More

    ಮಾರ್ವಾಡಿ ಹಠಾವೋ ಅಭಿಯಾನಕ್ಕೆ ಬಿಜೆಪಿ ಖಂಡನೆ

    ಉಡುಪಿ: ದೇಶದ ನಾಗರಿಕನೊಬ್ಬ ಯಾವುದೇ ಪ್ರದೇಶಗಳಲ್ಲಿ ಜೀವನೋಪಾಯಕ್ಕೆ ವ್ಯವಹಾರ ನಡೆಸಲು ಅವಕಾಶವಿದೆ. ಉಡುಪಿ ಜಿಲ್ಲೆಯ ಸಾವಿರಾರು ಮಂದಿ ದೇಶ-ವಿದೇಶಗಳಲ್ಲಿ ಉದ್ದಿಮೆ, ವ್ಯವಹಾರ ನಡೆಸುತ್ತಿದ್ದಾರೆ. ವಾಸ್ತವ ಹೀಗಿರುವಾಗ ಹೊರ ರಾಜ್ಯದ ವ್ಯಾಪಾರಿಗಳಿಗೆ ಮಾರ್ವಾಡಿ ಹಠಾವೋ ಅಭಿಯಾನ ಮೂಲಕ ಕಿರುಕುಳ ನೀಡುತ್ತಿರುವ ಘಟನೆ ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಉಡುಪಿ ಹೋಟೆಲ್‌ಗಳು ದೇಶದಾದ್ಯಂತ ಅತ್ಯಂತ ಪ್ರಸಿದ್ಧಿ ಹೊಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾರ್ವಾಡಿ ಹಠಾವೋ ಎಂಬುದಾಗಿ ತೊಂದರೆ ಕೊಡುವ ಅನಪೇಕ್ಷಿತ ಹೇಳಿಕೆ ಮತ್ತು ಚಟುವಟಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ. ಜಿಲ್ಲೆಯ ಯಾವುದೇ ವ್ಯವಹಾರಸ್ಥರನ್ನು ಗುರಿಯಾಗಿಸಿ ನೀಡುವ ಅಸಂಬದ್ಧ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಜಿಲ್ಲೆಯ ಯಾವುದೇ ಉದ್ದಿಮೆದಾರರು ಅನಗತ್ಯ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಬಿಜೆಪಿ ಎಲ್ಲ ವರ್ಗದ ವ್ಯವಹಾರಸ್ಥರಿಗೂ ಬೆಂಬಲ ನೀಡಲಿದೆ. ಈ ಹಿಂದೆಯೂ ಉಡುಪಿಯಲ್ಲಿ ಬೇರೆ ಬೇರೆ ರಾಜ್ಯಗಳ ವ್ಯವಹಾರಸ್ಥರಿಗೆ ತೊಂದರೆಯುಂಟಾದ ಸಂದರ್ಭದಲ್ಲಿ ಬಿಜೆಪಿ ಧೈರ್ಯ ತುಂಬಿದೆ ಎಂದರು.

    ದೇಶದೆಲ್ಲೆಡೆ ವಿವಿಧ ಸಮುದಾಯಗಳ ಜನತೆ ವಿವಿಧ ರಾಜ್ಯಗಳಲ್ಲಿ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಸ್ವಾವಲಂಬನೆಯ ಚಿಂತನೆಯ ಜತೆಗೆ ರಾಷ್ಟ್ರದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಪ್ರಾದೇಶಿಕವಾರು ಕ್ಷುಲ್ಲಕ ಹೇಳಿಕೆ ದೇಶದ ಏಕತೆಗೆ ಮಾರಕ ಎಂದು ಹೇಳಿದರು.

    ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts