More

    ಬಿಜೆಪಿ ಹೈವೋಲ್ಟೇಜ್ ಸಭೆಗಳು ಇಂದು; ಶಾಸಕಾಂಗ ಪಕ್ಷ, ಕೋರ್ ಕಮಿಟಿ ಸಭೆ

    ಬೆಳಗಾವಿ:
    ಬೆಳಗಾವಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ನಡುವೆ ಪ್ರತಿಪಕ್ಷ ಬಿಜೆಪಿಯ ಹೈವೋಲ್ಟೇಜ್ ಸಭೆಗಳು ನಗರ ಹೊರ ವಲಯದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸಂಜೆ ನಡೆಯಲಿದ್ದು, ಸದನದಲ್ಲಿ ಹೊರ ಬಿದ್ದ ಹುಳುಕುಗಳು ಹಾಗೂ ಆಂತರಿಕ ತೊಳಲಾಟಗಳಿದಾಗಿ ಮಹತ್ವ ಪಡೆದುಕೊಂಡಿದೆ.
    ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ಕಾರ್ಯಾರಂಭಿಸಿದ ನಂತರ ಪಕ್ಷದ ರಾಜ್ಯ ಕೋರ್ ಕಮಿಟಿ ಹಾಗೂ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿವೆ.
    ಜತೆಗೆ ಶಾಸಕ ಬಸನಗೌಡ ಯತ್ನಾಳ್ ಉತ್ತರಕರ್ನಾಟಕಕ್ಕೆ ಅನ್ಯಾಯ ವಿಷಯ ಮುಂದಿಟ್ಟು ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ವಿಧಾನಸಭೆಯಲ್ಲಿ ಧರಣಿ, ಸಭಾತ್ಯಾಗದ ಗೊಂದಲವು ಸದನದ ಹೊರಗೆ ಶಾಸಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿತ್ತು.
    ಸದನದಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ಈವರೆಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ಸೋಮವಾರದ ಧರಣಿಯು ಸರ್ಕಾರದ ಬದಲಿಗೆ ಪ್ರತಿಪಕ್ಷದ ತಾಳ್ಮೆಯನ್ನು ಪರೀಕ್ಷಿಸಿತು. ಸಭೆ ಆರ್ಡರ್ಲಿ ಇಲ್ಲದಿದ್ದರೂ ಸ್ಪೀಕರ್ ಕಲಾಪ ಮುಂದುವರಿಸಿ, ಐದು ವಿಧೇಯಕಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲು ಅವಕಾಶ ಕೊಟ್ಟಿದ್ದು ಬಿಜೆಪಿ ತಂತ್ರಗಾರಿಕೆ ಮರು ರೂಪಿಸುವಂತೆ ಮಾಡಿದೆ.
    ಎರಡೂ ಸಭೆಗಳ ನಂತರ ಉಳಿದಿರುವ ದಿನಗಳನ್ನು ಸರ್ಕಾರದ ವೈಫಲ್ಯ ಅನಾವರಣಗೊಳಿಸಿ, ಉತ್ತರಕರ್ನಾಟಕದ ಪರ ಕಾಳಜಿ ಮೆರೆಯುವ ಸವಾಲು ಮುಂದಿದೆ. ಅಲ್ಲದೆ ಜಂಟಿ ಸಮರಾಭ್ಯಾಸವು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲವೆಂಬ ಅಂಶವು ಮನವರಿಕೆಯಾಗಿದ್ದು, ಜೆಡಿಎಸ್ ಜತೆಗೆ ಚರ್ಚೆ ಕುರಿತು ಕೋರ್ ಕಮಿಟಿ ಸಭೆ ಅವಲೋಕಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಕೋಟ್…..
    ಬಿಜೆಪಿ ಶಾಸಕಾಂಗ ಪಕ್ಷ ಹಾಗೂ ಕೋರ್ ಕಮಿಟಿ ಸಭೆಗಳು ಮಂಗಳವಾರ ನಡೆಯಲಿವೆ. ನಮ್ಮಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಜೆಡಿಎಸ್ ಜತೆಗೂ ಚರ್ಚೆ ಮಾಡಬೇಕೆಂದಿದ್ದೇವೆ.

    • ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts