸಿ. ಸೋಮಶೇಖರ್​, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts