More

    ಕಾಂಗ್ರೆಸ್ ಕೆಟ್ಟು ನಿಂತಿರುವ ಇಂಜಿನ್: ಯುಪಿ ಸಿಎಂ ಯೋಗಿ ಆದಿತ್ಯನಾಥ ಟೀಕೆ

    ಮಂಡ್ಯ: ದೇಶ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಆದರೆ ಕಾಂಗ್ರೆಸ್ ಕೆಟ್ಟು ಹೋಗಿರುವ ಇಂಜಿನ್. ಆ ಪಕ್ಷದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಇನ್ನೂ ಹೆಚ್ಚಾಗಲು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಪಾದಿಸಿದರು.
    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸಿಲ್ವರ್‌ಜ್ಯೂಬಿಲಿ ಉದ್ಯಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುತ್ತಿದೆ. ಯುವಕರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ತಂಡದ ನಾಯಕರು. ಅವರ ನೇತೃತ್ವದಲ್ಲಿ ನಡೆಯುವ ಡಬಲ್ ಇಂಜಿನ್ ಸರ್ಕಾರ ಬಲಿಷ್ಠವಾಗಬೇಕು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
    ಈಗಾಗಲೇ ವಿಶ್ವಗುರು ಸ್ಥಾನ ಅಲಂಕರಿಸಿರುವ ಭಾರತ ಪ್ರಪಂಚದಲ್ಲೇ ನಂ.1 ದೇಶವಾಗಿದೆ. ಭಾರತೀಯರು ಯಾವುದೇ ದೇಶಕ್ಕೆ ಹೋದರೂ ಅವರಿಗೂ ಒಳ್ಳೆಯ ಗೌರವ ಸಿಗುತ್ತಿದೆ. ಬ್ರಿಟಿಷರು 200 ವರ್ಷ ಭಾರತವನ್ನು ದೋಚಿದ್ದರು. ಅಂತಹ ಬ್ರಿಟಿಷರ ದೇಶವನ್ನೇ ಆರ್ಥಿಕ ಪ್ರಗತಿಯಲ್ಲಿ ಭಾರತ ಹಿಂದಿಕ್ಕಿದೆ. ಜಿ-20 ಶೃಂಗಸಭೆಯ ಆತಿಥ್ಯ ವಹಿಸುವ ಮಟ್ಟಕ್ಕೆ ಭಾರತ ಬೆಳೆದಿದೆ. ಇದೆಲ್ಲವೂ ಸಾಧ್ಯವಾದದ್ದು ಮೋದಿ ಎಂಬ ಶಕ್ತಿಯಿಂದ ಎಂದ ಅವರು, ಯುವಶಕ್ತಿಯ ರಾಷ್ಟ್ರ ಭಾರತ ಬುದ್ಧಿವಂತರಿಂದ ಕೂಡಿದೆ. ತಾಂತ್ರಿಕತೆ, ಐಟಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸ್ಥಾನದಲ್ಲಿದೆ. ಕರ್ನಾಟಕದ ಬೆಂಗಳೂರು ಐಟಿ ಹಬ್ ಆಗಿದೆ. ಇನ್ನೂ ಪ್ರಗತಿ ಸಾಧಿಸುವ ಸಾಮರ್ಥ್ಯ ನಮಗಿದೆ. 2013ಕ್ಕಿಂತ ಮೊದಲು ನಾವು ಬಹಳ ಹಿಂದಿದ್ದೆವು. ಆದರೀಗ ಭಾರತ ಸೂಪರ್‌ಪವರ್ ರಾಷ್ಟ್ರವಾಗಿದೆ ಎಂದರು.
    ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಯೋಜನೆಗಳ ಅನುಷ್ಠಾನ ಪಂಚವಾರ್ಷಿಕ ಯೋಜನೆಗಳಂತೆಯೇ ನಡೆಯುತ್ತಿತ್ತು. ಒಂದು ಯೋಜನೆ ಅನುಷ್ಠಾನಗೊಳ್ಳಲು 10-15 ವರ್ಷ ಬೇಕಾಗಿತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಕಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ರೈತರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ಗೌರವ ತಂದುಕೊಟ್ಟಿದ್ದೇವೆ. ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ತಾವು ಭೂಮಿಪೂಜೆ ನೆರವೇರಿಸಿದ ಯೋಜನೆಗಳನ್ನು ಅವರೇ ಉದ್ಘಾಟಿಸುತ್ತಿದ್ದಾರೆ. ಶಂಕುಸ್ಥಾಪನೆ ಸಂದರ್ಭದಲ್ಲೇ ಉದ್ಘಾಟನೆಯ ದಿನಾಂಕ ನಿಗದಿಯಾಗುತ್ತಿದೆ. ಇದಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ, ವಿಮಾನ ನಿಲ್ದಾಣಗಳು, ಐಟಿ, ರೈಲ್ವೆ ಯೋಜನೆಗಳು ಸಾಕ್ಷಿಯಾಗಿವೆ ಎಂದು ಹೇಳಿದರು.
    ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ನಮಗೂ ಒಂದು ಅವಕಾಶ ಕೊಡಿ. ಇದುವರೆಗೆ ಬೇರೆಯವರಿಗೆಲ್ಲಾ ಅವಕಾಶ ಕೊಟ್ಟಿದ್ದೀರಿ. ಆದರೆ, ಅವರು ಏನೂ ಮಾಡಲಿಲ್ಲ. ಅವರ ಕಾಲದಲ್ಲಿ ಹೆಚ್ಚು ಆತ್ಮಹತ್ಯೆಗಳು ನಡೆದಿವೆ. ಅಲ್ಲದೆ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿಯಲು ಕಾರಣ ನೀವು ನಂಬಿದವರು ಎಂದು ಪರೋಕ್ಷವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ನಮಗೆ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೆ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿಗಳು ಆಗಬೇಕು ಎಂಬುದನ್ನು ಪಟ್ಟಿ ಮಾಡಿ ಕೊಡಿ. ಅದೆಲ್ಲವನ್ನೂ ನಾವು ಈಡೇರಿಸುತ್ತೇವೆ. ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ಭಾರತದಲ್ಲಿ ಮಾತ್ರ ನಂಬರ್ ಒನ್ ಆಗಲು ಹೊರಟಿಲ್ಲ. ಇಡೀ ವಿಶ್ವದಲ್ಲೇ ನಂಬರ್ ಒನ್ ಆಗಲು ಹೊರಟಿದ್ದೇವೆ. ಆದ್ದರಿಂದ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಮೂಲಕ ಬಲ ತುಂಬಬೇಕು ಎಂದು ಕೋರಿದರು.
    ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸಂಸದರಾದ ಪ್ರತಾಪಸಿಂಹ, ಸುಮಲತಾ, ಉಸ್ತುವಾರಿ ಜಗದೀಶ್ ಹಿರೇಮನಿ, ಅಭ್ಯರ್ಥಿಗಳಾದ ಅಶೋಕ್ ಜಯರಾಂ, ಎಸ್.ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ಡಾ.ಎನ್.ಎಸ್.ಇಂದ್ರೇಶ್, ಜಿ. ಮುನಿರಾಜು, ಸುಧಾ ಶಿವರಾಮೇಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮಂಡ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts